ಜನರೊಂದಿಗೆ ಗೌರವದಿಂದ ನಡೆದುಕೊಳ್ಳಿ: ಶ್ರೀನಿವಾಸ್‌ ಮಾನೆ

KannadaprabhaNewsNetwork |  
Published : Aug 12, 2026, 02:45 AM IST
ಹಾನಗಲ್ಲಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳ ವಿಳಂಬಕ್ಕೆ ಅವಕಾಶ ನೀಡದೇ ಗೌರವದಿಂದ ಅವರ ಕೆಲಸ ಪೂರೈಸುವಲ್ಲಿ ವೈಫಲ್ಯ ಕಾಣತಕ್ಕದ್ದಲ್ಲ ಎಂದು ಶಾಸಕ ಶ್ರೀನಿವಾಸ್ ಮಾನೆ ಕಟ್ಟಪ್ಪಣೆ ಮಾಡಿದರು.

ಹಾನಗಲ್ಲ: ಸರ್ಕಾರಿ ಕಚೇರಿಗಳಲ್ಲಿ ಜನರ ಕೆಲಸಗಳ ವಿಳಂಬಕ್ಕೆ ಅವಕಾಶ ನೀಡದೇ ಗೌರವದಿಂದ ಅವರ ಕೆಲಸ ಪೂರೈಸುವಲ್ಲಿ ವೈಫಲ್ಯ ಕಾಣತಕ್ಕದ್ದಲ್ಲ ಎಂದು ಶಾಸಕ ಶ್ರೀನಿವಾಸ್ ಮಾನೆ ಕಟ್ಟಪ್ಪಣೆ ಮಾಡಿದರು.

ಮಂಗಳವಾರ ತಾಲೂಕು ಪಂಚಾಯತ್ ಸಭಾಭವನದಲ್ಲಿ ಆಯೋಜಿಸಿದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ನಮ್ಮ ಸರ್ಕಾರಕ್ಕೆ ಇನ್ನು ಒಂದೂವರೆ ವರ್ಷದ ಕಾಲಾವಕಾಶವಿದೆ. ಯಾವುದೇ ಅಧಿಕಾರಿಗಳು ಸರ್ಕಾರದ ಕೆಲಸವನ್ನು ಅನಗತ್ಯ ವಿಳಂಬಕ್ಕೆ ಅವಕಾಶವಿಲ್ಲದಂತೆ ಪೂರ್ಣಗೊಳಿಸಬೇಕು. ಸರ್ಕಾರಿ ನೌಕರರ ೭ನೇ ವೇತನದ ಒಂದು ದಿನದ ವೇತನ ಹಾಗೂ ನಮ್ಮ ಆರ್ಥಿಕ ಸಹಕಾರವೂ ಸೇರಿ ಓಸ್ಯಾಟ್ ಮೂಲಕ ತಾಲೂಕಿನಲ್ಲಿ ೨.೫ ಕೋಟಿ ರು. ವೆಚ್ಚದ ಶಾಲಾ ಕಟ್ಟಡಗಳ ನಿರ್ಮಾಣ ನಡೆಯುತ್ತಿದೆ. ಶೀಘ್ರ ಯುವಕರಿಗಾಗಿ ಭಾರತ ಜೋಡೋ ಯುವ ಸಂಘ ಸ್ಥಾಪಿಸಲಾಗುವುದು. ಪ್ರತಿ ಸಂಘಕ್ಕೆ ಒಂದು ವರ್ಷಕ್ಕೆ ೧೦ ಲಕ್ಷ ರು. ನೀಡಲಾಗುತ್ತಿದ್ದು, ಎಲ್ಲರೂ ಜೊತೆಗೂಡಿ ತಾಲೂಕಿನಲ್ಲಿ ಉತ್ತಮ ಕಾರ್ಯಕ್ರಮಗಳಿಗೆ ಸಾಕ್ಷಿಯಾಗೋಣ. ಎಲ್ಲರ ಸಹಕಾರವಿರಲಿ ಎಂದು ಮನವಿ ಮಾಡಿದರು.

ತಾಲೂಕಿನಲ್ಲಿ ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳ ಭೂ ದಾಖಲೆ ಸರಿಪಡಿಸಿ, ಇ-ಸ್ವತ್ತು ಮಾಡಿಸಬೇಕು. ತಾಪಂ ಇಒ, ಬಿಇಒ ಹಾಗೂ ಸಿಡಿಪಿಒ ಜಂಟಿ ಸಭೆ ನಡೆಸಿ ಕ್ರಮ ವಹಿಸುವಂತೆ ಸೂಚಿಸಿದರು. ಹಾನಗಲ್ ನಗರಕ್ಕೆ ಮಳಗಿ ಧರ್ಮಾ ಜಲಾಶಯದಿಂದ ಪೈಪ್‌ಲೈನ್ ಮೂಲಕ ನೀರು ತರುವ ಕಾಮಗಾರಿ ಕುಂಟುತ್ತಾ ಸಾಗಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಮಾನೆ, ಕಾಮಗಾರಿ ಚುರುಕುಗೊಳಿಸಿ. ಕಾಮಗಾರಿಗಾಗಿ ಅಲ್ಲಲ್ಲಿ ಅಗೆದು ಹಾಕಿರುವ ರಸ್ತೆ ಸರಿ ಪಡಿಸಿ, ಗುಂಡಿಗಳನ್ನು ಮುಚ್ಚಿಸಿ. ನಿರ್ಲಕ್ಷ್ಯ ವಹಿಸಿದರೆ ಗುತ್ತಿಗೆದಾರರಿಗೆ ನೋಟಿಸ್ ಜಾರಿಗೊಳಿಸಿ ಎಂದರು.

ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ವೀರೇಶ ಬೈಲವಾಳ, ಹಳ್ಳಿಗಳಲ್ಲಿ ಹಗಲಿನಲ್ಲಿಯೂ ಬೀದಿ ದೀಪ ಉರಿಯುತ್ತವೆ, ಧರ್ಮಾ ಕಾಲುವೆ ಏರಿಯ ಮೇಲಿನ ಕಾಮಗಾರಿ ಸಮರ್ಪಕವಾಗಿ ಆಗಿಲ್ಲ, ನೀರಾವರಿ ಇಲಾಖೆಯ ಕಾಮಗಾರಿಯಲ್ಲಿ ಬಹಳಷ್ಟು ಲೋಪದೋಷಗಳಿವೆ, ಹುಲಗಿನಹಳ್ಳಿ ಕೆರೆ ಕಾಮಗಾರಿ ಕಳಪೆಯಾಗಿದೆ. ಅಧಿಕಾರಿಗಳು ತಮ್ಮ ಕರ್ತವ್ಯದಲ್ಲಿ ಲೋಪವೆಸಗಿದರೆ ಅದು ತಾಲೂಕಿನ ಅಭಿವೃದ್ಧಿಗೆ ಮಾರಕ ಎಂದು ಕಿಡಿ ಕಾರಿದರು.

ಕೆಡಿಪಿ ಸದಸ್ಯೆ ಅನಿತಾ ಡಿಸೋಜಾ, ಹಾನಗಲ್ಲ ಪಟ್ಟಣದಲ್ಲಿ ಸ್ವಚ್ಛತೆಗೆ ಆದ್ಯತೆಯೇ ಇಲ್ಲ. ಚರಂಡಿಗಳ ಕಸ ಬಳೆದರೂ ಅದನ್ನು ಕೊಂಡೊಯ್ಯದೆ ಅದು ಮತ್ತೆ ಚರಂಡಿಯನ್ನೇ ಸೇರಿಸುತ್ತಿದೆ. ಕೃಷಿ ತೋಟಗಾರಿಕೆ ಇಲಾಖೆ ಸಾವಯವ ಕೃಷಿಗೆ ಆದ್ಯತೆ ನೀಡುವಲ್ಲಿ ವಿಫಲವಾಗಿವೆ. ಬಸ್ ನಿಲ್ದಾಣ ಅವ್ಯವಸ್ಥೆಯ ಆಗರವಾಗಿದೆ. ಇಲ್ಲಿ ಸ್ವಚ್ಛತೆ ಇಲ್ಲ. ಮಹಿಳೆಯರು ಮತ್ತು ವಿದ್ಯಾರ್ಥಿಗಳಿಗೆ ಇಲ್ಲಿ ಸುರಕ್ಷತೆ ಇಲ್ಲ. ಬಸ್‌ಗಳಲ್ಲಿ ಕೂಡ ಪ್ರಯಾಣಿಕರಿಗೆ ಸಹಕರಿಸುತ್ತಿಲ್ಲ. ಉಚಿತ ಎಂಬ ಕಾರಣಕ್ಕೆ ಬಸ್‌ಗಳಲ್ಲಿ ನಿರ್ವಾಹಕರು ಅಸಭ್ಯ ವರ್ತನೆ ಮಾಡುತ್ತಾರೆ ಎಂದು ದೂರಿದರು.

ತಾಲೂಕಿನಲ್ಲಿ ಶೇ. ೪೮ರಷ್ಟು ಮಳೆ ಕೊರತೆ, ರಾಸಾಯನಿಕ ಗೊಬ್ಬರದ ಕೊರತೆ ಇಲ್ಲ, ಕೃಷಿ ಇಲಾಖೆಯಲ್ಲಿ ೪೫ ಸಾವಿರ ರೈತರು ಬೆಳೆವಿಮೆಗೊಳಪಟ್ಟಿದ್ದಾರೆ. ಅಕ್ಟೋಬರ್ ಹೊತ್ತಿಗೆ ಹಿಂದಿನ ವರ್ಷದ ಮಾವು ಹಾಗೂ ಅಡಕೆ ಬೆಳೆವಿಮೆ ಪರಿಹಾರ ಬಿಡುಗಡೆಯಾಗುತ್ತದೆ. ಮಳೆ ಮಾಪನ ಹಾಗೂ ಹವಾಮಾನ ಮಾಹಿತಿ ಕೇಂದ್ರಗಳು ಸರಿಯಾಗಿ ಕೆಲಸ ನಿರ್ವಹಿಸುತ್ತಿಲ್ಲ, ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸದಿದ್ದರೆ ಬೆಳೆವಿಮೆ ಲೆಕ್ಕಾಚಾರವೇ ತಲೆ ಕೆಳಗಾಗುತ್ತದೆ. ಕಾಮಗಾರಿ ಪೂರ್ಣ ಹಾಗೂ ಸಮರ್ಪಕವಾಗಿ ಪೂರೈಸದ ಗುತ್ತಿಗೆದಾರರಿಗೆ ಬಿಲ್ ಪಾವತಿಸಬೇಡಿ, ಹಿರೇಕಾಂಸಿ ಬಾಳಂಬೀಡ ಏತ ನೀರಾವರಿ ಯೋಜನೆಗಳು ಕೆರೆ ತುಂಬಿಸುವ ಕಾರ್ಯದಲ್ಲಿ ಸರಿಯಾಗಿ ಕೆಲಸ ಮಾಡುತ್ತಿವೆ. ಹಾನಗಲ್ಲ ಫುಟ್‌ಪಾತ್ ತೆರವು ಹಾಗೂ ದುರಸ್ತಿಗೆ ಕೂಡಲೆ ಸಭೆ ನಡೆಸುವುದು, ಶಾಲಾ ಕೊಠಡಿಗಳ ಬೇಡಿಕೆ, ಪಟ್ಟಣದ ಉದ್ಯಾನವನಗಳು ಸರಿಯಾಗಿಲ್ಲ ಎಂಬ ವಿಷಯಗಳು ಚರ್ಚೆಗೆ ಬಂದವು.

ಸಭೆಯಲ್ಲಿ ತಾಲೂಕು ತಹಸೀಲ್ದಾರ್ ವಿಠ್ಠಲ ಚೌಗುಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ವೀರೇಶ ಬೈಲವಾಳ, ಕೆಡಿಪಿ ಸದಸ್ಯರಾದ ಅನಿತಾ ಡಿಸೋಜಾ, ರಾಘವೇಂದ್ರ ಹಾನಗಲ್ಲ, ದಯಾನಂದ ನಾಗನೂರ, ರಾಜಶೇಖರ ಪುರದ, ಮಂಜಪ್ಪ ತಡಸದ ವೇದಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಮೀನುಗಾರ ಸಮುದಾಯಗಳು ಸಂಘಟಿತವಾಗಲಿ: ಗುಂಡು ಐನಾಪುರ
ನಾಟಿ ಹಬ್ಬ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ