ಬಸವರಾಜ ಹಿರೇಮಠ ಧಾರವಾಡ
ಖಜಾನೆ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ 13 ಗ್ರಾಮಗಳ ಸ್ಮಶಾನ ಭೂಮಿ ಖರೀದಿಗೆ ಬಂದ ₹3.80 ಕೋಟಿ ಅನುದಾನ ಮರಳಿ ಹೋಗಿರುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ವಿವಿಧ ಬಿಲ್‌ಗಳ ಮೂಲಕ ಕೊಡಬೇಕಾದ ಅನುದಾನ ಅನವಶ್ಯಕ ಕಾರಣಗಳನ್ನು ನೀಡಿ ತಿರಸ್ಕರಿಸಲಾಗುತ್ತಿದೆ ಎಂಬ ದೊಡ್ಡ ಆರೋಪವನ್ನು ಖಜಾನೆ ಇಲಾಖೆ ಹೊತ್ತಿದೆ. ಇದು ವಿವಿಧ ಇಲಾಖೆ ಹಂತದಲ್ಲಿ ತೀವ್ರ ಸಂಚಲನ ಸಹ ಮೂಡಿಸಿದೆ.
ಮರಳಿ ಹೋದ ಸ್ಮಶಾನ ಹಣ:ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ರುದ್ರಭೂಮಿಗೆ ಜಾಗದ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳು ಆದಿಯಾಗಿ ಸ್ಥಳೀಯ ಶಾಸಕರುಗಳ ತೀವ್ರ ಪ್ರಯತ್ನದಿಂದ ಜಿಲ್ಲೆಯ 13 ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ಖರೀದಿಸಲು ₹3.80 ಕೋಟಿ ಅನುದಾನ ಬಂದಿತ್ತು. ಖಾಸಗಿಯವರಿಂದ ಜಮೀನು ಖರೀದಿಸಿ ಸ್ಮಶಾನ ಭೂಮಿ ಕಾಯ್ದಿರಿಸಲು ಜಿಲ್ಲಾ ಮಟ್ಟದ ದರ ನಿರ್ಧರಣಾ ಸಮಿತಿ ಸಭೆಯು ಸಹ ನಿರ್ಣಯಿಸಿತ್ತು.ಈ ಹಣವನ್ನು ಉಪವಿಭಾಗಾಧಿಕಾರಿಗಳ ಮೂಲಕ ಜಮೀನು ಮಾಲೀಕರಿಗೆ ಕೊಡಬೇಕಿತ್ತು. ಆದರೆ, ಈ ಹಣ ಭೂ ಮಾಲೀಕರಿಗೆ ನೀಡಬೇಕೆಂದು ಖಜಾನೆ ಇಲಾಖೆ ಉಪ ನಿರ್ದೇಶಕರು ಪ್ರಸ್ತಾವನೆಯನ್ನು ತಿರಸ್ಕರಿಸಿದ ಪರಿಣಾಮ, ಅನುದಾನ ಈಗ ಮತ್ತೇ ಹಣಕಾಸು ಇಲಾಖೆಗೆ ಹೋಗಿರುವುದು ಸಮಸ್ಯೆಗೆ ಕಾರಣವಾಗಿದೆ.
ವೇತನ ವಿಳಂಬ: ಇದರೊಂದಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಖಜಾನೆ ಇಲಾಖೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲಾಸ್ಪತ್ರೆಯ ರಾಜ್ಯ ವಲಯದ ಹಾಗೂ ಎನ್.ಎಚ್.ಎಂ.ಅನುದಾನದ ಬಿಲ್ಲುಗಳನ್ನು ಅನುದಾನದ ಲಭ್ಯತೆಯ ಆಧಾರದ ಮೇಲೆ ತಯಾರಿಸಿ ನೀಡಿದಾಗ, ಜಿಲ್ಲಾ ಖಜಾನಾಧಿಕಾರಿಗಳು ಸ್ವೀಕರಿಸಿಲ್ಲ. ಜೊತೆಗೆ ಫೆಬ್ರುವರಿ-2025 ನೇ ವೇತನ ಬಿಲ್ಲುಗಳನ್ನು ಕೂಡಾ ನಿರಾಕರಿಸಿದ್ದಾರೆ. ಇದರಿಂದ ಅಧಿಕಾರಿ, ಸಿಬ್ಬಂದಿ ವೇತನಕ್ಕೂ ವಿಳಂಬವಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ, ರೋಗಿಗಳ ಹಿತದೃಷ್ಟಿಯಿಂದ ಪ್ರಗತಿ ಸಾಧಿಸಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ನಿರೀಕ್ಷೆಗಳೇನು?:ಗ್ಯಾರಂಟಿ ಯೋಜನೆಯಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಅನುದಾನದ ತೀವ್ರ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ಸರ್ಕಾರದಿಂದ ಬಂದ ಅನುದಾನ ಇಲಾಖೆಗಳಿಗೆ ನೀಡಲು ಖಜಾನಾಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಅವರ ನಿರೀಕ್ಷೆಗಳೇನು ತಿಳಿಯುತ್ತಿಲ್ಲ ಎಂದು ಸರ್ಕಾರದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭದೊಂದಿಗೆ ಬೇಸರ ವ್ಯಕ್ತಪಡಿಸಿದರು.