ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ಸೌರಶಕ್ತಿ ಮಾತ್ರ ಬಳಕೆಗೆ ಯೋಜನೆ

KannadaprabhaNewsNetwork | Published : Mar 30, 2024 1:16 AM

ಸಾರಾಂಶ

ಬದಲಾಗುತ್ತಿರುವ ಹವಾಮಾನ, ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಕರ್ನಾಟಕ ಹವಾಮಾನ ಬದಲಾವಣೆ ಇದೀಗ ಕ್ರಿಯಾ ಯೋಜನೆ ರೂಪಿಸಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜ್ಯದ ಸಾರಿಗೆ ಇಲಾಖೆ ಕಟ್ಟಡಗಳಲ್ಲಿ ವಿದ್ಯುತ್‌ ಬಳಕೆಯನ್ನು ಸ್ಥಗಿತಗೊಳಿಸಲು ಯೋಜನೆ ರೂಪಿಸಲಾಗುತ್ತಿದ್ದು, ರಾಜ್ಯದ ಹವಾಮಾನ ಬದಲಾವಣೆ ಮೇಲಿನ ಕ್ರಿಯಾಯೋಜನೆ ಅಡಿಯಲ್ಲಿ ಇಲಾಖೆಯ ಎಲ್ಲ ಕಟ್ಟಡಗಳಲ್ಲೂ ನವೀಕರಿಸಬಹುದಾದ ಇಂಧನ ಬಳಕೆ ಮಾಡಲು ನಿರ್ಧರಿಸಲಾಗಿದೆ.

ಬದಲಾಗುತ್ತಿರುವ ಹವಾಮಾನ, ತಾಪಮಾನ ಏರಿಕೆಗೆ ಕಡಿವಾಣ ಹಾಕಲು ಕರ್ನಾಟಕ ಹವಾಮಾನ ಬದಲಾವಣೆ ಮೇಲಿನ ಕ್ರಿಯಾ ಯೋಜನೆ ರೂಪಿಸಲಾಗಿದೆ. ಅದರಂತೆ ವಿವಿಧ ಇಲಾಖೆಗಳು ಹವಾಮಾನ ಬದಲಾವಣೆ ತಡೆಗೆ ಕೈಗೊಳ್ಳಬಹುದಾದ ಕ್ರಮಗಳ ಕುರಿತಂತೆ ತಿಳಿಸಲಾಗಿದೆ. ಅದರ ಅಡಿಯಲ್ಲಿಯೇ ಇದೀಗ ಸಾರಿಗೆ ಇಲಾಖೆ ಹವಾಮಾನ ವೈಪರೀತ್ಯ ನಿಯಂತ್ರಣಕ್ಕೆ ಕೊಡುಗೆ ನೀಡಲು ಹೊಸದೊಂದು ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಅದರಂತೆ ರಾಜ್ಯಾದ್ಯಂತ ಇರುವ ಸಾರಿಗೆ ಇಲಾಖೆಯ ಸ್ವಂತ ಕಟ್ಟಡಗಳಿಗೆ ನವೀಕರಿಸಬಹುದಾದ ಇಂಧನವಾದ ಸೋಲಾರ್‌ ವಿದ್ಯುತ್‌ ಉತ್ಪಾದನಾ ಪ್ಯಾನಲ್‌ಗಳ ಅಳವಡಿಕೆ ನಿರ್ಧರಿಸಲಾಗಿದೆ. ಅದಕ್ಕೆ ಯೋಜನೆ ರೂಪಿಸಲಾಗುತ್ತಿದ್ದು, ಮುಂದಿನ 2 ತಿಂಗಳಲ್ಲಿ ಯೋಜನೆಯ ನೀಲಿನಕ್ಷೆ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನ ಮಾಡಲು ಚರ್ಚಿಸಲಾಗಿದೆ.

ಸಾರಿಗೆ ಇಲಾಖೆಯು ಬೆಂಗಳೂರಿನ ಕೇಂದ್ರ ಕಚೇರಿ ಸೇರಿದಂತೆ ರಾಜ್ಯಾದ್ಯಂತ 71 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಹೊಂದಿದೆ. ಅದರಲ್ಲಿ 45 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಸೇರಿದಂತೆ ಇಲಾಖೆಗೆ ಸಂಬಂಧಿಸಿದ ಇನ್ನಿತರ ಕಚೇರಿಗಳು ಮಾತ್ರ ಸ್ವಂತ ಕಟ್ಟಡದಲ್ಲಿವೆ. ಆ ಕಟ್ಟಡಗಳಲ್ಲಿ ಮೊದಲಿಗೆ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ಅದರಿಂದ ಉತ್ಪಾದನೆಯಾಗುವ ವಿದ್ಯುತ್‌ ಬಳಸುವ ಯೋಜನೆ ರೂಪಿಸಲಾಗುತ್ತಿದೆ.

ಹವಾಮಾನ ಬದಲಾವಣೆ ಮೇಲಿನ ಕ್ರಿಯಾಯೋಜನೆ ಅಡಿಯಲ್ಲಿ ಸಾರಿಗೆ ಇಲಾಖೆ ಒಡೆತನದ ಕಟ್ಟಡಗಳಲ್ಲಿ ಸೋಲಾರ್‌ ಪ್ಯಾನೆಲ್‌ ಅಳವಡಿಸಿ ನವೀಕರಿಸಬಹುದಾದ ಇಂಧನ ಬಳಕೆಗೆ ನಿರ್ಧರಿಸಲಾಗಿದೆ. ಅದಕ್ಕೆ ಸಂಬಂಧಿಸಿದಂತೆ ಯೋಜನೆ ರೂಪಿಸಲಾಗುತ್ತಿದ್ದು, ಇನ್ನು 2 ತಿಂಗಳಲ್ಲಿ ನೀಲಿನಕ್ಷೆ ರೂಪಿಸಿ ಸರ್ಕಾರದಿಂದ ಅನುಮೋದನೆ ಪಡೆದು ಅನುಷ್ಠಾನಗೊಳಿಸಲಾಗುವುದು ಎಂದು ಅಪರ ಸಾರಿಗೆ ಆಯುಕ್ತ (ಪರಿಸರ ಮತ್ತು ಇ-ಆಡಳಿತ) ಜ್ಞಾನೇಂದ್ರ ಕುಮಾರ್‌ ತಿಳಿಸಿದರು.

Share this article