ಕನ್ನಡಪ್ರಭ ವಾರ್ತೆ ಮೈಸೂರು
ನಗರ ಪಾಲಿಕೆಯ ವಾರ್ಡ್ ನಂಬರ್ 25ರ ತಿಲಕ್ ನಗರ ವ್ಯಾಪ್ತಿಯ ಪ್ರದೇಶದಲ್ಲಿ ಚಾಮರಾಜ ವಿಧಾನ ಕ್ಷೇತ್ರದ ಶಾಸಕ ಕೆ. ಹರೀಶ್ ಗೌಡ ಅವರು ಪಾಲಿಕೆಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೋಮವಾರ ಪಾದಯಾತ್ರೆ ಹಮ್ಮಿಕೊಂಡಿದ್ದರು.ಈ ಸಂದರ್ಭದಲ್ಲಿ ಕಿರು ಮೋರಿಗಳಿಗೆ ಸ್ಲಾಬ್ ಹಾಕಿಸಲು ಹಲವು ಕ್ರಾಸ್ ಗಳಲ್ಲಿ ಮನವಿ ಮಾಡಿದರು. ಮುಖ್ಯವಾಗಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಿವಾಸಿಗಳು ಶಾಸಕರ ಗಮನಕ್ಕೆ ತಂದರು. ನಿಗದಿತ ಸಮಯದಲ್ಲಿ ನೀರು ಸರಬರಾಜು ಆಗದಿರುವುದು, ಅಲ್ಪ ಅವಧಿಗೆ ನೀರನ್ನು ನಿಲ್ಲಿಸುವುದರ ಕುರಿತು ದೂರಿದರು.
ಈ ಬಗ್ಗೆ ಸ್ಥಳದಲ್ಲಿದ್ದ ವಾಣಿ ವಿಲಾಸ ನೀರು ಸರಬರಾಜು ಮಂಡಳಿಯ ಎಇ ಅಶ್ವಿನ್ ಅವರನ್ನು ಶಾಸಕರು ಪ್ರಶ್ನಿಸಲಾಗಿ ವೀರನಗರೆ, ಸಿವಿ ರಸ್ತೆ, ಪುಲಿಕೇಶಿ ರಸ್ತೆ ಪ್ರದೇಶಗಳಲ್ಲಿ ಮೊದಲು ನೀರು ಬಿಡುವುದರಿಂದ ಈ ಪ್ರದೇಶಕ್ಕೆ ಗ್ರಾವಿಟಿ ಸಾಲುತ್ತಿಲ್ಲ. ಅತೀ ಶೀಘ್ರವಾಗಿ ಹೊಸದಾಗಿ ನಿರ್ಮಾಣವಾಗಿರುವ ಓವರ್ ಹೆಡ್ ಟ್ಯಾಂಕ್ ನಿಂದ ನೀರು ಸರಬರಾಜು ಮಾಡುತ್ತೇವೆ ಎಂದರು. ತಾಂತ್ರಿಕ ಕಾರಣಗಳು ಏನೇ ಇದ್ದರೂ ಅದನ್ನು ಬೇಗ ಸರಿಪಡಿಸಿ ನಿವಾಸಿಗಳಿಗೆ ತೊಂದರೆಯಾಗದ ರೀತಿಯಲ್ಲಿ ಕುಡಿಯುವ ನೀರು ಪೂರೈಸಿ ಎಂದು ಶಾಸಕರು ಸೂಚಿಸಿದರು.ಮೈಸೂರು ವೈದ್ಯಕೀಯ ಕಾಲೇಜಿಗೆ ಸೇರಿದ ಆಸ್ತಿ ಪಾಳು ಬಿದ್ದಿರುವುದು, ಬಿಡಾಡಿ ದನಗಳು ಓಡಾಡುವುದು ಹಲವೆಡೆ ದಾಳಿ ಮಾಡಿರುವುದನ್ನು ಶಾಸಕರಿಗೆ ತಿಳಿಸಲಾಗಿ, ಪಾಲಿಕೆಯ ಎಇ ಸಿಂಧು ಅವರಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು, ಪುಂಡರು ವ್ಹೀಲಿಂಗ್ ಮಾಡುವುದರ ಜೊತೆಗೆ ಅತಿ ವೇಗವಾಗಿ ತೆರಳುವುದು ರಸ್ತೆಯಲ್ಲಿ ಕಿರಿಕಿರಿ ಮಾಡುವ ವಿಚಾರವನ್ನು ಹಲವರು ಪ್ರಸ್ತಾಪಿಸಿದರು, ಸ್ಥಳದಲ್ಲಿದ್ದ ಪೊಲೀಸರಿಗೆ ಗಸ್ತು ಹೆಚ್ಚಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಶಾಸಕರು ತಿಳಿಸಿದರು.
ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಕಾಪೌಂಡ್ ಒಡೆದಿದ್ದು ಅದನ್ನು ಆದಷ್ಟು ಬೇಗ ನಿರ್ಮಾಣ ಮಾಡಲು, ಶಾಲೆಯ ಹಿಂಭಾಗದ ರಸ್ತೆಯಲ್ಲಿ ವಿದ್ಯುತ್ ತಂತಿ ಮರಕ್ಕೆ ತಾಗಿರುವುದು, ಮನೆ ಕಟ್ಟಲು ಸಹಾಯ ಧನ ಕೋರಿ, ಆಟೋ ಸ್ಟ್ಯಾಂಡ್ ಗೆ ಶೆಲ್ಟರ್ ನಿರ್ಮಾಣ ಮಾಡಲು ಮನವಿಗಳು ಬಂದವು.ಇಡಿ ಆಸ್ಪತ್ರೆಗೆ ಸೇರಿದ ಜಾಗ ಪಾಳು ಬಿದ್ದಿದ್ದು ದಾಖಲೆಗಳನ್ನು ಪರಿಶೀಲಿಸಿ ಸಾರ್ವಜನಿಕರಿಗೆ ಉಪಯೋಗ ಆಗುವ ಹಾಗೆ ಏನಾದರೂ ಮಾಡುತ್ತೇವೆ ಎಂದು ಶಾಸಕರು ತಿಳಿಸಿದರು. ಸಾಡೇ ಚರ್ಚ್ ಪಕ್ಕ ಇರುವ ಸರ್ಕಾರಿ ಶಾಲೆ ಸಂಪೂರ್ಣವಾಗಿ ಬೀಳುವ ಸ್ಥಿತಿಯಲಿದ್ದು ಅದರ ಪೂರ್ಣ ವಿಚಾರ ತಿಳಿದು ಸಮಸ್ಯೆ ಬಗೆಹರಿಸುವಂತೆ ಪಾಲಿಕೆಯ ಉಪ ಆಯುಕ್ತೆ ಪ್ರತಿಭಾ ಅವರಿಗೆ ಶಾಸಕರು ತಿಳಿಸಿದರು.
ಮಾಜಿ ಮೇಯರ್ ಅನಂತು, ನಗರ ಪಾಲಿಕೆ ಮಾಜಿ ಸದಸ್ಯ ನಂದಕುಮಾರ್, ದೇವರಾಜ ಬ್ಲಾಕ್ ಅಧ್ಯಕ್ಷ ರಮೇಶ್ ರಾಯಪ್ಪ, ಮುಖಂಡರಾದ ಎಚ್.ಎಸ್. ಸುಜಿತ್ ಕುಮಾರ್, ಮಂಜುನಾಥ್, ರಾಜಗಣೇಶ್, ಸಾಕಮ್ಮ, ಯೋಗೇಶ್, ಪವನ್, ಬೆನಕ, ಎಸ್. ಮಂಜುನಾಥ್, ಸುರೇಶ್, ವೆಂಕಟೇಶ್, ರಾಜ ರಾಜೇಂದ್ರ ಮೊದಲಾದವರು ಇದ್ದರು.