ಭಾರಿ ಮಳೆ ಹಿನ್ನೆಲೆ ಸಾಗಾಣಿಕೆ ಸಮಸ್ಯೆ- ವರ್ತಕರಿಂದ ಬೇಡಿಕೆ ಇಳಿಕೆ : ದಿಢೀರ್ ಟೊಮೆಟೋ ದರ ಕುಸಿತ

KannadaprabhaNewsNetwork |  
Published : Aug 05, 2024, 12:34 AM ISTUpdated : Aug 05, 2024, 11:56 AM IST
೪ಕೆಎಲ್‌ಆರ್-೧೨ಕೋಲಾರದ ಎಪಿಎಂಸಿ ಮಾರುಕಟ್ಟೆಯ ಚಿತ್ರ. | Kannada Prabha

ಸಾರಾಂಶ

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಇದಲ್ಲದೇ, ನವದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲೂ ಮಳೆ ಅಬ್ಬರಿಸುತ್ತಿದೆ. ಹೀಗಾಗಿ, ಆ ಭಾಗದ ವರ್ತಕರಿಂದ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ

 ಕೋಲಾರ : ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಮಳೆ ಅಬ್ಬರ, ಭೂಕುಸಿತ ಕಾರಣ ಟೊಮೆಟೋ ಸಾಗಾಟಕ್ಕೆ ಅಡಚಣೆ ಉಂಟಾಗಿದ್ದು, ಧಾರಣೆಯಲ್ಲಿ ಭಾರಿ ಕುಸಿತ ಕಂಡಿದೆ.ಕೋಲಾರದ ಚಿಲ್ಲರೆ ಮಾರುಕಟ್ಟೆಯಲ್ಲಿ ೧೫ ದಿನಗಳ ಹಿಂದೆ ಕೆ.ಜಿಗೆ ೬೦ ರೂ.ವರೆಗೆ ಇದ್ದ ದರ ದಿಢೀರ್ ತಗ್ಗಿದೆ. ಈಗ ೫೦ ರೂ.ಗೆ ಎರಡು ಕೆ.ಜಿ ಟೊಮೆಟೊ ಬಿಕರಿಯಾಗುತ್ತಿದೆ.ಮಾರುಕಟ್ಟೆಯಲ್ಲೇ ಉಳಿದ ಟೋಮೆಟೋ

ಕರಾವಳಿ, ಮಲೆನಾಡು, ಉತ್ತರ ಕರ್ನಾಟಕ ಹಾಗೂ ಹಳೆ ಮೈಸೂರು ಭಾಗದ ಕೆಲವೆಡೆ ಭಾರಿ ಮಳೆಯಾಗುತ್ತಿದೆ. ಇದಲ್ಲದೇ, ನವದೆಹಲಿ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲೂ ಮಳೆ ಅಬ್ಬರಿಸುತ್ತಿದೆ. ಹೀಗಾಗಿ, ಆ ಭಾಗದ ವರ್ತಕರಿಂದ ಟೊಮೆಟೊಗೆ ಬೇಡಿಕೆ ಕಡಿಮೆಯಾಗಿದೆ. ಮೈಸೂರು ಎಪಿಎಂಸಿಯಿಂದ ಕೇರಳಕ್ಕೆ ಟೊಮೆಟೊ ಸಾಗಾಟ ವಯನಾಡ್ ಭೂಕುಸಿತ ಕಾರಣ ಈಗ ಬಂದ್ ಆಗಿದೆ. ಹೀಗಾಗಿ, ಮೈಸೂರಿನಿಂದ ಬೆಂಗಳೂರು ಮಾರುಕಟ್ಟೆಗೆ ಸಾಗಿಸಲಾಗುತ್ತಿದ್ದು, ಕೋಲಾರದಿಂದ ಪೂರೈಕೆ ಆಗುತ್ತಿದ್ದ ಟೊಮೆಟೊ ಇಲ್ಲೇ ಉಳಿಯುತ್ತಿದೆ.

ಟೊಮೆಟೊ ಮಾರಾಟದಲ್ಲಿ ಏಷ್ಯಾದಲ್ಲೇ ಎರಡನೇ ಅತಿದೊಡ್ಡ ಮಾರುಕಟ್ಟೆ ಎನಿಸಿರುವ ಕೋಲಾರದ ಎಪಿಎಂಸಿಯಿಂದ ಬೆಂಗಳೂರು ಅಲ್ಲದೇ, ಸುಮಾರು15  ರಿಂದ 20 ರಾಜ್ಯಗಳಿಗೆ ಸಾಗಣೆ ಮಾಡಲಾಗುತ್ತದೆ. ಈಗ ಮಳೆ ಕಾರಣ ಖರೀದಿಗೆ ಆ ಭಾಗದ ವರ್ತಕರು ಹಿಂದೇಟು ಹಾಕುತ್ತಿದ್ದಾರೆ. ಲಾರಿಯಲ್ಲಿ ಕೊಂಡೊಯ್ದರೂ ಮಾರಾಟವಾಗದೆ ಟೊಮೆಟೊ ಹಾಳಾಗುತ್ತಿದೆ. ಜೊತೆಗೆ ವಿವಿಧೆಡೆ ಗುಡ್ಡ ಕುಸಿತ, ರಸ್ತೆ ಬಂದ್ ಕಾರಣ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿರುವುದೂ ಸಮಸ್ಯೆ ತಂದೊಡ್ಡಿದೆ.ಪ್ರತಿದಿನ 2 ಲಕ್ಷ ಬಾಕ್ಸ್‌ ಆವಕ

ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ನಾಟಿ ಮಾಡಿದ್ದ ಟೊಮೆಟೊ ಈಗ ಫಸಲು ಕೊಡುತ್ತಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಗೆ 15  ದಿನಗಳಿಂದ ನಿತ್ಯ 2 ಲಕ್ಷಕ್ಕೂ ಅಧಿಕ ಬಾಕ್ಸ್ ಆವಕವಾಗುತ್ತಿದೆ. ಚಿತ್ರದುರ್ಗದ ಚಳ್ಳಕೆರೆ ಸೇರಿದಂತೆ ವಿವಿಧೆಡೆಯ ಟೊಮೆಟೊ ಇಲ್ಲಿನ ಮಾರುಕಟ್ಟೆಗೆ ಬರುತ್ತಿದೆ. ಹರಾಜಿನಲ್ಲಿ 15 ಕೆ.ಜಿ ತೂಕದ ಟೊಮೆಟೊ ಬಾಕ್ಸ್‌ವೊಂದಕ್ಕೆ ೧೫ ದಿನಗಳ ಹಿಂದೆ 1100  ರೂ.ವರೆಗೆ ಬೆಲೆ ಇತ್ತು. ಈಗ ಅದು ೫೦ರಿಂದ ೪೦೦ ರೂ.ಗೆ ಇಳಿದಿದೆ. ಇದರಿಂದ ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇರಳದ ವಯನಾಡ್ ಭೂಕುಸಿತ ಕಾರಣ ಕೇರಳಕ್ಕೆ ಟೊಮೆಟೊ ಸಾಗಾಟ ಮಾಡುತ್ತಿಲ್ಲ. ಜತೆಗೆ ಮಹಾರಾಷ್ಟ್ರದಲ್ಲೂ ಈಗ ಟೊಮೆಟೊವನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿದ್ದು, ಉತ್ತರ ಭಾರತಕ್ಕೆ ಸಾಗಿಸುತ್ತಿದ್ದಾರೆ. ಹೀಗಾಗಿ, ಇಲ್ಲಿನ ಟೊಮೆಟೊಗೆ ಬೇಡಿಕೆ ತಗ್ಗಿದೆ’ ಎಂದು ಕೋಲಾರ ಎಪಿಎಂಸಿ ಕಾರ್ಯದರ್ಶಿ ಕಿರಣ್ ತಿಳಿಸಿದರು.ಆರು ಸಾವಿರ ಹೆಕ್ಟೇರ್‌ನಲ್ಲಿ ಬೆಳೆ

ಕೋಲಾರ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಕಳೆದ ಬಾರಿ ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮೆಟೊ ಬೆಳೆದಿದ್ದರು. ಈ ಬಾರಿಯೂ ಅಷ್ಟೇ ಪ್ರಮಾಣದಲ್ಲಿ ಬೆಳೆದಿದ್ದಾರೆ. ಆದರೆ, ಎಲೆ ಮುಟುರು ರೋಗ (ಬಿಳಿ ನೊಣ ಬಾಧೆ) ಹಾಗೂ ವಿವಿಧ ರೋಗ ಬಾಧೆ ಕಾರಣ ಟೊಮೆಟೊ ಗುಣಮಟ್ಟವೂ ತಗ್ಗಿದೆ. ಬಾಳಿಕೆಯ ಅವಧಿಯೂ ಕಡಿಮೆಯಾಗಿದೆ ಎಂದು ಹೇಳುತ್ತಾರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು. ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಇತರೆ ಮಾರುಕಟ್ಟೆಗಳಿಗಿಂತಲೂ ಮೂಲಭೂತ ಸೌಕರ್ಯ ಹಾಗೂ ಟೊಮೆಟೋ ಹೊತ್ತು ತರುವ ವಾಹನಗಳಿಂದ ಪಾರ್ಕಿಂಗ್ ವ್ಯವಸ್ಥೆಯಿರುವುದರಿಂದ ಕೋಲಾರ ಚಿಕ್ಕಬಳ್ಳಾಪುರ ಅಲ್ಲದೆ ಹೊರರಾಜ್ಯಗಳಿಂದ ಟೊಮೆಟೊ ಹಣ್ಣುಗಳು ಸರಬರಾಜು ಆಗುತ್ತಿದೆ, ಮಾಮೂಲಿ ಮಾರುಕಟ್ಟೆಗೆ ಪ್ರತಿದಿನವು ೨೦೦ರಿಂದ ೨೫೦ ವಾಹನಗಳು ಬರುತ್ತಿದ್ದವು ಆದರೆ ಕಳೆದ ನಾಲ್ಕೈದು ದಿನಗಳಿಂದ ಮಾರುಕಟ್ಟೆಗೆ ಟೊಮೆಟೋ ಪೂರೈಸುತ್ತಿರುವ ವಾಹನ ಸಂಖ್ಯೆ ಅಧಿಕವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ