ಮುರಳೀಧರ್ ಶಾಂತಳ್ಳಿ
ಯಡವನಾಡು ಮೀಸಲು ಅರಣ್ಯದಲ್ಲಿ ಕಳವು ಮಾಡಿರುವ ತೇಗದ ಮರ ಹನನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯ ಹಾಗೂ ಅಧಿಕಾರದ ದುರುಪಯೋಗದ ಕುರಿತು ತನಿಖೆ ನಡೆಸಿ ಸಮಗ್ರ ವರದಿ ನೀಡುವಂತೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ಆದೇಶಿಸಿದ್ದಾರೆ. ವಾರದೊಳಗೆ ವರದಿ ನೀಡುವಂತೆ ಸೂಚಿಸಿದ್ದಾರೆ.
ಸ್ಥಳೀಯ ಆರೋಪಿಗಳೊಂದಿಗೆ ಇಲಾಖಾ ಸಿಬ್ಬಂದಿ ಶಾಮೀಲಾಗಿದ್ದಾರೆ ಎಂಬ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ , ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ಹೋರಾಟಕ್ಕೆ ಮಣಿದ ರಾಜ್ಯ ಅರಣ್ಯ ಇಲಾಖೆ ಕೊನೆಗೂ ಹೆಚ್ಚಿನ ತನಿಖೆಗೆ ಆದೇಶಿಸಿದೆ.ಈ ನಡುವೆಯೇ ಯಡವನಾಡು ಮೀಸಲು ಅರಣ್ಯದಲ್ಲಿ ತೇಗದ ಮರ ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ತನಿಖೆ ತೀವ್ರಗೊಳಿಸಿದ್ದು, ಹಿಂದೆ ವಶಪಡಿಸಿಕೊಂಡಿದ್ದ ಮರಗಳೊಂದಿಗೆ ಹಾರಂಗಿ ಹಿನ್ನೀರು ಪ್ರದೇಶದಲ್ಲಿ ಅಡಗಿಸಿಟ್ಟಿದ್ದ ತೇಗದ ನಾಟಾಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿಗಳೆಂದು ಗುರುತಿಸಿರುವ ಇಬ್ಬರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಹಾರಂಗಿ ಹಿನ್ನೀರಿನ ಬಳಿಯ ಕಾಡಿನಲ್ಲಿ ಅಡಗಿಸಿಟ್ಟಿದ್ದ 16 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 59 ನಾಟಾಗಳನ್ನು ವಶಕ್ಕೆ ಪಡೆಯಲಾಗಿದೆ.ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಾಟಾಗಳು!?
ಕಳೆದ 15 ದಿನಗಳ ಹಿಂದೆ ರಾತ್ರಿ ಕಾಜೂರು ಮೀಸಲು ಅರಣ್ಯದಲ್ಲಿ 7 ತೇಗದ ಮರಗಳನ್ನು ಕಳವು ಮಾಡುತ್ತಿದ್ದ ಸಂದರ್ಭ ಲಭಿಸಿದ ಮಾಹಿತಿಯಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ, ಓರ್ವನನ್ನು ಬಂಧಿಸಿದ್ದರೆ, ಉಳಿದ 5 ಮಂದಿ ತಲೆಮರೆಸಿಕೊಂಡಿದ್ದರು. ಒಟ್ಟು 6 ಆರೋಪಿಗಳ ವಿರುದ್ಧ ಈ ಹಿಂದೆ ಅರಣ್ಯ ಇಲಾಖಾಧಿಕಾರಿಗಳು ಮೊಕದ್ದಮೆ ದಾಖಲಿಸಿಕೊಂಡಿದ್ದರು. ಇದೀಗ ವಿಚಾರಣೆ ನಡೆಯುತ್ತಿರುವಂತೆ ಆರೋಪಿಗಳ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.ತನಿಖೆ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಜಾಮೀನು ಪಡೆದಿರುವ ಕೆಲ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗಾಗಿ ಕೆಲ ಮತ್ತೆ ವಶಕ್ಕೆ ಪಡೆದಿದ್ದಾರೆ. ಇದೀಗ ಕಳವು ಮಾಡಿದ ಮರಗಳ ಸಂಖ್ಯೆ 7 ರಿಂದ 59ಕ್ಕೆ ಏರಿರುವುದು ಹಲವು ಸಂಶಯಗಳಿಗೆಡೆ ಮಾಡಿದೆ.
ಕಳೆದ 9 ವರ್ಷಗಳಿಂದ ಕಾಜೂರು ಅರಣ್ಯ ವ್ಯಾಪ್ತಿಯಲ್ಲಿ ಆರ್‌ಆರ್‌ಟಿ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ ಸಿಬ್ಬಂದಿ ಪ್ರಕರಣ ಬೆಳಕಿಗೆ ಬಂದ ನಂತರ ಎಸಿಎಫ್ ಗೋಪಾಲ್ ಅವರ ಕಚೇರಿಯಲ್ಲಿ ನಡೆದ ವಿಚಾರಣೆಗೆ ಹಾಜರಾಗಿದ್ದ. ಆರಂಭದಲ್ಲಿ ಈತನ ಮೇಲೆ ಯಾವುದೇ ಸಂಶಯ ಇರದ ಹಿನ್ನೆಲೆ, ಇನ್ನಿತರ ಸಿಬ್ಬಂದಿಗಳ ವಿಚಾರಣೆಗಾಗಿ ಕಚೇರಿಯಿಂದ ಹೊರಗೆ ಇರುವಂತೆ ಅಧಿಕಾರಿಗಳು ತಿಳಿಸಿದ್ದರು. ಇದನ್ನೇ ಅವಕಾಶವನ್ನಾಗಿಸಿಕೊಂಡ ಆತ ಕಚೇರಿಯಿಂದ ಹೊರಬಂದವನು ನಂತರ ನಾಪತ್ತೆಯಾಗಿದ್ದಾನೆ. ನಂತರ ಈತನ ಮೊಬೈಲ್ ಕರೆಗಳ ಸಿಡಿಆರ್ ಪರಿಶೀಲನೆ ಸಂದರ್ಭ ತೇಗದ ಮರ ಕಳವು ಮಾಡಿದ ಇತರ ಆರೋಪಿಗಳೊಂದಿಗೆ ನಿರಂತರ ಸಂಪರ್ಕ ಇರುವುದು ಕಂಡುಬಂದಿದೆ. ಹೀಗಾಗಿ ಈತನ ವಿರುದ್ಧವೂ ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು, ಆತನ ಪತ್ತೆಗೆ ಬಲೆ ಬೀಸಲಾಗಿದೆ. 12 ಸಿಬ್ಬಂದಿಗಳನ್ನು ತನಿಖೆ ಒಳಪಡಿಸಿರುವ ಹಿರಿಯ ಅರಣ್ಯ ಇಲಾಖಾಧಿಕಾರಿಗಳು ಈಗಾಗಲೇ ಪ್ರಕರಣದ ಕುರಿತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗಾನಶ್ರೀ ಅವರಿಂದ ವರದಿ ಪಡೆದಿದ್ದಾರೆ.