ಬಳ್ಳಾರಿ: ಪ್ರಸ್ತುತ ಹಿರಿಯರು ಮಾನಸಿಕ ಹಿಂಸೆಗೆ ಒಳಗಾಗುತ್ತಿದ್ದು, ಸಮಾಜದಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿವೆ. ಹಾಗಾಗಿ ಕಿರಿಯರು ಹಿರಿಯರಿಗೆ ಗೌರವ ನೀಡುವುದರ ಮೂಲಕ ಮಾನವೀಯ ಮೌಲ್ಯ ಮೈಗೂಡಿಸಿಕೊಳ್ಳಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಹೇಳಿದರು.
ದೇಶವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಹಿಂದೆ ಕಿರಿಯರು ಹಿರಿಯರ ಮಾತುಗಳಿಗೆ ಹೆಚ್ಚಿನ ಗೌರವ ನೀಡುತ್ತಿದ್ದರು.ಆದರೆ ಇಂದಿನ ದಿನಗಳಲ್ಲಿ ಕಿರಿಯರು ಹಿರಿಯರಿಗೆ ಸೂಕ್ತ ಗೌರವ ನೀಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಪೋಷಕರ ಪ್ರೀತಿಯನ್ನು ಅರ್ಥೈಸಿಕೊಂಡು ಅವರನ್ನು ಉತ್ತಮವಾಗಿ ಆರೈಕೆ ಮಾಡಿದಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿರಿಯರಿಗೆ ಯಾವುದೇ ಸಮಸ್ಯೆಗಳಿದ್ದರೂ ಕಾನೂನು ನೆರವು ನೀಡಲು ಇಲಾಖೆ ಸದಾ ಸಿದ್ಧವಿದೆ. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಹಾಗೂ ನಮ್ಮ ಇಲಾಖೆ ನಿಮ್ಮ ಬೆಂಬಲಕ್ಕಿದ್ದು, ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ಒದಗಿಸಲಾಗುವುದು. ಹಿರಿಯರ ಆಚಾರ-ವಿಚಾರಗಳು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಿಯಾಗಿದ್ದು, ಅವರನ್ನು ಕಡೆಗಣಿಸದೆ ಪ್ರೀತಿ-ಗೌರವದಿಂದ ನೋಡಿಕೊಳ್ಳಬೇಕು ಎಂದರು.ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು:
ಕಾರ್ಯಕ್ರಮದ ಆರಂಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗಂಗಾಧರಯ್ಯ ಪ್ರಾರ್ಥನೆ ನೆರವೇರಿಸಿದರು. ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋವಿಂದಪ್ಪ ಎಚ್.ಎಂ.ಎಲ್ಲರನ್ನೂ ಸ್ವಾಗತಿಸಿದರು. ಚಂಗಾರೆಡ್ಡಿ ಬುದ್ಧಿಮಾಂಧ್ಯ ವಿದ್ಯಾ ಸಂಸ್ಥೆಯ ಆಡಳಿತಾಧಿಕಾರಿ ಕೆ.ಎಚ್.ಗುರುಮೂರ್ತಿ ಕಾರ್ಯಕ್ರಮ ನಿರೂಪಿಸಿದರು.