ಕನ್ನಡಪ್ರಭ ವಾರ್ತೆ ಬೆಂಗಳೂರು
ಮಂಗಳವಾರ ನಸುಕಿನಲ್ಲಿ ಗೊರಗುಂಟೆಪಾಳ್ಯ ಸಿಗ್ನಲ್ ಬಳಿ ಚಲಿಸುತ್ತಿದ್ದ ಕಂಟೇನರ್ ಟ್ರಕ್ ಮೇಲೆ ಬೃಹತ್ ಮರ ಬಿದ್ದಿದೆ. ಅದೃಷ್ಟವಷಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಬೈಯ್ಯಪ್ಪನಹಳ್ಳಿಯಲ್ಲಿ ಖಾಸಗಿ ಬಸ್ ಮೇಲೆ ಮರ ಬಿದ್ದು ತೀವ್ರ ಹಾನಿಯಾಗಿದೆ. ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಇನ್ನು ಸಿ.ವಿ. ರಾಮನ್ ನಗರ, ಜೀವನ ಬಿಮಾ ನಗರದಲ್ಲಿ ಮರಗಳು ಉರುಳಿಬಿದ್ದು ರಸ್ತೆ ಬದಿ ನಿಲ್ಲಿಸಿದ್ದ ಕಾರುಗಳಿಗೆ ಅಲ್ಪ ಹಾನಿಯಾಗಿದೆ. ಬಸವೇಶ್ವರ ನಗರದಲ್ಲೂ ಮರವೊಂದು ಬಿದ್ದಿದೆ. ಪಾಲಿಕೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರಗಳನ್ನು ತೆರವುಗೊಳಿಸಿದ್ದಾರೆ.
ಭಾರಿ ಮಳೆಯಿಂದ ಮಂಗಳವಾರ ಬೆಳಗ್ಗೆಯು ನಗರದ ಅನೇಕ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕೆ.ಆರ್. ಮಾರ್ಕೆಟ್, ಪೀಣ್ಯ ಇಎಸ್‌ಐ ಆಸ್ಪತ್ರೆ ಹಾಗೂ ಪೀಣ್ಯ ಇಂಡಸ್ಟ್ರಿಯಲ್‌ಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಅಪಾರ ಪ್ರಮಾಣದ ನೀರು ನಿಂತು ರಸ್ತೆ ಸಂಚಾರಕ್ಕೆ ತೊಡಕಾಯಿತು. ನಗರದಲ್ಲಿ ಮಂಗಳವಾರ ಮಧ್ಯಾಹ್ನ 1ರವರೆಗೆ 43 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.