ವ್ಯಕ್ತಿತ್ವ ವಿಕಾಸಗೊಳಿಸುವುದಕ್ಕಾಗಿ ಪ್ರವಾಸ ಅಗತ್ಯ

KannadaprabhaNewsNetwork |  
Published : Jun 09, 2025, 11:51 PM IST
ಫೋಟೋ. 8hsd2: ಸಾಣೇಹಳ್ಳಿಯ ಎಸ್ ಎಸ್ ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್ ಎಂ ಸುರೇಶ್ ಅವರನ್ನು ಅಭಿನಂಡಿಸಲಾಯಿತು  | Kannada Prabha

ಸಾರಾಂಶ

ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಸುರೇಶ್ ಅವರನ್ನು ಅಭಿನಂಡಿಸಲಾಯಿತು.

ಎಸ್.ಎಂ.ಸುರೇಶ್ ಅವರ ಅಭಿನಂದನಾ ಸಮಾರಂಭದಲ್ಲಿ ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಅಭಿಮತಕನ್ನಡಪ್ರಭ ವಾರ್ತೆ ಹೊಸದುರ್ಗ

ಪ್ರವಾಸಕ್ಕೆ ಹೋಗುವುದು ವ್ಯಕ್ತಿಗತ ಪ್ರತಿಷ್ಠೆಯನ್ನು ಮೆರೆಯುವುದಕ್ಕಲ್ಲ. ವ್ಯಕ್ತಿತ್ವವನ್ನು ವಿಕಾಸಗೊಳಿಸುವುದಕ್ಕಾಗಿ ಎಂದು ಸಾಣೇಹಳ್ಳಿ ಪಂಡಿತರಾಧ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಸಾಣೇಹಳ್ಳಿಯ ಎಸ್.ಎಸ್.ರಂಗಮಂದಿರದಲ್ಲಿ ನಡೆದ ರಾಷ್ಟ್ರೀಯ ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಎಂ.ಸುರೇಶ್ ಅವರ ಅಭಿನಂದನಾ ಸಮಾರಂಭದ ದಿವ್ಯ ಸಾನ್ನಿಧ್ಯವಹಿಸಿ ಮಾತನಾಡಿದರು.

ನಾವು ಬಾಲ್ಯದಲ್ಲಿ ರಾಣೇಬೆನ್ನೂರು ಸಹ ನೋಡಿರಲಿಲ್ಲ. ಆದರೆ ಇಷ್ಟೆಲ್ಲಾ ವಿದೇಶದ ಪ್ರವಾಸ ಆಗಿದ್ದು ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರ ಕೃಪಾಶೀರ್ವಾದದಿಂದ. ಅವರಿಲ್ಲದಿದ್ದರೆ ಯಾರೋ ಮನೆಯಲ್ಲಿ ಸಗಣಿ ಬಾಚಿ, ದನ ಕಾಯುವ ಪರಿಸ್ಥಿತಿ ಬರುತ್ತಿತ್ತು.

ನಮ್ಮ ಗುರುಗಳು ಪ್ರವಾಸ ಪ್ರಿಯರು. ಅವರ ಪ್ರವಾಸ ಶರಣ ತತ್ವದ ಚಿಂತನೆಯಲ್ಲಿ ನಡೀತಾ ಇತ್ತು. ಆ ಪ್ರವಾಸದಲ್ಲಿ ನಾಟಕ, ವಚನಗೀತೆಗಳನ್ನಾಡಿಸುತ್ತಿದ್ದರು. ಅದು ನಮ್ಮ ಮೇಲೆ ಪ್ರೇರಣೆ ನೀಡಿತ್ತು. ಸ್ವಾಮಿಗಳಾದ ಮೇಲೆ ಬೇರೆ ಬೇರೆ ದೇಶಗಳಲ್ಲಿ ಪ್ರವಾಸ ಮಾಡಿದ್ದು. ಈ ಪ್ರವಾಸಕ್ಕೆ ಘನತೆ ತಂದುಕೊಟ್ಟವರು ಸುರೇಶ್‌. ಅಲ್ಲಿ ನಮ್ಮ ಕಲಾವಿದರನ್ನು ಕರೆದುಕೊಂಡು ಹೋಗಿ ಕಾರ್ಯಕ್ರಮ, ನಾಟಕ, ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದು ಹೆಮ್ಮೆಯ ವಿಷಯ ಎಂದರು.

ಮನುಷ್ಯ ತಪ್ಪು ಮಾಡುವುದು ಸಹಜ. ಆ ತಪ್ಪನ್ನು ತಿದ್ದುಕೊಂಡರೆ ಅವನು ದೊಡ್ಡ ವ್ಯಕ್ತಿಯಾಗುವನು. ಮನುಷ್ಯನಿಗೆ ಶ್ರದ್ಧೆ ಮತ್ತು ಸದ್ಭಾವನೆ ಇದ್ದರೆ ಸುಲಭವಾಗಿ ಸವಾಲುಗಳನ್ನು ಹೆದರಿಸಬಹುದು. ಪ್ರವಾಸ ಉಣ್ಣಲಿಕ್ಕಾಗಿ, ಮಜಾಮಾಡಲಿಕ್ಕಾಗಿ ಅಲ್ಲ. ಅದರ ಮೂಲಕ ನಮ್ಮ ಬದುಕನ್ನು ಬದಲಾಯಿಸುವುದಕ್ಕಾಗಿ. ನಮ್ಮ ಅಂತರಂಗದ ಕದವನ್ನು ಹೇಗೆ ತೆರೆದುಕೊಳ್ಳಬೇಕು ಎನ್ನುವುದೇ ಈ ಪ್ರವಾಸದ ಉದ್ದೇಶ ಎಂದರು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಬೆಟ್ಟಹಳ್ಳಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹೊಸ ದೇಶಗಳನ್ನು ನೋಡಿದಾಗ ಹೊಸ ಆಲೋಚನೆ, ಹೊಸ ಅನುಭವ, ಹೊಸ ವಿಚಾರಗಳು ಬರುತ್ತವೆ. ಯಾರು ಚೆನ್ನಾಗಿ ಪ್ರವಾಸ ಮಾಡುವರೋ ಅವರು ಚೆನ್ನಾಗಿ ಸಂಪಾದನೆ ಮಾಡುವರು. ವಿದೇಶದ ಅಭಿವೃದ್ಧಿಗೆ ಭಾರತ ದೇಶದ ಕೊಡುಗೆ ಅಪಾರ. ವಿದೇಶದಲ್ಲಿ ಮಾನವೀಯ ಮೌಲ್ಯಗಳಿಗೆ ಬೆಲೆಗಳಿಲ್ಲ. ಮಾನವೀಯತೆಗೆ, ಪ್ರೀತಿಗೆ ಹೆಚ್ಚು ಬೆಲೆ ಕೊಡುವುದು ನಮ್ಮ ಭಾರತ. ನಮ್ಮ ದೇಶವನ್ನು ಹೆಚ್ಚು ಪ್ರೀತಿಸೋಣ. ಅಲ್ಲಿನ ವಾಸ್ತುಶಿಲ್ಪಗಳಿಗಿಂತ ಭಾರತ ದೇಶದ ವಾಸ್ತುಶಿಲ್ಪ ತುಂಬಾ ಅದ್ಭುತ ಎಂದರು.

ಜಾಗತಿಕ ಲಿಂಗಾಯತ ಮಹಾ ಸಭಾದ ತಾಲೂಕು ಅಧ್ಯಕ್ಷ ಬಸವರಾಜ ರೊಟ್ಟಿ ಮಾತನಾಡಿ, ಯುರೋಪ್ ಪ್ರವಾಸ ಮೋಜುಮಸ್ತಿಗಾಗಿ ಮಾಡಿದ್ದಲ್ಲ. ವಚನ ಸಾಹಿತ್ಯ ಹಾಗೂ ಬಸವತತ್ವವನ್ನು ಹಬ್ಬಿಸಬೇಕು ಎನ್ನುವ ಕಾರಣಕ್ಕಾಗಿ. ಈ ಪ್ರವಾಸ ಅತ್ಯಂತ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸೌಲಭ್ಯವನ್ನು ಒದಗಿಸಿದರು. ವಿದೇಶದಲ್ಲಿ ನಾಲ್ಕೈದು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಹೆಮ್ಮೆಯ ವಿಷಯ. ವಿದೇಶದಲ್ಲಿನ ಶಿಸ್ತು, ಸ್ವಚ್ಛತೆ ನೋಡಿ ನಾವು ಕಲಿಯುವಂಥ ಪಾಠ ಸಾಕಷ್ಟಿದೆ ಎಂದರು.

ಅಭಿನಂದನೆ ಸ್ವೀಕಾರ ಮಾಡಿದ ಟಿಸಿಎಸ್ ಡ್ರೀಮ್‌ನ ಮುಖ್ಯಸ್ಥ ಎಸ್.ಎಂ.ಸುರೇಶ್ ಮಾತನಾಡಿ, ಮೇ24 ರಂದು ನನಗೆ ಹೃದಯಘಾತ ಆಯಿತು. ವೈದ್ಯರ ಬಳಿ ಹೋದಾಗ ಇನ್ನು ಎರಡು ಗಂಟೆ ಮಾತ್ರ ಬದುಕುಳಿಯಬಹುದು ಆದ್ದರಿಂದ ತುರ್ತಾಗಿ ಆಪರೇಷನ್ ಮಾಡಿಸಲು ತಿಳಿಸಿದರು. ಆದರೆ ಅದನ್ನು ತಿರಸ್ಕರಿಸಿದೆ. ಕಾರಣ ಭಾರತೀಯರ ವೈದ್ಯರ ಮನಸ್ಥಿತಿ ಇಟಲಿಯ ವೈದ್ಯರಲ್ಲಿ ಇರುತ್ತದೆ ಎನ್ನುವ ಕಾರಣಕ್ಕಾಗಿ. ಆದ್ದರಿಂದ ಪರಮಪೂಜ್ಯರ ಆಶೀರ್ವಾದದಿಂದ ಬದುಕಿ ಇಂದು ನಿಮ್ಮ ಮುಂದೆ ನಿಂತು ಮಾತನಾಡುತ್ತಿದ್ದೇನೆ ಎಂದರು.

ಇದೇ ಸಂದರ್ಭದಲ್ಲಿ ಸಾಹಿತಿ ಬಿ.ಆರ್.ಪೋಲೀಸ್ ಪಾಟೀಲ್, ವಚನ ಟಿವಿಯ ನಿರ್ದೇಶಕ ಸಿದ್ದು ಯಾಪಲಪರವಿ ಮಾತನಾಡಿದರು.

ಆರಂಭದಲ್ಲಿ ಶಿವಸಂಚಾರದ ಕಲಾವಿದರಾದ ನಾಗರಾಜ್ ಎಚ್.ಎಸ್.ಜ್ಯೋತಿ ಕೆ ಹಾಗೂ ಶರಣ್‌ಕುಮಾರ್ ವಚನಗೀತೆಗಳನ್ನು ಹಾಡಿದರು. ರವಿಕುಮಾರ್ ಸ್ವಾಗತಿಸಿದರೆ ರಾಜು ಬಿ ನಿರೂಪಿಸಿದರು. ಅನ್ನಪೂರ್ಣ ಮೊಳಗಲಿ ವಚನಗೀತೆಗಳನ್ನು ಹಾಡಿದರು. ವಿದ್ಯಾರ್ಥಿ ಅದಿತಿ ಭರತನಾಟ್ಯ ನೃತ್ಯ ಪ್ರದರ್ಶಿಸಿದರು.

ಪ್ರವಾಸದ ಅನುಭವಗಳನ್ನು ರಾಮಲಿಂಗಪ್ಪ, ನಾ ರೇವಣ್ಣ, ಅಶೋಕ ಮೊಳಗಳಿ, ಪುರದಾಳ, ರವಿಕುಮಾರ್ ಹಂಚಿಕೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ