- ಬಸವ ಮಂದಿರದಲ್ಲಿ ಮನೆಮದ್ದು ಕಾರ್‍ಯಾಗಾರ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುನಮ್ಮ ಆಹಾರ ಪದ್ಧತಿಯಲ್ಲೆ ಬಹುತೇಕ ಕಾಯಿಲೆಗಳನ್ನು ದೂರವಾಗಿಸಿಕೊಳ್ಳಬಹುದೆಂದು ಆಯುರ್ವೇದ ತಜ್ಞ ಡಾ. ಚಂದ್ರಶೇಖರ್ ಹೇಳಿದರು.
ಕಲ್ಯಾಣನಗರದ ಬಸವಮಂದಿರದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಆಯೋಜಿಸಿದ್ದ ’ಮನೆಮದ್ದು’ ಕಾರ್‍ಯಾಗಾರದಲ್ಲಿ ವಿಶೇಷ ಉಪನ್ಯಾಸ ನೀಡಿ, ಭಾರತೀಯ ಆಹಾರ ಪದ್ಧತಿಯಲ್ಲಿ ವೈಜ್ಞಾನಿಕ ಹಾಗೂ ವೈಚಾರಿಕ ಸಂಗತಿಗಳು ಯಥೇಚ್ಛ ವಾಗಿವೆ. ಮನೆಯಂಗಳದಲ್ಲಿ ಬೆಳೆಯುವ ಎಲೆ, ಹೂ, ಹಣ್ಣು, ಗಡ್ಡೆ, ಕಾಯಿ, ಕಾಂಡ ಬಳಸಿಕೊಂಡು ನಮ್ಮನ್ನು ಕಾಡುವ ಅನೇಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಪಾರಾಗಬಹುದು ಎಂದರು.ಪಡಸಾಲೆಯಲ್ಲಿರುವ ಸಸ್ಯಜನ್ಯದಿಂದ ರಕ್ತದೊತ್ತಡ, ಸಕ್ಕರೆಕಾಯಿಲೆ ಸೇರಿದಂತೆ ಅನೇಕ ದೀರ್ಘಕಾಲೀನ ಸಮಸ್ಯೆ ಗಳಿಂದಲೂ ಮುಕ್ತಿ ಪಡೆಯಬಹುದು. ನಮ್ಮ ಹಿರಿಯರು ಆರೋಗ್ಯ ಕಾಳಜಿ ಹೊಂದಿದ್ದು, ನಿರಂತರ ಸೇವಿಸುವ ಆಹಾರ ದಲ್ಲೆ ಅನೇಕ ಕಾಯಿಲೆಗಳಿಗೆ ಪರಿಹಾರ ಕಂಡುಕೊಂಡಿದ್ದರು ಎಂದ ಡಾ. ಚಂದ್ರಶೇಖರ್. ಆಯುರ್ವೇದ ಶಾಸ್ತ್ರದಲ್ಲಿ ಒಂದೇ ವಸ್ತುವಿನಿಂದ ವಿವಿಧ ಕಾಯಿಲೆ ದೂರಮಾಡಬಹುದು ಎಂದರು. ತಗ್ಗಿ ಗಿಡದ ಎಲೆರಸ ತೆಗೆದು 250 ಮಿ.ಗ್ರಾಂ. ಶಿಲಾಜಿತುವನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿದರೆ ತಿಂಗಳಲ್ಲಿ ತೂಕ ಕಡಿಮೆ ಮಾಡಬಹುದು. ಹೊಮ್ಮುಗಳ ಬೇರಿನ ಕಷಾಯದಲ್ಲಿ ಬಾಯಿ ಮುಕ್ಕಳಿಸುವುದರಿಂದ ಗಂಟಲು ಕಡಿತ, ಹುಳುಕು ಹಲ್ಲು ತೊಂದರೆ ನಿವಾರಿಸಬಹುದು. ಅಗಸೆ ಎಲೆರಸಕ್ಕೆ ಒಂದು ಕಾಳುಮೆಣಸು, ಎರಡುತೊಟ್ಟು ಗೋಮೂತ್ರ ಸೇರಿಸಿ ನಶೆ ಮಾಡಿಸುವುದರಿಂದ ಮೂರ್ಛೆ ರೋಗ ನಿವಾರಣೆಯಾಗುತ್ತದೆ.
ಮೂಲವ್ಯಾಧಿ ತೊಂದರೆಗೆ ರಕ್ತಸ್ರಾವವಿದ್ದರೆ ಸೀಬೆಎಲೆ ಬಿಸಿಮಾಡಿ ಮೊಸರಲ್ಲಿ ಅರೆದು ಖಾಲಿಹೊಟ್ಟೆಯಲ್ಲಿ ಒಂದು ವಾರ ತಿನ್ನಬೇಕು. ದಾಸವಾಳದ ನಾಲ್ಕು ಎಲೆಗಳನ್ನು ಒಂದುವಾರ ನಿತ್ಯ ಖಾಲಿಹೊಟ್ಟೆಯಲ್ಲಿ ಸೇವಿಸುವುದು, 10 ಗ್ರಾಂ. ಕರಿ ಎಳ್ಳನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹತ್ತು ದಿನ ಸೇವಿಸಿ 4 ಚಮಚೆ ಬೆಣ್ಣೆ ಸೇವಿಸುವುದರಿಂದ ನಿವಾರಿಸಬಹುದೆಂದರು. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹಿಂದಿನ ದಿನದ ಮೊಸರಲ್ಲಿ ಕಲಸಿ ತಿನ್ನುವುದು ತಲೆನೋವಿಗೆ ಮದ್ದು. ಖಾಲಿ ಹೊಟ್ಟೆಗೆ ದೂದ್ ಪೇಡಾ, ಜಿಲೇಬಿ ಯಾವುದಾದರೊಂದನ್ನು ವಾರಸೇವಿಸಬೇಕು. ಶುಂಠಿಯನ್ನು ಸ್ವಲ್ಪ ಅರಿಶಿಣದೊಂದಿಗೆ ಅರೆದು ತಲೆಗೆ ಪಟ್ಟು ಹಾಕುವುದರಿಂದಲೂ ತಲೆಬೇನೆ ಕಡಿಮೆಯಾಗುತ್ತದೆ ಎಂದ ಅವರು, ನೂರಾರು ವ್ಯಾಧಿಯನ್ನು ಮನೆಮದ್ದಿನಿಂದಲೇ ಚಿಕಿತ್ಸೆ ಮಾಡಿಕೊಳ್ಳಬಹುದೆಂದು ವಿವರಿಸಿದರು.ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಆಶಾ ಮಲ್ಲೇಶ್ ಕಾರ್‍ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಣ್ಣಪುಟ್ಟ ಕಾಯಿಲೆಗಳಿಗೂ ಔಷಧಿ ಅಂಗಡಿಗೆ ಹೋಗಿ ಸಾಕಷ್ಟು ಹಣ ವ್ಯಯಿಸಿ ಅಷ್ಟಿಷ್ಟು ಆರೋಗ್ಯಕ್ಕೂ ಧಕ್ಕೆ ತಂದುಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಮನೆಮದ್ದು ಬಳಕೆಯಿಂದ ಪ್ರಯೋಜನ ಪಡೆಯಬಹುದು. ಮಹಿಳೆಯರ ಅನೇಕ ಸಮಸ್ಯೆಗಳಿಗೂ ಪಡಸಾಲೆ ಯಲ್ಲೆ ಪರಿಹಾರ ಸುಲಭವಾಗಿ ಕಂಡುಕೊಳ್ಳುವಂತಾಗಲು ಇಂದಿನ ಕಾರ್‍ಯಾಗಾರ ಸಹಕಾರಿ ಎಂದರು.ಆರೋಗ್ಯಭಾರತಿ ಸಂಯೋಜಕ ಶಿವಮೊಗ್ಗದ ಡಾ.ಶ್ರೀಧರ್ ಮತ್ತು ಜಿಲ್ಲಾಧ್ಯಕ್ಷ ಡಾ.ಶಿವರಾಜ್ ಕಾರ್‍ಯಗಾರದಲ್ಲಿ ಪಾಲ್ಗೊಂಡಿ ದ್ದರು. ಕಾರ್‍ಯದರ್ಶಿ ಆಶಾ ಹೇಮಂತ್, ಸಹ ಕಾರ್‍ಯದರ್ಶಿ ಮಧುಮತಿ ಶಿವಕುಮಾರ್ ವೇದಿಕೆಯಲ್ಲಿದ್ದರು. ನಿರ್ದೇಶಕರಾದ ವೀಣಾ ಮಲ್ಲಿಕಾರ್ಜುನ್ ಸ್ವಾಗತಿಸಿ, ರಮ್ಯ ಪ್ರಾರ್ಥಿಸಿ, ನಾಗಮಣಿ ಶಿವಕುಮಾರ್ ವಂದಿಸಿದರು. ದೇವಿಕಾ ಷಡಕ್ಷರಿ ನಿರೂಪಿಸಿದರು. 25 ಕೆಸಿಕೆಎಂ 1ಚಿಕ್ಕಮಗಳೂರಿನ ಕಲ್ಯಾಣನಗರದಲ್ಲಿ ಅಕ್ಕಮಹಾದೇವಿ ಮಹಿಳಾ ಸಂಘ ಆಯೋಜಿಸಿದ್ದ ’ಮನೆಮದ್ದು’ ಕಾರ್‍ಯಾಗಾರವನ್ನು ಡಾ. ಚಂದ್ರಶೇಖರ್ ಅವರು ಉದ್ಘಾಟಿಸಿದರು. ಆಶಾ ಮಲ್ಲೇಶ್, ಡಾ. ಶ್ರೀಧರ್ ಇದ್ದರು.