ಗುಂಡ್ಲುಪೇಟೆಯಲ್ಲಿ ರಾಜಧನ ವಂಚಿಸಿ ಕಲ್ಲು, ಕ್ರಷರ್‌ ಉತ್ಪನ್ನ ಸಾಗಣೆ

KannadaprabhaNewsNetwork |  
Published : Oct 08, 2024, 01:02 AM IST
ʼರಾಜಧನ ವಂಚಿಸಿ ಕೇರಳಕ್ಕೆ ಕಲ್ಲು,ಕ್ರಸರ್‌ ಉತ್ಪನ್ನ ಹೋಗ್ತಿದೆ? | Kannada Prabha

ಸಾರಾಂಶ

ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ರಾಯಲ್ಟಿ, ಎಂಡಿಪಿ ವಂಚಿಸಿ ʼಕ್ರಷರ್‌ಗಳ ಉತ್ಪನ್ನʼ ಹಾಗೂ ಕ್ವಾರಿಯ ʼರಾ ಮೆಟಿರಿಯಲ್‌ʼ ನೆರೆಯ ಕೇರಳಕ್ಕೆ ರಾಯಲ್ಟಿ, ಎಂಡಿಪಿ ವಂಚಿಸಿ ಸಾವಿರಾರು ಟನ್‌ ಟಿಪ್ಪರ್‌ಗಳ ಮೂಲಕ ಸಾಗಾಣಿಕೆ ಆಗುತ್ತಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ರಾಯಲ್ಟಿ, ಎಂಡಿಪಿ ವಂಚಿಸಿ ʼಕ್ರಷರ್‌ಗಳ ಉತ್ಪನ್ನʼ ಹಾಗೂ ಕ್ವಾರಿಯ ʼರಾ ಮೆಟಿರಿಯಲ್‌ʼ ನೆರೆಯ ಕೇರಳಕ್ಕೆ ರಾಯಲ್ಟಿ, ಎಂಡಿಪಿ ವಂಚಿಸಿ ಸಾವಿರಾರು ಟನ್‌ ಟಿಪ್ಪರ್‌ಗಳ ಮೂಲಕ ಸಾಗಾಣಿಕೆ ಆಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದೊಳಗೆ ಹಾದು ಹೋಗುವ ಹೆದ್ದಾರಿಯಲ್ಲಿ ಅರಣ್ಯ, ಪೊಲೀಸ್‌ ಇಲಾಖೆ ಚೆಕ್‌ ಪೋಸ್ಟ್‌ ಸಿಬ್ಬಂದಿ ಸಹಕಾರದಲ್ಲಿ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ತಾಲೂಕಿನ ಪ್ರಾಕೃತಿಕ ಸಂಪತ್ತು ರಾಯಲ್ಟಿ ಹಾಗೂ ಎಂಡಿಪಿ ವಂಚಿಸಿ ಬಿಳಿ ಮತ್ತು ಕರಿ ಕಲ್ಲಿನ ಉತ್ಪನ್ನಗಳು ಸಾಗಿಸುತ್ತಿದ್ದಾರೆ. ೫೦ ಟನ್‌ ಸಾಮರ್ಥ್ಯದ ದೊಡ್ಡ ದೊಡ್ಡ ಟಿಪ್ಪರ್‌ಗಳಲ್ಲಿ ಕೇವಲ ೧೫ ಟನ್‌ ರಾಯಲ್ಟಿ ಅಥವಾ ಎಂಡಿಪಿಯೊಂದಿಗೆ ಕರಿ ಕಲ್ಲಿನ ಎಂ.ಸ್ಯಾಂಡ್‌, ಚಿಪ್ಸ್‌,೧೨ ಎಂಎಂ ಜಲ್ಲಿ ಹಾಗೂ ಕರಿ ಕಲ್ಲು (ಬೋಡ್ರೇಸ್‌) ಹೊರ ರಾಜ್ಯಕ್ಕೆ ದಿನನಿತ್ಯ ಸುಮಾರು ೩೫ಕ್ಕೂ ಹೆಚ್ಚು ಟಿಪ್ಪರ್ (‌೧೮ ವೀಲ್‌, ೧೬ ವೀಲ್‌, ೧೨ ವೀಲ್‌) ಸಂಚರಿಸುತ್ತಿವೆ.

ತಾಲೂಕಿನ ಹಂಗಳ, ತೆರಕಣಾಂಬಿ ಬಳಿಯ ಕರಿ ಕಲ್ಲು ಕ್ವಾರಿಯಲ್ಲಿ ವೇಸ್ಟ್‌ ಅಂತ ಬಿಡಲಾಗಿದ್ದ ಕರಿ ಕಲ್ಲನ್ನು ಗುಂಡ್ಲುಪೇಟೆ ಬಳಿಯ ಎರಡು ಕ್ರಷರ್‌ನಲ್ಲಿ ವೇಸ್ಟ್‌ ಎನ್ನುತ್ತಿದ್ದ ಕರಿ ಕಲ್ಲನ್ನು ಎಂ.ಸ್ಯಾಂಡ್‌, ಚಿಪ್ಸು,೧೨ ಎಂಎಂ ಜಲ್ಲಿ ಪುಡಿ ಮಾಡುತ್ತಿದ್ದಾರೆ. ನಂತರ ೧೨,೧೬,೧೮ ವೀಲ್‌ ಟಿಪ್ಪರ್‌ಗಳಲ್ಲಿ ಬಾಡಿ ಮಟ್ಟಕ್ಕೆ ಕರಿ ಕಲ್ಲಿನ ಎಂ.ಸ್ಯಾಂಡ್‌, ಜಲ್ಲಿ, ಚಿಪ್ಸು ತುಂಬಿ, ಟಿಪ್ಪರ್‌ ಚಕ್ರದ ಸಾಮರ್ಥ್ಯದ ಅರ್ಧಕ್ಕಿಂತಲೂ ಕಡಿಮೆ ರಾಯಲ್ಟಿ/ಎಂಡಿಪಿ ಹಾಕಿಕೊಂಡು ಕೇರಳಕ್ಕೆ ರಾಜಾರೋಷವಾಗಿ ಸಾಗಿಸುತ್ತಿದ್ದಾರೆ. ಕೇರಳಕ್ಕೆ ತೆರಳುವ ಟಿಪ್ಪರ್‌ಗೆ ಒಂದು ಟ್ರಿಪ್‌ಗೆ ರಾಯಲ್ಟಿ/ಎಂಡಿಪಿ ಪಡೆಯುತ್ತಾರೆ. ಎರಡು ಮೂರು ಟ್ರಿಪ್‌ ಕೇರಳಕ್ಕೆ ಹೋದರೂ ಹಳೆಯ ರಾಯಲ್ಟಿ/ಎಂಡಿಪಿಯಲ್ಲಿ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದಾರೆಂಬುದು ಕೇಳಿ ಬಂದಿದೆ.

ಅಧಿಕಾರಿಗಳು ಶಾಮೀಲು?ತಾಲೂಕಿನ ಕರಿ ಮತ್ತು ಬಳಿ ಕಲ್ಲಿನ ಉತ್ಪನ್ನಗಳನ್ನು ಕೇರಳಕ್ಕೆ ಸಾಗಿಸುವಾಗ ತಾಲೂಕಿನ ಕೆಲ ಅಧಿಕಾರಿಗಳು ಶಾಮೀಲಾಗಿರುವುದೇ ಈ ದಂಧೆ ಸದ್ದಿಲ್ಲದೆ ವ್ಯಾಪಕವಾಗಿ ನಡೆಯಲು ಕಾರಣವಾಗಿದೆ ಎಂದು ಬಿಳಿ ಕಲ್ಲು ಕ್ವಾರಿಯ ಲೀಸ್‌ದಾರನೊಬ್ಬ ಹೇಳಿದ್ದಾರೆ.

ಕೇಳೋರ್ವೆ ಇಲ್ಲ?:

ತಾಲೂಕಿನ ಪ್ರಾಕೃತಿಕ ಸಂಪತ್ತು ರಾಜಧನ ವಂಚಿಸಿ ನೆರೆಯ ಕೇರಳ ರಾಜ್ಯಕ್ಕೆ ದಿನನಿತ್ಯ ಲೂಟಿಯಾಗುತ್ತಿದ್ದರೂ ನೆಲ,ಜಲ,ಭಾಷೆ ಬಗ್ಗೆ ಉದ್ದುದ್ದ ಭಾಷಣ ಬಿಗಿಯುವ ಬಹುತೇಕ ಹೋರಾಟಗಾರರು ಈ ವಿಚಾರದಲ್ಲಿ ಬಾಯಿ ಬಿಚ್ಚುತ್ತಿಲ್ಲವೇಕೆ ಎಂದು ನಾಗರೀಕರು ಪ್ರಶ್ನಿಸಿದ್ದಾರೆ.

ಕಾಟಾಚಾರದ ತಪಾಸಣೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಅರಣ್ಯ ಹಾಗೂ ಪೊಲೀಸ್‌ ಇಲಾಖೆಯ ತಪಾಸಣೆ ಕೇಂದ್ರಗಳಿವೆ ಆದರೆ ತಪಾಸಣೆ ಕಾಟಾಚಾರಕ್ಕೆ ನಡೆಯುತ್ತಿದ್ದು ರಾಯಲ್ಟಿ/ಎಂಡಿಪಿ ವಂಚನೆ ಪತ್ತೆ ಮಾಡಬೇಕಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಚೆಕ್‌ಪೋಸ್ಟ್‌ಗಳ ತಿರುಗಿಯೂ ನೋಡುತ್ತಿಲ್ಲ ಎನ್ನಲಾಗಿದೆ. ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ರ ಹೆಸರೇಳಿಕೊಂಡು ಕೇರಳಕ್ಕೆ ರಾಜಧನ ವಂಚಿಸಿ ಸಾಗಿಸುವ ದಂಧೆಗೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದ್ದಾರೆ.

ಜನರ ಆಕ್ರೋಶ: ಪ್ರಾಕೃತಿಕ ಸಂಪತ್ತು ಲೂಟಿ ತಾಲೂಕಿನಲ್ಲಿ ಇತ್ತೀಚನ ದಿನಗಲ್ಲಿ ಹೆಚ್ಚಾಗಿದೆ. ಕೇರಳ ರಾಜ್ಯಕ್ಕೆ ಕರಿ/ಬಿಳಿ ಕಲ್ಲಿನ ಉತ್ಪನ್ನಗಳು ರಾಯಲ್ಟಿ/ಎಂಡಿಪಿ ವಂಚಿಸಿ ರಾಜಾರೋಷವಾಗಿ ಹೋಗುತ್ತಿದೆ.ಇದನ್ನು ತಡೆಯಬೇಕಾದ ಅಧಿಕಾರಿಗಳು ಮೌನ ವಹಿಸಿದ್ದಾರೆ. ಕೂಡಲೇ ರಾಜಧನ ವಂಚಿಸಿ ಕೇರಳ ರಾಜ್ಯಕ್ಕೆ ತಾಲೂಕಿನ ಪ್ರಾಕೃತಿಕ ಸಂಪತ್ತು ತೆರಳುವುದನ್ನು ನಿಲ್ಲಿಸಬೇಕು.ಇಲ್ಲದಿದ್ದಲ್ಲಿ ಮದ್ದೂರು ತಪಾಸಣೆ ಕೇಂದ್ರದ ಬಳಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಎಚ್ಚರಿಸಿದ್ದಾರೆ.

ಬೆಳ್ಳಂಬೆಳಗ್ಗೆ, ರಾತ್ರಿ ವೇಳೆ ಸಾಗಾಟ

ರಾತ್ರಿ ಕ್ರಸರ್‌ ಗಳಲ್ಲಿ ಎಂ.ಸ್ಯಾಂಡ್‌, ಜಲ್ಲಿ ತುಂಬಿಕೊಂಡ ಟಿಪ್ಪರ್‌ಗಳು ಬೆಳ್ಳಂಬೆಳಗ್ಗೆ ಹಾಗೂ ರಾತ್ರಿ ಸಮಯದಲ್ಲಿ ಅರಣ್ಯ ಹಾಗೂ ಪೊಲೀಸ್‌ ಚೆಕ್‌ಪೋಸ್ಟ್‌ ಸಿಬ್ಬಂದಿಗೆ ಕೈ ಬೆಚ್ಚನೆ ಮಾಡಿ ಹತ್ತಾರು ಟಿಪ್ಪರ್‌ಗಳು ಕೇರಳದತ್ತ ತೆರಳುತ್ತಿವೆ ಎಂದು ಚನ್ನಮಲ್ಲೀಪುರ ಗ್ರಾಮದ ಯುವಕನೊಬ್ಬ ಹೇಳಿದ್ದಾರೆ. ಪೊಲೀಸ್‌ ಹಾಗೂ ಅರಣ್ಯ ಇಲಾಖೆ ಚೆಕ್‌ಪೋಸ್ಟ್‌ ಸಿಬ್ಬಂದಿ ಕೇರಳಕ್ಕೆ ತೆರಳುವ ಟಿಪ್ಪರ್‌ನಲ್ಲಿ ಎಷ್ಟು ಟನ್‌ ಇದೆ, ಎಷ್ಟು ಟನ್‌ ರಾಯಲ್ಟಿ, ಎಂಡಿಪಿ ಇದೆ ಎಂದು ಕೇಳುತ್ತಿಲ್ಲ. ಬದಲಿಗೆ ಒಂದೆ ಎಂಡಿಪಿ ಹಾಗೂ ರಾಯಲ್ಟಿ ಚೀಟಿಯಲ್ಲಿ ನಾಲ್ಕೈದು ಟ್ರಿಪ್‌ ಕಲ್ಲು ಹಾಗೂ ಕ್ರಸರ್‌ ಉತ್ಪನ್ನಗಳು ರಾಜ್ಯ ಸರ್ಕಾರಕ್ಕೆ ರಾಜಧನ ವಂಚಿಸಿ ತೆರಳುತ್ತಿವೆ ಎಂಬ ದೂರಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವ್ಯಕ್ತಿಯ ಅಕ್ರಮ ಬಂಧನದಲ್ಲಿಟ್ಟಿದ್ದಕ್ಕೆ ಸರ್ಕಾರಕ್ಕೆ ದಂಡ!
ಯಶವಂತಪುರ ಮೆಟ್ರೋ ಪ್ರವೇಶದ್ವಾರ ಸ್ಥಳಾಂತರ