ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಗಾಳಿ, ಮಳೆಗೆ ಧರೆಗುರುಳಿದ ಮರಗಳು, ವಿದ್ಯುತ್‌ ಕಂಬ

KannadaprabhaNewsNetwork | Updated : Apr 04 2025, 06:53 AM IST

ಸಾರಾಂಶ

ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸುರಿದ ಧಾರಾಕಾರ ಗಾಳಿ, ಮಳೆಗೆ ಅನೇಕ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಯಿತು, ಕೆಲವು ಕಡೆ, ಮರ ಬಿದ್ದ ಕಾರು-ಬೈಕ್‌ ಜಖಂಗೊಂಡಿವೆ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

 ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಗುರುವಾರ ಸುರಿದ ಧಾರಾಕಾರ ಗಾಳಿ, ಮಳೆಗೆ ಅನೇಕ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರ ಅಸ್ತವ್ಯಸ್ತ ಉಂಟಾಯಿತು, ಕೆಲವು ಕಡೆ, ಮರ ಬಿದ್ದ ಕಾರು-ಬೈಕ್‌ ಜಖಂಗೊಂಡಿವೆ, ವಿದ್ಯುತ್‌ ಕಂಬಗಳು ಉರುಳಿ ಬಿದ್ದಿವೆ.

ಪೂರ್ವ ಮುಂಗಾರು ಚುರುಕುಗೊಂಡ ಹಿನ್ನೆಲೆಯಲ್ಲಿ ನಗರದಲ್ಲಿ ಗುರುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಸೃಷ್ಟಿಯಾಗಿತ್ತು. ಬೆಳಗ್ಗೆಯೇ ಪೀಣ್ಯ, ದಾಸರಹಳ್ಳಿ, ಯಶವಂತಪುರ ಸೇರಿದಂತೆ ಮೊದಲಾದ ಕಡೆ ಹೆಚ್ಚಿನ ಮಳೆ ಸುರಿಯಿತು. ಕೆಲಕಾಲ ವಿರಾಮದ ನಂತರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಸುರಿದ ಧಾರಾಕಾರ ಮಳೆಯಿಂದ ಜನರ ಓಡಾಟಕ್ಕೆ ಅಡ್ಡಿ ಪಡಿಸಿತು.ಅದರಲ್ಲೂ ಬಿಟಿಎಂ ಲೇಔಟ್‌, ಕೋರಮಂಗಲ, ಜೆಪಿನಗರ ಸೇರಿದಂತೆ ನಗರದ ದಕ್ಷಿಣ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿತು. ಇದರಿಂದ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಸರ್ಜಾಪುರ ಮುಖ್ಯ ರಸ್ತೆ, ತಾವರೆಕೆರೆ ಮುಖ್ಯ ರಸ್ತೆ, ಅಗರ ಫ್ಲೈಓವರ್‌ ಸಮೀಪ, ಗೊರಗುಂಟೆ ಪಾಳ್ಯ ಜಂಕ್ಷನ್‌ ಸೇರಿದಂತೆ ಮೊದಲಾದ ಕಡೆ ರಸ್ತೆಯಲ್ಲಿ ಸುಮಾರು ಎರಡು ಅಡಿಗಿಂತ ಹೆಚ್ಚಿನ ಪ್ರಮಾಣ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.

ಕೆ.ಆರ್. ಪುರದಿಂದ ಬಾಣಸವಾಡಿ ಅಂಡರ್ ಪಾಸ್‌ವರೆಗೂ ಸಂಚಾರ ಅಸ್ತವ್ಯಸ್ತವಾಗಿತ್ತು. ಸುಮಾರು 4 ಕಿ.ಮೀ. ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರಿಂದ ವಾಹನ ಸವಾರರು ಸುಮಾರು 1 ಗಂಟೆಗೆ ಹೆಚ್ಚು ಕಾಲ ಕಾಯಬೇಕಾಯತು. ಇಂದಿರಾನಗರದ ಬಳಿಯೂ ರಸ್ತೆಯಲ್ಲಿ 2 ಅಡಿಗಳಷ್ಟು ನೀರು ನಿಂತು ವಾಹನಗಳು ಕೆಲ ಕಾಲ ನಿಂತಲ್ಲೇ ನಿಲ್ಲಬೇಕಾಯಿತು. ಜಾಲಹಳ್ಳಿ ಕ್ರಾಸ್ ಬಳಿಯೂ ಇದೇ ಸ್ಥಿತಿ ನಿರ್ಮಾಣವಾಗಿತ್ತು. ಜಯಮಹಲ್ ಬಳಿಯೂ ನೀರು ನಿಂತ ಪರಿಣಾಮ ವಾಹನಗಳು ಸರಾಗವಾಗಿ ಸಾಗಲು ಸಾಧ್ಯವಾಗಲಿಲ್ಲ.

ಈಜೀಪುರ ಮುಖ್ಯ ರಸ್ತೆಯಲ್ಲಿ ಕಟ್ಟಡದ ನೆಲ ಮಹಡಿಯಲ್ಲಿ 2 ಅಡಿಯಷ್ಟು ನೀರು ನಿಂತಿದೆ. ಒಳಭಾಗದಲಿದ್ದ 2 ಕಾರು, 4 ಬೈಕ್ ಜಲಾವೃತಗೊಂಡಿದ್ದು, ಮೋಟರ್ ಮೂಲಕ ನೀರು ಹೊರತೆಗೆಯಲಾಯಿತು. ಮುರುಗೇಶಪಾಳ್ಯದಲ್ಲಿ ಬೆಂಗಳೂರು ಜಲಮಂಡಳಿಯು ರಸ್ತೆಯ ಮಧ್ಯೆ ನೀರು ಹಾಗೂ ಕೊಳಚೆ ನೀರಿನ ಕೊಳವೆ ಅಳವಡಿಕೆಗೆ ಅಗೆದ ಗುಂಡಿ ಸರಿಯಾಗಿ ಮುಚ್ಚದ ಹಿನ್ನೆಲೆಯಲ್ಲಿ ಆಟೋ, ಕಾರು ಗುಂಡಿಯಲ್ಲಿ ಸಿಲುಕಿಕೊಂಡ ಘಟನೆ ನಡೆಯಿತು.

ಮರ ಬಿದ್ದು ವಾಹನ ಜಖಂ :

ಗುರುವಾರ ಸುರಿದ ಬಿರುಸಿನ ಮಳೆಗೆ 20ಕ್ಕೂ ಅಧಿಕ ಮರಗಳು ಸಂಪೂರ್ಣವಾಗಿ ಧರೆಗುರುಳಿದ್ದು, 50ಕ್ಕೂ ಅಧಿಕ ರೆಂಬೆಕೊಂಬೆ ಬಿದ್ದಿವೆ. ಈ ವೇಳೆ ವಿದ್ಯುತ್‌ ಕಂಬಗಳು ಸಹ ಬಿದ್ದಿವೆ. ರಾಜಾಜಿನಗರದಲ್ಲಿ ಮರ ಬಿದ್ದು, ಬೈಕ್‌ - ಕಾರು ಜಖಂಗೊಂಡಿವೆ. ಇದೇ ರೀತಿ ನಗರದ ವಿವಿಧ ಭಾಗದಲ್ಲಿ 6ಕ್ಕೂ ಅಧಿಕ ಕಾರು, ಬೈಕ್‌ ಆಟೋ ನಜ್ಜುಗುಜ್ಜಾಗಿವೆ. ಯಾವುದೇ ಪ್ರಾಣ ಹಾನಿ ಬಗ್ಗೆ ವರದಿಯಾಗಿಲ್ಲ.

ಇಂದು ಮುಂಗಾರು ಮಳೆ

ಗುರುವಾರ ಸರಾಸರಿ 1 ಸೆಂ.ಮೀ ಮಳೆಯಾಗಿದೆ. ನಗರದ ಪೂರ್ವ ಮತ್ತು ದಕ್ಷಿಣದಲ್ಲಿ ಹೆಚ್ಚು ಮಳೆ ಸುರಿದಿದ್ದು, ಉತ್ತರ ಹಾಗೂ ಪಶ್ಚಿಮ ಭಾಗದಲ್ಲಿ ಸಹ ಮಳೆಯಾಗಿದೆ. ಶುಕ್ರವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ. ಶನಿವಾರ ಮಳೆ ಕಡಿಮೆಯಾಗಲಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಸರ್ಕಾರ, ಬಿಬಿಎಂಪಿ ವಿರುದ್ಧ ಜನಾಕ್ರೋಶ

ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಯು ಬ್ರ್ಯಾಂಡ್‌ ಬೆಂಗಳೂರು ಹೆಸರಿನಲ್ಲಿ ಕೋಟ್ಯಾಂತರ ರು. ವೆಚ್ಚ ಮಾಡುವುದಕ್ಕೆ ಮುಂದಾಗಿದೆ. ಅದರಲ್ಲೂ ಟನಲ್‌ ರಸ್ತೆ ನಿರ್ಮಾಣ ಮಾಡುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಗುರುವಾರ ಸುರಿದ ಕೇವಲ 30 ನಿಮಿಷದ ಮಳೆಗೆ ರಸ್ತೆಗಳಲ್ಲಿ ಭಾರೀ ಪ್ರಮಾಣದ ನೀರು ನಿಂತು ಅದ್ವಾನ ಉಂಟಾಗಿದೆ. ಇದಾ ನಿಮ್ಮ ಬ್ರ್ಯಾಂಡ್‌ ಬೆಂಗಳೂರು ಎಂದು ಸಾಮಾಜಿಕ ಜಾಲ ತಾಣದಲ್ಲಿ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕೋರಮಂಗಲದಲ್ಲಿ 3.9 ಸೆಂ.ಮೀ ಮಳೆ

ಕೋರಮಂಗಲದಲ್ಲಿ ಅತಿ ಹೆಚ್ಚು 3.9 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಎಚ್‌ಎಎಲ್‌ 3.1, ವಿದ್ಯಾಪೀಠ ಹಾಗೂ ಮಾರತ್‌ ಹಳ್ಳಿ ತಲಾ 2.8, ವನ್ನಾರ್‌ಪೇಟೆ 2.6, ರಾಮಮೂರ್ತಿನಗರ ಹಾಗೂ ವಿಜ್ಞಾನನಗರದಲ್ಲಿ ತಲಾ 2.2, ಹೊಯ್ಸಳ ನಗರ ಹಾಗೂ ಪುಲಕೇಶಿನಗರದಲ್ಲಿ ತಲಾ 1.9, ಗರುಡಾಚಾರಪಾಳ್ಯ 1.8, ಎಚ್‌ಎಸ್‌ಆರ್‌ ಲೇಔಟ್‌, ಪಟ್ಟಾಭಿರಾಮನಗರ, ಬಿಟಿಎಂ. ಕೆಆರ್‌ಪುರ, ಬೆಳ್ಳಂದೂರಿನಲ್ಲಿ ತಲಾ 1.6, ಬಸವನಗುಡಿ 1.3, ನಂದಿನಿ ಲೇಔಟ್‌ 1.1 ಹಾಗೂ ಸಂಪಗಿರಾಮನಗರದಲ್ಲಿ 1 ಸೆಂ.ಮೀ ಮಳೆಯಾದ ವರದಿಯಾಗಿದೆ.

Share this article