ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ
ಕಂಪ್ಲಿ: ಪಟ್ಟಣದಲ್ಲಿ ಅಪಘಾತಕ್ಕೊಳಗಾಗಿ ನರುಳುವ ಆಕಳು, ಗೂಳಿ, ಕರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಸ್ಥಳೀಯ ಕೇಸರಿ ಗೋ ಸೇವಾ ಪಡೆಯ ಯುವಕರು ಗೋ ಪ್ರೇಮ ಮೆರೆದಿದ್ದಾರೆ.ಇಲ್ಲಿನ ಯುವಕರ ತಂಡವೊಂದು ನಿತ್ಯ ರಾತ್ರಿ, ರಜೆ ದಿನಗಳು ಹಾಗೂ ಬಿಡುವಿನ ಸಮಯದಲ್ಲಿ ಗಾಯಗೊಂಡ ಹಾಗೂ ಕಾಯಿಲೆಗಳಿಂದ ನರಳುವಂತಹ ಗೋವು, ಗೂಳಿ, ಎತ್ತು ಹಾಗೂ ಕರುಗಳನ್ನು ಹುಡುಕಿ ಅವುಗಳಿಗೆ ಚಿಕಿತ್ಸೆ ನೀಡುವ ಮೂಲಕ ಗೋವುಗಳ ಸಂರಕ್ಷಣೆಗೆ ಪಣತೊಟ್ಟಿದ್ದಾರೆ.
ನಿತ್ಯ ಅಪಘಾತಕ್ಕೆ ಒಳಗಾಗಿ ರೋದಿಸುವ ಜಾನುವಾರು ಕಂಡಂತಹ ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎಂಬ ತಂಡ ಕಟ್ಟಿ ಗೋ ಸೇವೆ ಆರಂಭಿಸಿದೆ. ನಿತ್ಯ ಎಲ್ಲಾದರೂ ಅಪಘಾತಕ್ಕೆ ಒಳಗಾದ ಅಥವಾ ಯಾವುದಾದರು ಕಾಯಿಲೆಯಿಂದ ನರಳುವಂತಹ ಗೋವು ಕಂಡಲ್ಲಿ ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುತ್ತಾರೆ. ಗಾಯ, ಕಾಯಿಲೆ ಗುಣಮುಖವಾಗುವವರೆಗೂ ನಿತ್ಯ ಅದರ ಉಪಚಾರ ಮಾಡುತ್ತಾರೆ.
ಮೃತ ಗೋವುಗಳಿಗೆ ಅಂತ್ಯ ಸಂಸ್ಕಾರ:ಮೃತ ಕರು, ಗೋವುಗಳಿಗೆ ಪೂಜೆ ಸಲ್ಲಿಸಿ ಅಂತಿಮ ವಿಧಿವಿಧಾನ ನೆರವೇರಿಸುವ ಕಾರ್ಯವನ್ನು ಈ ತಂಡ ಮಾಡಿಕೊಂಡು ಬಂದಿದೆ. ಈ ಮೂಲಕ ತಂಡ ಮೆಚ್ಚುಗೆಗೆ ಪಾತ್ರವಾಗಿದೆ.ಗೋ ಮಾತೆ ಮನುಷ್ಯನ ಎರಡನೇ ತಾಯಿ. ಅವುಗಳ ಸಂರಕ್ಷಣೆ ನಮ್ಮ ಹೊಣೆ. ನಿಸ್ವಾರ್ಥದಿಂದ ಗೋವುಗಳ ಚಿಕಿತ್ಸೆ, ಲಾಲನೆ-ಪಾಲನೆಗೆ ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ ಗೋವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಿದ್ದೇವೆ ಎನ್ನುತ್ತಾರೆ ಕೇಸರಿ ಗೋ ಸೇವಾ ಪಡೆಯ ಪದಾಧಿಕಾರಿಗಳು.