ಸಮಾಜದಲ್ಲಿ ಹಿರಿಯ ನಾಗರಿಕರ ಕಡೆಗಣಿಸದೇ ಗೌರವಾಧರಗಳಿಂದ ಕಾಣಿ: ಎಚ್.ವಿ. ಚಂದ್ರು

KannadaprabhaNewsNetwork |  
Published : Oct 02, 2026, 01:45 AM IST
1ಸಿಎಚ್‌ಎನ್‌51ಚಾಮರಾಜನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮವನ್ನು ಎಚ್‌.ವಿ ಚಂದ್ರು ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸುಭದ್ರದೇವಿ ಅವರು ಮಾತನಾಡಿ, ಸಂವಿಧಾನದಡಿ ಸಮಾಜದಲ್ಲಿ ಹಿರಿಯರಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಹಿರಿಯರ ರಕ್ಷಣೆಗಾಗಿ ಸರ್ಕಾರವು ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಲ್ಲದೆ ಹಿರಿಯರಿಗೆ ಅನುಕೂಲಕ್ಕಾಗಿ ಹಗಲು ಕ್ಷೇಮ ಕೆಂದ್ರಗಳನ್ನು ತೆರೆದಿದ್ದು, ಚಾಮರಾಜನಗರದಲ್ಲಿ 52 ಹಿರಿಯ ನಾಗರಿಕರು ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅನುಭವಗಳ ಅಗರವಾಗಿರುವ ಹಿರಿಯ ನಾಗರಿಕರನ್ನು ಕಡೆಗಣಿಸದೇ ಗೌರವಿಸುವಂತೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ. ಚಂದ್ರು ಅವರು ಸಲಹೆ ಮಾಡಿದರು.

ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಕ್ಷೇತ್ರದಲ್ಲಿ ಭಾಗಿಯಾಗಿರುವ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತಮ ಸಮಾಜ ನಿರ್ಮಾಣ ಹಾಗೂ ಕುಟುಂಬದ ಸುಖ- ಶಾಂತಿಗೆ ಹಿರಿಯರ ಮಾರ್ಗದರ್ಶನ ಅವಶ್ಯವಾಗಿದೆ. ಅವರ ಅನುಭವಗಳು ನಮೆಲ್ಲರಿಗೂ ದಾರಿದೀಪವಾಗಲಿವೆ. ಇಂದಿನ ವೈಜ್ಞಾನಿಕ ಯುಗದಲ್ಲಿ ಹಣ ಗಳಿಕೆಯೇ ಮುಖ್ಯವಲ್ಲ, ಹಿರಿಯರನ್ನು ಗೌರವಾಧರಗಳಿಂದ ನೋಡಿಕೊಳ್ಳಬೇಕು. ಮಕ್ಕಳ ಭವಿಷ್ಯ ರೂಪಿಸಿ ಸಮಾಜದಲ್ಲಿ ಸದೃಢ ಜೀವನ ನಡೆಸುವಂತೆ ಪ್ರೇರೇಪಿಸುವಲ್ಲಿ ಹಿರಿಯರ ಪಾತ್ರ ಪ್ರಮುಖವಾಗಿದೆ. ಹಿರಿಯರ ಸಂಧ್ಯಾಕಾಲದಲ್ಲಿ ನೆಮ್ಮದಿ ಜೀವನ ನಡೆಸಲು ಅನುವು ಮಾಡಿಕೊಡಬೇಕು. ಮೊದಲು ಹಿರಿಯರು ತಮ್ಮಲ್ಲಿರುವ ಕೀಳರಿಮೆ ಬಿಡಬೇಕು ಎಂದರು.

ಹಿರಿಯರು ಅಬಲರಲ್ಲ, ಅವರನ್ನು ಸಬಲೀಕರಣಗೊಳಿಸಲು ಸರ್ಕಾರ ಹಲವು ಕಾನೂನು ಕಾಯ್ದೆಗಳನ್ನು ಜಾರಿಗೊಳಿಸಿದೆ. ಗುರುತಿನ ಚೀಟಿ, ಪಿಂಚಣಿ ಸೌಲಭ್ಯ, ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ರಿಯಾಯಿತಿ ಸೇರಿದಂತೆ ಸಾಕಷ್ಟು ಸೌಲಭ್ಯ ನೀಡಿದ್ದು, ಅವುಗಳ ಸದ್ಭಳಕೆಯಾಗಬೇಕು. ಹಿರಿಯರ ಶ್ರೇಯೋಭಿವೃದ್ಧಿಗಾಗಿ ಪ್ರತ್ಯೇಕ ಇಲಾಖೆ ಕಾರ್ಯನಿರ್ವಹಿಸುತ್ತಿದೆ. ಸ್ವಯಂಸೇವಾ ಸಂಸ್ಥೆಗಳು ನಡೆಸುತ್ತಿರುವ ವೃದ್ಧಾಶ್ರಮಗಳಿಗೆ ಅನುದಾನವನ್ನು ನೀಡುತ್ತಿದೆ. ಹಿರಿಯರು ಆರೋಗ್ಯ ಕಾಪಾಡಿಕೊಂಡು ಜೀವನ ಅರ್ಥಪೂರ್ಣವಾಗಿಸಿಕೊಳ್ಳಬೇಕು ಎಂದು ಚಂದ್ರು ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು ಅವರು ಮಾತನಾಡಿ, ಇಂದಿನ ಜೀವನಶೈಲಿಯಲ್ಲಿ 60 ವರ್ಷ ದಾಟುವುದೇ ದೇವರು ನಮಗೆ ನೀಡಿರುವ ಉತ್ತಮ ಕೊಡುಗೆಯಾಗಿದೆ. ಹಿಂದೆ ಅವಿಭಕ್ತ ಕುಟುಂಬಗಳಿತ್ತು. ಹಿರಿಯರ ಮಾರ್ಗದರ್ಶನ ಕಿರಿಯರಿಗಿತ್ತು, ಹಿರಿಯರ ಮಾತಿಗೆ ಬೆಲೆ ಇತ್ತು. ಈಗ ಅದು ಇಲ್ಲವಾಗಿದೆ. ಕುಟುಂಬಗಳು ಸಣ್ಣದಾಗುತ್ತಿವೆ. ಹಿರಿಯರ ಬೈಗುಳವನ್ನು ಅವಮಾನಿಸದೇ ಆಶೀರ್ವಾದವೆಂದು ತಿಳಿಯಬೇಕು. ಆಗಮಾತ್ರ ಎಲ್ಲರ ಜೀವನ ಸುಗಮವಾಗಲಿದೆ. ಸಮಾಜದಲ್ಲಿ, ಕುಟುಂಬದಲ್ಲಿ ಶಾಂತಿ, ನೆಮ್ಮದಿ ನೆಲೆಸಲಿದೆ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಸುಭದ್ರದೇವಿ ಅವರು ಮಾತನಾಡಿ, ಸಂವಿಧಾನದಡಿ ಸಮಾಜದಲ್ಲಿ ಹಿರಿಯರಿಗೂ ಗೌರವಯುತವಾಗಿ ಬದುಕುವ ಹಕ್ಕು ಇದೆ. ಹಿರಿಯರ ರಕ್ಷಣೆಗಾಗಿ ಸರ್ಕಾರವು ಹಲವಾರು ಯೋಜನೆ, ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಅಲ್ಲದೆ ಹಿರಿಯರಿಗೆ ಅನುಕೂಲಕ್ಕಾಗಿ ಹಗಲು ಕ್ಷೇಮ ಕೆಂದ್ರಗಳನ್ನು ತೆರೆದಿದ್ದು, ಚಾಮರಾಜನಗರದಲ್ಲಿ 52 ಹಿರಿಯ ನಾಗರಿಕರು ಸೌಲಭ್ಯ ಪಡೆಯುತ್ತಿದ್ದಾರೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕೇಶವ್ ಶಾಂತಮೂರ್ತಿ, ಎನ್. ನಾಗೇಂದ್ರ, ನಿಂಗಶೆಟ್ಟಿ, ಎಚ್.ಆರ್. ಕೃಷ್ಣಯ್ಯ (ಘಟಂ ಕೃಷ್ಣ) ಅವರನ್ನು ಸನ್ಮಾನಿಸಲಾಯಿತು. ಹಿರಿಯ ನಾಗರಿಕರ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು.

ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಡಾ. ಕೆ.ಎನ್. ಮಂಜುನಾಥ್, ಜಿಲ್ಲಾ ಆಯುಷ್ ಅಧಿಕಾರಿ ಡಾ. ಸತೀಶ್ ಕುಮಾರ್, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷರಾದ ನಾಗೇಶ್, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಕ್ರಿಯಗೊಳ್ಳಬೇಕು: ಕಾವೇರಿ
ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಮುಂದೆ ಕ್ರೀಡಾಕೂಟ..!