ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಗುರುವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅನ್ಪಡ್ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪಸಿಂಹರಿ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕೆಂದು ಒತ್ತಾಯಿಸಿದರು.
ಪ್ರತಾಪಸಿಂಹ ಪತ್ರಕರ್ತರಾಗಿ ಕೆಲಸ ಮಾಡಿದವರು. ಈ ದೇಶದ ಸಂವಿಧಾನ, ವ್ಯವಸ್ಥೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕಿತ್ತು. ಆದರೆ, ಜನರಿಂದ ಆಯ್ಕೆಯಾಗಿ, ರಾಜ್ಯದ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿರುವ ಮಧು ಬಂಗಾರಪ್ಪ ಅವರನ್ನು ಅನ್ಪಡ್ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರತಾಪ ಸಿಂಹ ಅಣಕಿಸುವ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಕ್ಕೆ ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ರಾಜಕೀಯವಾಗಿ ನಿರಾಶ್ರಿತರಾಗಿರುವ ಪ್ರತಾಪಸಿಂಹಗೆ ಹುಚ್ಚು ಹಿಡಿರುವುದು ಖಚಿತವಾಗಿದೆ. ಹಾಗಾಗಿ ಕಂಡ ಕಂಡವರನ್ನು ತಿಳಿಗೇಡಿ ಎನ್ನುವುದು, ಬೇಕಾಬಿಟ್ಟಿ ಟೀಕಿಸುವುದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಈ ದೇಶದ ಸಂವಿಧಾನದಲ್ಲಿರುವ ಅವಕಾಶದಿಂದಾಗಿಯೇ ಇಂದು ಮಧು ಬಂಗಾರಪ್ಪನವರು ಶಾಸಕರಾಗಿ, ಶಿಕ್ಷಣ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಸಚಿವರಾದ ಮೇಲೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಆಗಿರುವ ಗಣನೀಯ ಹೆಚ್ಚಳವೇ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಪ್ರತಾಪಸಿಂಹನನ್ನು ಆಸ್ಪತ್ರೆಗೆ ಸೇರಿಸಲು ಯುವ ಕಾಂಗ್ರೆಸ್‌ನಿಂದಲೇ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿದ್ದು, ಇದರ ಸದ್ಬಳಕೆ ಆಗುವಂತೆ ಬಿಜೆಪಿ ವರಿಷ್ಠರು ನೋಡಿಕೊಳ್ಳಬೇಕಿದೆ ಎಂದರು.
ಈ ಸಂದರ್ಭದಲ್ಲಿ ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಆಸಿಫ್, ಚೇತನ್, ಮಧುಸೂದನ್, ಗಿರೀಶ್ ಬುಕ್ಕಳಾಪುರ, ಹರ್ಷಿತ್ ಗೌಡ , ಚರಣ್ ಶೆಟ್ಟಿ, ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.