ಶ್ರೀಗಳಿಂದ ಶ್ರೀಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟ ಹತ್ತುವ ಚಾರಣ

KannadaprabhaNewsNetwork |  
Published : Aug 16, 2026, 03:00 AM IST
15ಕೆಎಂಎನ್ ಡಿ48 | Kannada Prabha

ಸಾರಾಂಶ

ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೈರಸಂದ್ರ ಪ್ರವೇಶದ್ವಾರಕ್ಕೆ ಆಗಮಿಸಿದ ಶ್ರೀಗಳನ್ನು ಗ್ರಾಮಸ್ಥರು ಬೆಳ್ಳಿ ಮಾದರಿಯ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದು ದೇವಾಲಯದ ಬಳಿ ಮಂಗಳವಾದ್ಯ ಹಾಗೂ ಪೂರ್ಣಕುಂಭ ಸ್ವಾಗತಕೋರಿ ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಶ್ರಾವಣ ಮಾಸದ ಮೊದಲನೇ ಶನಿವಾರ ಪ್ರಯುಕ್ತ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ನಿರ್ಮಲಾನಂದನಾಥ ಶ್ರೀಗಳು ಸಹಸ್ರಾರು ಭಕ್ತರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ತಾಲೂಕಿನ ಭೈರಸಂದ್ರ ಗ್ರಾಮದ ಇತಿಹಾಸ ಪ್ರಸಿದ್ದ ಶ್ರೀಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟ ಹತ್ತುವ ಚಾರಣ ಕೈಗೊಂಡರು.

ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀಹದ್ದಿನಕಲ್ಲು ಹನುಮಂತರಾಯಸ್ವಾಮಿ ಬೆಟ್ಟದಲ್ಲಿ ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ಅದರಂತೆ ಈ ಬಾರಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಬೆಟ್ಟಹತ್ತಿ ವಿಶೇಷ ಪೂಜೆ ಅಭಿಷೇಕ ಹಾಗೂ ಭಜನೆ ನೆರವೇರಿಸಿದ್ದು ವಿಶೇಷವಾಗಿತ್ತು.

ಶನಿವಾರ ಬೆಳಗ್ಗೆ 7.30ಕ್ಕೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಭೈರಸಂದ್ರ ಪ್ರವೇಶದ್ವಾರಕ್ಕೆ ಆಗಮಿಸಿದ ಶ್ರೀಗಳನ್ನು ಗ್ರಾಮಸ್ಥರು ಬೆಳ್ಳಿ ಮಾದರಿಯ ಸಾರೋಟಿನಲ್ಲಿ ಮೆರವಣಿಗೆಯ ಮೂಲಕ ಗ್ರಾಮಕ್ಕೆ ಕರೆತಂದು ದೇವಾಲಯದ ಬಳಿ ಮಂಗಳವಾದ್ಯ ಹಾಗೂ ಪೂರ್ಣಕುಂಭ ಸ್ವಾಗತಕೋರಿ ಬರಮಾಡಿಕೊಂಡರು.

ಗ್ರಾಮದ ಶ್ರೀ ಹನುಮಂತರಾಯಸ್ವಾಮಿ ದೇವಾಲಯಕ್ಕೆ ಭೇಟಿಕೊಟ್ಟ ಶ್ರೀಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಬೆಟ್ಟದ ತಪ್ಪಲಿನಲ್ಲಿರುವ ಪಾದಕ್ಕೆ ಪೂಜೆ ಸಲ್ಲಿಸಿ ಹನುಮಂತರಾಯಸ್ವಾಮಿ ದೇವರ ಉತ್ಸವ ಮೂರ್ತಿಯೊಂದಿಗೆ ಸಹಸ್ರಾರು ಭಕ್ತರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳ ಜತೆಗೂಡಿ ಚಾರಣವನ್ನು ಆರಂಭಿಸಿದರು.

ಸುಮಾರು 40 ನಿಮಿಷಗಳ ಕಾಲ ನಡೆದ ಚಾರಣದಲ್ಲಿ ದಣಿವರಿಯದ ಶ್ರೀಗಳು ಹನುಮನ ಕುರಿತಾದ ಗೀತೆ, ಪಠಣದೊಂದಿಗೆ ಭಕ್ತರು ಹಾಗೂ ವಿದ್ಯಾರ್ಥಿಗಳನ್ನು ಹುರಿದುಂಬಿಸಿಕೊಂಡು ಬೆಟ್ಟಹತ್ತಿದರು. ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ, ಸಾಯಿಕೀರ್ತಿನಾಥ ಸ್ವಾಮೀಜಿ ಸೇರಿದಂತೆ ಸಹಸ್ರಾರು ಭಕ್ತರು ಹಾಗೂ ವಿದ್ಯಾರ್ಥಿಗಳು ಶ್ರೀಗಳೊಂದಿಗೆ ಹೆಜ್ಜೆ ಹಾಕಿದರು.

ಶ್ರೀಗಳ ಚಾರಣದ ಪ್ರಯುಕ್ತ ಬೆಟ್ಟ ಹಾಗೂ ದೇವಾಲಯವನ್ನು ತಿರಂಗ ಬಣ್ಣದ ಹೂವುಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಹದ್ದಿನ ಕಲ್ಲು ಹನುಮಂತರಾಯಸ್ವಾಮಿ ಬೆಟ್ಟ ವಿದ್ಯಾರ್ಥಿಗಳು ಹಾಗೂ ಭಕ್ತರಿಂದ ತುಂಬಿ ತುಳುಕುತ್ತಿತ್ತು. ಬೆಟ್ಟ ಹತ್ತುವಾಗ ಹಾಗೂ ಇಳಿಯುವಾಗ ಸಿಕ್ಕಂತಹ ಭಕ್ತರು ಹಾಗೂ ವ್ಯಾಪಾರಸ್ಥರನ್ನು ಶ್ರೀಗಳು ಮಾತನಾಡಿಸಿ ಆಶಿರ್ವದಿಸಿದರು.

ಬೆಟ್ಟವನ್ನೇರಿದ ಶ್ರೀಗಳು ದೇವಾಲಯದ ಮುಂಭಾಗದಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವ ಮೂಲಕ 80ನೇ ಸ್ವಾತಂತ್ರ್ಯೋತ್ಸವ ಆಚರಿಸಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿ ಚಾರಣದಲ್ಲಿಯೂ ದೇಶ ಪ್ರೇಮ ಮೆರೆದರು. ನಂತರ ಬೆಟ್ಟದ ಮೇಲಿರುವ ಹನುಮಂತರಾಯಸ್ವಾಮಿಗೆ ವಿಶೇಷ ಪೂಜಾ ಕೈಕಂರ್ಯಗಳನ್ನು ನೆರವೇರಿಸಿದರು. ಸುಮಾರು ಅರ್ಧ ಗಂಟೆ ಕಾಲ ನಡೆದ ವಿಶೇಷ ಪೂಜೆಯಲ್ಲಿ ಶ್ರೀಗಳು ಅಭಿಷೇಕ, ಮಹಾಮಂಗಳಾರತಿ ಮಾಡಿದರು.

ಈ ವೇಳೆ ನೆರದಿದ್ದ ಭಕ್ತರು ಸಾಮೂಹಿಕವಾಗಿ ಹನುಮಾನ್ ಚಾಲಿಸ ಪಠಣ ಮಾಡಿದರು. ಪೂಜೆ ನಂತರ ಶ್ರೀಗಳೇ ಸ್ವತಃ ಹಾರ್ಮೋನಿಯಂ ನುಡಿಸುವ ಮೂಲಕ ಕೆಲಕಾಲ ಹನುಮ ಹಾಗೂ ಶ್ರೀರಾಮನ ಕುರಿತಾದ ಗೀತೆಗಳ ಭಜನೆ ನಡೆಸಿದರು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ವಿವಿಧ ಶಾಖಾಮಠದ ಶ್ರೀಗಳು ಸಾಥ್ ನೀಡಿದರು. ಪೂಜೆ ಹಾಗೂ ಭಜನೆ ನಂತರ ಶ್ರೀಗಳು ಅಶಿರ್ವಚನ ನೀಡಿದರು.

ಶ್ರೀಗಳ ಚಾರಣ ಮುಕ್ತಾಯಗೊಂಡ ನಂತರ ಬೆಟ್ಟದ ತಪ್ಪಲಿನಲ್ಲಿ ಎಲ್ಲರಿಗೂ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.

ಆದಿಚುಂಚನಗಿರಿ ವಿವಿ ಉಪಕುಲಪತಿ ಡಾ.ಎಸ್.ಎನ್.ಶ್ರೀಧರ, ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ವೈ.ಪಿ.ಧಮೇಂದ್ರ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ನೆಲ್ಲಿಗೆರೆ ಬಾಲು, ಮಾಜಿ ನಿರ್ದೇಶಕ ಎಚ್.ಟಿ.ಕೃಷ್ಣೇಗೌಡ, ಸಮಾಜ ಸೇವಕ ಜವರನಹಳ್ಳಿ ಗೌರೀಶ್, ಮುಖಂಡರಾದ ಲ್ಯಾಬ್‌ಮಂಜು, ಪಾಳ್ಯರಘು, ಸಣಬಹರೀಶ್, ಕನ್ನಾಘಟ್ಟ ವೆಂಕಟೇಶ್, ದೇವಾಲಯದ ಟ್ರಸ್ಟ್‌ನ ಪಧಾಧಿಕಾರಿ ರಾಮಚಂದ್ರು ಸೇರಿದಂತೆ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಹಾಗೂ ವಿಶ್ವವಿದ್ಯಾಲಯದ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು, ಅಕ್ಕಪಕ್ಕದ ಗ್ರಾಮಗಳ ಗ್ರಾಮಸ್ಥರು ಚಾರಣದಲ್ಲಿ ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾಪರ್ಟಿ ಎಕ್ಸ್‌ಪೋಗೆ ಭರ್ಜರಿ ಜನ ಬೆಂಬಲ
ಡೆಂಘೀ ನಿಯಂತ್ರಣಕ್ಕೆ ಮುಂಜಾಗೃತ ಕ್ರಮ ಕೈಗೊಳ್ಳಿ: ಮದನಿ