ಬಕ್ರೀದ್ ಹಬ್ಬದ ಹಿನ್ನೆಲೆಯಲ್ಲಿ ತಾಪಂಯಲ್ಲಿ ಟಾಸ್ಕ್ ಪೋರ್ಸ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜಿಲ್ಲಾಧಿಕಾರಿಗಳ ಆದೇಶದಂತೆ ಜೂ. 16 ಮತ್ತು ಜೂ.17 ರಂದು ನಡೆಯಲಿರುವ ಬಕ್ರೀದ್ ಹಬ್ಬದ ಸಮಯದಲ್ಲಿ ದನ, ಎಮ್ಮೆ, ಕರು ಮತ್ತು ಒಂಟೆಗಳನ್ನು ಅಕ್ರಮವಾಗಿ ಸಾಗಾಣಿಕೆ ಮತ್ತು ವಧೆ ಮಾಡುವು ದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಸಿಪಿಐ ಗುರುದತ್ ಕಾಮತ್ ತಿಳಿಸಿದರು.
ಬುಧವಾರ ತಾಪಂಯಲ್ಲಿ ಬಕ್ರೀದ್ ಹಬ್ಬದ ಹಿನ್ನೆಲೆ ನಡೆದ ಟಾಸ್ಕ್ ಪೋರ್ಸ್ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಾದ್ಯಂತ ವಿವಿಧ ಇಲಾಖೆಗಳ ಅಧಿಕಾರಿಗಳನ್ನೊಳಗೊಂಡ ತಪಾಸಣಾ ತಂಡಗಳನ್ನು ರಚಿಸ ಲಾಗಿದೆ. ಈ ನಿಟ್ಟಿನಲ್ಲಿ ಪಪಂ. ತಾಪಂ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿಕೊಂಡು ಕಾರ್ಯನಿರ್ವಹಿಸಲಾಗುವುದು. ಬೇರೆ ಇಲಾಖೆ ಅಧಿಕಾರಿಗಳಿಗೆ ಪ್ರಾಣಿ ವಧೆ ಬಗ್ಗೆ ಮಾಹಿತಿ ಬಂದಲ್ಲಿ ನಮಗೆ ತಿಳಿಸಬೇಕು. ದಾಳಿ ವೇಳೆ ಸ್ಥಳದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸೋಣ. ಎಲ್ಲರೂ ಒಗ್ಗೂಡಿ ಈ ಕಾರ್ಯ ಮಾಡೋಣ ಎಂದು ಇಲಾಖಾ ಧಿಕಾರಿಗಳಿಗೆ ಕರೆ ನೀಡಿದರು.ಪಶು ವೈದ್ಯ ಇಲಾಖೆ ವೈದ್ಯಾಧಿಕಾರಿ ಡಾ.ಶಿವಕುಮಾರ್ ಮಾತನಾಡಿ, ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಜಾಸ್ತಿ ಇದೆ. ಅಂತಹ ದನಗಳ ಮಾಲೀಕರಿಗೆ ತಮ್ಮ ದನಗಳನ್ನು ಮನೆಯಲ್ಲಿ ಕಟ್ಟಿ ಹಾಕಿಕೊಳ್ಳ ಬೇಕೆಂದು ತಿಳಿಸಬೇಕು. ಈ ಬಗ್ಗೆ ಪ್ರಚಾರ ಮಾಡಬೇಕು. ಆದರೂ ಬೀಡಾಡಿ ದನಗಳು ರಸ್ತೆಯಲ್ಲಿ ಕಂಡು ಬಂದಲ್ಲಿ ಯಾವುದೇ ಮುನ್ಸೂಚನೆ ನೀಡದೆ ಗೋಶಾಲೆಗೆ ರವಾನಿಸಬೇಕು. ಗೋಶಾಲೆಗೆ ರವಾನಿಸಿದ ನಂತರ ದನದ ಮಾಲೀಕರು ಬಂದಾಗ ಅಂತವರಿಗೆ ದಂಡ ವಿಧಿಸುವ ಕ್ರಮವಾಗಬೇಕು. ಈಗ ಕೃಷಿ ಚಟುವಟಿಕೆ ನಡೆಯುವ ಸಮಯವಾಗಿದೆ. ಭೂ ಉಳುಮೆಗೆಂದು ಎತ್ತುಗಳನ್ನು ಒಂದು ಊರಿನಿಂದ ಇನ್ನೊಂದು ಊರಿಗೆ, ಗ್ರಾಮದಿಂದ ಗ್ರಾಮಕ್ಕೆ ಕೊಂಡೊಯ್ಯುತ್ತಾರೆ. ಇಂತಹ ಪ್ರಕರಣಗಳಿಗೆ ಸೂಕ್ತ ದಾಖಲಾತಿ ಒದಗಿಸಿ ಅನುಮತಿ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು.ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡಾಡಿ ದನಗಳನ್ನು ರಸ್ತೆಗೆ ಬಿಡದೆ ಕಟ್ಟಿ ಹಾಕುವಂತೆ ವ್ಯಾಪಕ ಪ್ರಚಾರ ಪಡಿಸಲಾಗುವುದು. ಬಿಡಾಡಿ ದನಗಳು ಇದ್ದಲ್ಲಿ ಗೋಶಾಲೆಗೆ ರವಾನಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ಪಿಎಸ್ಐ ಬಿ.ಎಸ್.ನಿರಂಜನ್‌ಗೌಡ, ತಾಪಂ ನರೇಗಾ ಸಹಾಯಕ ನಿರ್ದೇಶಕ ಎನ್.ಎಲ್. ಮನೀಶ ಇದ್ದರು.