ರಾಮನಗರ: ಸರ್ಕಾರಿ ಆಸ್ಪತ್ರೆಗಳ ಸ್ವಚ್ಛತೆ, ನಿರ್ವಹಣೆ, ಆರೋಗ್ಯ ಸೇವೆಗಳ ಮೇಲೆ ನಿಗಾವಹಿಸಲು ಆರೋಗ್ಯ ರಕ್ಷಾ ಸಮಿತಿ ಸದಸ್ಯರು ಆಸ್ಪತ್ರೆಗಳಿಗೆ ಆಗಾಗ್ಗೆ ಭೇಟಿ ನೀಡಬೇಕು. ಆಸ್ಪತ್ರೆಗೆ ಬರುವವರಿಗೆ ಉತ್ತಮ ವಾತಾವರಣ, ಆರೋಗ್ಯ ಸೇವೆ ನೀಡಲು ಸಮಿತಿಯ ಎಲ್ಲ ಸದಸ್ಯರು ಶ್ರಮಿಸುವಂತೆ ಶಾಸಕ ಇಕ್ಬಾಲ್ ಹುಸೇನ್ ಕಿವಿಮಾತು ಹೇಳಿದರು.
ಜಿಲ್ಲಾಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಪರಿಚಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾ ಸ್ಪತ್ರೆಗಳ ಮೇಲೆ ನಿಗಾವಹಿಸಲು ಸರ್ಕಾರ ಆರೋಗ್ಯ ರಕ್ಷಾ ಸಮಿತಿ ರಚನೆ ಮಾಡಿದೆ. ಸಮಿತಿ ಸದಸ್ಯರು ತಮ್ಮ ಸೇವಾವಧಿಯಲ್ಲಿ ಉತ್ತಮವಾಗಿ ಕೆಲಸ ಮಾಡುವಂತೆ ತಿಳಿಸಿದರು.ಸಮಿತಿ ಸದಸ್ಯರಲ್ಲಿ ಸೇವಾ ಮನೋಭಾವವಿರಲಿ, ವೈದ್ಯರು ಮತ್ತು ಸಮಿತಿ ಸದಸ್ಯರು ಒಂದು ಕುಟುಂಬದಂತೆ ಕೆಲಸ ಮಾಡಿದರೆ, ಆರೋಗ್ಯ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ತರಲು ಸಾಧ್ಯ, ನೊಂದವರ ನೆರವಿಗೆ ಶ್ರಮಿಸಿ, ನೂನ್ಯತೆ ಕಂಡು ಬಂದರೆ ಸಂಬಂಧಿಸಿದವರ ಇಲಾಖಾ ಮುಖ್ಯಸ್ಥರ ಜೊತೆ ಸಭೆ ಕರೆದು ಚರ್ಚಿಸಿ, ಒಟ್ಟಾರೆ ಜನರಿಗೆ ಅನುಕೂಲವಾಗುವ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಜಿಲ್ಲಾಸ್ಪತ್ರೆ ಮುಂಭಾಗ ಅನಧಿಕೃತವಾಗಿ ಅಂಗಡಿ ಮುಂಗಟ್ಟುಗಳು ತಲೆ ಎತ್ತುವುದಕ್ಕೆ ಅವಕಾಶ ಕೊಡುವುದಿಲ್ಲ. ಅವರ ವ್ಯಾಪಾರಕ್ಕೆ ನಾನು ಸಹಕಾರ ಕೊಡುತ್ತೇನೆ. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರಿಗೆ ವಿಶ್ರಾಂತಿ ಕೊಠಡಿ, ಕ್ಯಾಂಟಿನ್ ವ್ಯವಸ್ಥೆ, ಆಸ್ಪತ್ರೆ ಸಿಬ್ಬಂದಿ ಬೇಕಿದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡಿದ್ದು ಮೂರ್ನಾಲ್ಕು ತಿಂಗಳಲ್ಲಿ ಎಲ್ಲ ವ್ಯವಸ್ಥೆಗೆ ಕ್ರಮ ವಹಿಸಲಾಗುವುದು ಎಂದು ಇಕ್ಬಾಲ್ ಹುಸೇನ್ ಹೇಳಿದರು.ಸಭೆಯಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ.ಚೇತನ್ ಕುಮಾರ್, ಜಿಲ್ಲಾ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾದ ಶೋಭಾ ದೇವರಾಜು, ವನಜಾ, ರಾಣಿ, ರೂಪಾ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಮಂಜು ನಾಥ್, ಆರ್‌ಎಂಓ ಡಾ.ನಾರಾಯಣಸ್ವಾಮಿ, ತಾಲೂಕು ವೈದ್ಯಾಧಿಕಾರಿ ಡಾ.ಉಮಾ, ವೈದ್ಯರಾದ ಡಾ.ಶಿವಸ್ವಾಮಿ, ಡಾ.ಶಶಿರೇಖಾ ಮತ್ತಿತರರು ಉಪಸ್ಥಿತರಿದ್ದರು.
13ಕೆಆರ್ ಎಂಎನ್ 6.ಜೆಪಿಜಿರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆಯಲ್ಲಿ ಆರೋಗ್ಯ ರಕ್ಷಾ ಸಮಿತಿಯ ಪರಿಚಯ ಸಭೆ ನಡೆಯಿತು.