ಸ್ವಚ್ಛತೆ ನೆಪದಲ್ಲಿ ಕೆಲಗೇರಿ ಕೆರೆಯ ಗಿಡಮರಗಳು ನೆಲಸಮ!

KannadaprabhaNewsNetwork |  
Published : Apr 17, 2025, 12:57 AM IST
16ಡಿಡಬ್ಲೂಡಿ8 ರಿಂದ 10ಕೆರೆ ಆವರಣ ಸ್ವಚ್ಛತೆ ಹೆಸರಿನಲ್ಲಿ ಜೆಬಿಸಿ ಬಳಸಿ ಗಿಡಗಳನ್ನು ಕೆಡವಿರುವ ದಶ್ಯಗಳು. | Kannada Prabha

ಸಾರಾಂಶ

ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ, ವಾಕರ್ಸ್ ಮತ್ತು ಜಾಗರ್ಸ್ ಪುಟ್ ಪಾತ್ ಮೇಲೆ ಜೆಸಿಬಿ ಓಡಿಸಿ, ಅದರ ಬಕೆಟ್ ಬಳಸಿ ಮರದ ಟೊಂಗೆಗಳನ್ನು ಸವರಿಸಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಟೊಂಗೆಗಳ ಜತೆಗೆ ಮರಗಳನ್ನು ಸಹ ನೆಲಸಮ ಮಾಡಲಾಗಿದೆ.

ಧಾರವಾಡ: ಇದು ಸಮೀಪದ ಕೆಲಗೇರಿ ಕೆರೆ ಆವಾರವನ್ನು ಸ್ವಚ್ಛ ಗೊಳಿಸುತ್ತಿರುವ ಪರಿ..!

ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ, ವಾಕರ್ಸ್ ಮತ್ತು ಜಾಗರ್ಸ್ ಪುಟ್ ಪಾತ್ ಮೇಲೆ ಜೆಸಿಬಿ ಓಡಿಸಿ, ಅದರ ಬಕೆಟ್ ಬಳಸಿ ಮರದ ಟೊಂಗೆಗಳನ್ನು ಸವರಿಸಿದ್ದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿ. ಟೊಂಗೆಗಳ ಜತೆಗೆ ಮರಗಳನ್ನು ಸಹ ನೆಲಸಮ ಮಾಡಲಾಗಿದೆ. ಫುಟಪಾತ್‌ನಲ್ಲಿ ಜೆಸಿಬಿ ಅಡ್ಡಾದಿಡ್ಡಿ ಅಡ್ಡಾಡಿದ್ದಕ್ಕೆ ಫುಟಪಾತ್ ಸಹ ಹಾಳಾಗುತ್ತದೆ ಎಂಬ ಸಾಮಾನ್ಯ ಜ್ಞಾನವೂ ಇಲ್ಲದಾಗಿದೆ.

ಪರಿಸರವಾದಿಗಳಾದ ಅಸ್ಲಾಂ ಅಬ್ಬಿಹಾಳ, ಪಂಡಿತ ಮುಂಜಿ, ಹರ್ಷವರ್ಧನ ಶೀಲವಂತ, ನೇಚರ್ ರಿಸರ್ಚ್ ಸೆಂಟರ್‌ನ ಸ್ವಯಂಸೇವಕರು ಹಾಗೂ ನೇಚರ್‌ ಫಸ್ಟ್‌ನ ಪಿ.ವಿ. ಹಿರೇಮಠ ಅವರುಗಳು ಶ್ರಮದಾನ ಮಾಡಿ, ಸಾವಿರಾರು ರುಪಾಯಿ ವೆಚ್ಚ ಮಾಡಿ ಸಿಂಗಾಪುರ ಚೆರ್ರಿ, ಹಣ್ಣಿನ ಗಿಡ ಮತ್ತು ಹೂವಿನ ಗಿಡ, ಕವಳಿ ಕಂಟಿ, ಬೋರೆ ಹಣ್ಣಿನ ಕಂಟಿ ತಂದು, ಪಾದಾಚಾರಿಗಳಿಗೆ ತೊಂದರೆ ಆಗದಂತೆ, ಅಕ್ಕಪಕ್ಕ ನೆಟ್ಟು, ಸ್ಥಳೀಯ ಪಕ್ಷಿಗಳಿಗಾಗಿ, ಆಹಾರ, ವಿಹಾರ ಮತ್ತು ಗೂಡು ಕಟ್ಟಿ ಪ್ರಜನನಕ್ಕೆ ಅನುವಾಗುವಂತೆ ಯೋಜಿಸಿ, ಯೋಚಿಸಿ ಕೆಲಸ ಮಾಡಿದ್ದರು.

ಮಹಾನಗರ ಪಾಲಿಕೆ ಹಾಗೂ ಕೃಷಿ ವಿಶ್ವವಿದ್ಯಾಲಯ ಮಹನೀಯರು ಸಹ ಇದಕ್ಕೆ ಆಗ ಸಾಕ್ಷಿಯಾಗಿದ್ದರು. ನೆರಳು ನೀಡಬಲ್ಲ ನೇರಳೆ, ಹುಣಿಸೆ ಮರಗಳೂ ಸಹ ಅಲ್ಲಿದ್ದವು. ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಭೇಟಿ ನೀಡಿ, ಪರಿಸ್ಥಿತಿ ಅವಲೋಕಿಸಿ, ನೈರ್ಮಲ್ಯ ಕಾಪಾಡುವಂತೆ ಸೂಚನೆ ನೀಡಿದ್ದೇ ತಡ ಅವೈಜ್ಞಾನಿಕವಾಗಿ ಜೆಸಿಬಿ ಬಳಸಿ, ಮರ, ಮುಳ್ಳು ಕಂಟಿ ಹೀಗೆ ಕಿತ್ತೆಸೆದು, ಸ್ವಚ್ಛ ಗೊಳಿಸುತ್ತಿದ್ದಾರೆ.

ಕಳೆದ ಒಂದು ವಾರದಿಂದ ನೀರಿನಲ್ಲಿನ ಆಮ್ಲಜನಕದ ಕೊರತೆಯಿಂದ ಕೆರೆ ಆವಾರದಲ್ಲಿ ನೂರಾರು ಮೀನು ಮೂರನೇ ಬಾರಿ ಸತ್ತು, ತೇಲುತ್ತಿವೆ. ರೂಹಿ ಮತ್ತು ಕಾಟ್ಲಾ ಪ್ರಜಾತಿಯ ಒಳನಾಡು ಮೀನುಗಾರಿಕೆ ಮೀನು, ಈಗ ಜೀವಂತ ಶವವಾಗಿವೆ. ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಧಾರಣಾ ಶಕ್ತಿ ಹೆಚ್ಚಿಸಲಿಲ್ಲ. ಸರಿಯಾಗಿ ಗಟಾರು, ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡಲಿಲ್ಲ. ಒಳ ಹರಿವು, ಹೊರ ಹರಿವಿನ ತೂಬು ಅಗಲಿಸಿ, ಪಾತಳಿ ಹಿಗ್ಗಿಸಿ, ನೀರು ಇಂಗಿ ಒಸರುವಂತೆ ಮಾಡಲಿಲ್ಲ. ನೇರ ಕೆರೆ ಸೇರುವ, ರಾಧಾಕೃಷ್ಣ ನಗರ, ಶ್ರೀನಗರ, ಭಾವಿಕಟ್ಟಿ ಪ್ಲಾಟ್, ಜಲದರ್ಷಿನಿಪುರದ ಗಟಾರು ನೀರು ಕೆರೆ ಸೇರದಂತೆ, ಪ್ರತ್ಯೇಕಿಸಿ ಹರಿಸುವ ವ್ಯವಸ್ಥೆ ಗಮನಿಸಲಿಲ್ಲ.

ಇದನ್ನು ಬಿಟ್ಟು ಹಸುರಾಗಿ ನಿಂತ ಅದೆಷ್ಟೋ ಪಕ್ಷಿಗಳಿಗೆ ಆಸರೆಯಾಗಿದ್ದ ಮರಗಳಿಗೆ ಜೆಸಿಬಿ ಬಳಸಿ, ಹಗಲು ಹೊತ್ತಿನಲ್ಲಿ ಕೊಲ್ಲಲಾಗಿದೆ. ಈಗಲಾದರೂ ಮರಗಳನ್ನು ಸವರುವುದನ್ನು ಬಿಟ್ಟು ಈ ರೀತಿ ಜೆಸಿಬಿ ಬಳಸಿ ಕೊಲ್ಲುವುದು ಬೇಡ ಎಂದು ಪರಿಸರವಾದಿ ಹರ್ಷವರ್ಧನ ಶೀಲವಂತ ಮಹಾನಗರ ಪಾಲಿಕೆ ಹಾಗೂ ಕೃಷಿ ವಿವಿ ಆಡಳಿತಕ್ಕೆ ಆಗ್ರಹಿಸಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ