ಗಿರಿಜನ ಕಾಲೋನಿಗಳಿಗೆ ಕನಿಷ್ಠ ಮೂಲಸೌಲಭ್ಯವಿಲ್ಲ

KannadaprabhaNewsNetwork |  
Published : Jun 29, 2025, 01:36 AM IST
27ಸಿಎಚ್‌ಎನ್‌54ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆಯಲ್ಲಿ ನಡೆದ ಗಿರಿಜನ ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಸದಸ್ಯ ಜಟೋತು ಹುಸೈನ್ ಮಾತನಾಡಿದರು.  | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಆಡಿನ ಕಣಿವೆಯಲ್ಲಿ ನಡೆದ ಗಿರಿಜನ ಸಭೆಯಲ್ಲಿ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಸದಸ್ಯ ಜಟೋತು ಹುಸೈನ್ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಗಿರಿಜನರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹತ್ತು ಹಲವು ಯೋಜನೆಗಳಿದ್ದರೂ ಗಿರಿಜನ ಕಾಲೋನಿಗಳಿಗೆ ಕನಿಷ್ಠ ಮೂಲಸೌಲಭ್ಯ ಒದಗಿಸದಿರುವ ಬಗ್ಗೆ ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಸದಸ್ಯ ಜಟೋತು ಹುಸೈನ್ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಆಡಿನಕಣಿವೆ ಗ್ರಾಮದಲ್ಲಿ ನಡೆದ ಗಿರಿಜನರ ಸಭೆಯಲ್ಲಿ ಮಾತನಾಡಿ, ಗಲ್ಲಿ ಟೂ ಡೆಲ್ಲಿ ರೋಡ್ ಆಗಬೇಕು ಎಂಬ ಮಾತಿದೆ. ಇದಕ್ಕಾಗಿಯೇ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಇದೆ. ಆರೋಗ್ಯ, ವಿದ್ಯೆ, ರಸ್ತೆ, ನೀರು ನಾಲ್ಕು ವಿಷಯಕ್ಕೆ ಕೇಂದ್ರ ಸರ್ಕಾರ ಗಮನ ಕೊಟ್ಟಿದೆ. ಹೀಗಿದ್ದರೂ ತಾಲೂಕಿನ ಗಿರಿಜನ ಕಾಲೋನಿಗಳಿಗೆ ರಸ್ತೆ, ಉಳಿದ ಸೌಲಭ್ಯಗಳಿಲ್ಲ, ಈಗಲೂ ಮೊಬೈಲ್‌ ಟವರ್ ಇಲ್ಲದ ಗ್ರಾಮಗಳು ಇವೆ ಎಂದರೆ ಹೇಗೆ ? ಸ್ಥಳೀಯ ಮಟ್ಟದಿಂದ ಎಲ್‌ಎಲ್‌ಎ ವರೆಗಿನ ಜನಪ್ರತಿನಿಧಿಗಳು ಏನು ಮಾಡುತ್ತಿದ್ದಾರೆ ಎಂದು ಬೇಸರ ಹೊರಹಾಕಿದರು.

ಕರ್ನಾಟಕಕ್ಕೆ ಹೋಲಿಸಿದರೆ ತಮಿಳುನಾಡಿನಲ್ಲಿ ಗಿರಿಜನರಿಗೆ ಸೌಲಭ್ಯಗಳು ಚೆನ್ನಾಗಿವೆ. ಬಂಜಾರ ಸಮುದಾಯಕ್ಕೆ ಸೇರಿದ ನಾನು ತಳಹಂತದಿಂದ ಬೆಳೆದು 3-4 ಚುನಾವಣೆಯಲ್ಲಿ ಸೋತ ಕಾರಣ ಪ್ರಧಾನಿ ಮೋದಿಯವರು ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಸಮಿತಿ ಸದಸ್ಯನಾಗುವ ಅವಕಾಶ ಮಾಡಿದ್ದಾರೆ. ನಮ್ಮ ಆಯೋಗ ನ್ಯಾಯಾಲಯಕ್ಕೆ ಸರಿಸಮನಾಗಿ ಕೆಲಸ ಮಾಡುತ್ತದೆ. ಎಲ್ಲಾ ಕಡೆ ಸಂಚರಿಸಿ ಜನರ ಕಷ್ಟ ಕೇಳಲು ನಾನು ಬಂದಿದ್ದೇನೆ. ಎನ್‌ಸಿಎಸ್‌ಟಿ ನಿಮಗಾಗಿಯೇ ಇದ್ದು, ನನಗಿರುವ ಅಧಿಕಾರಕ್ಕಿಂತ ಎನ್‌ಸಿಎಸ್‌ಟಿಗೆ ಎಲ್ಲರನ್ನೂ ಪ್ರಶ್ನಿಸುವ ಅಧಿಕಾರ ಇದೆ. ಏನೇ ಸಮಸ್ಯೆಗಳಿದ್ದರೂ ಮಾಹಿತಿ ನೀಡಿ ಎಂದು ಸಲಹೆ ನೀಡಿದರು. ಗಿರಿಜನ ಮುಖಂಡರು ಕಾಳಜಿಯಿಂದ ಕೆಲಸ ಮಾಡಿ. ನಮ್ಮ ಜನರಿಗೆ ಸಮಯ ಕೊಡಿ ಸಾಕು ಎಂದು ಸಲಹೆ ನೀಡಿದರು. ಎರಡು ತಿಂಗಳಲ್ಲಿ ರಸ್ತೆ, ತಿಂಗಳಲ್ಲಿ ಮೊಬೈಲ್ ಟವರ್ ಆಗಬೇಕು ತಾಕೀತು ಮಾಡಿದರು.

ಗಿರಿಜನ ಮುಖಂಡ ಮುದ್ದಯ್ಯ ಮಾತನಾಡಿ, ತಾಲೂಕಿನ 34 ಹಾಡಿಗಳಿಗೆ ಸಂಪರ್ಕ ರಸ್ತೆ ಇಲ್ಲ. 2013ರಿಂದ ಅರಣ್ಯದ ಕಿರು ಉತ್ಪನ್ನಗಳನ್ನು ಸಂಗ್ರಹಿಸಲು ಅವಕಾಶ ನೀಡುತ್ತಿಲ್ಲ. ಶೇ.3ರಷ್ಟು ಮೀಸಲಾತಿ ಬೇಕು ಎಂದು ಒತ್ತಾಯಿಸಿದರು. ಗ್ರಾಮದ ಯುವ ಮುಖಂಡ ಮಾಧು ಮಾತನಾಡಿ, ಪಿಎಂ ಜನ್‌ಮನ್ ಯೋಜನೆ ಇದ್ದರೂ ನಮ್ಮ ಗ್ರಾಮಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮೊಬೈಲ್ ಟವರ್ ಇಲ್ಲ. ಕೇರಳ ಮತ್ತು ತಮಿಳುನಾಡು ಮಾದರಿಯಲ್ಲಿ ಪಿವಿಟಿಜಿ ಯೋಜನೆಯ ಮನೆಗಳು ಆಗಬೇಕು. ಮನೆಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದಲೇ ಮಾಡಬೇಕು. ಸಾರಿಗೆ ಬಸ್‌ಗಳ ವ್ಯವಸ್ಥೆ ಆಗಬೇಕು. ಜನ್ ಮನ್ ಯೋಜನೆ ತಾಲೂಕಿನ ಪರಿಣಾಮಕಾರಿಯಾಗಿ ಅನುಷ್ಟಾನ ಆಗಬೇಕು. ಭೂಮಿ ಹಕ್ಕು, ಉತ್ತಮ ಶಿಕ್ಷಣ, ಆರೋಗ್ಯ ಸೇವೆ ಸುಧಾರಣೆ ಆಗಬೇಕು. ಪುನರ್ವಸತಿ ಆಗಿರುವ ಎಲ್ಲಾ ಹಾಡಿಗಳಿಗೂ ಮನೆಗಳು ಆಗಬೇಕು. ಸ್ಥಳೀಯವಾಗಿಯೇ ಮಾಶಾಸನ ನೀಡುವ ವ್ಯವಸ್ಥೆ ಆಗಬೇಕು. ಮಲ್ಟಿ ಪರ್ಪಸ್ ಸೆಂಟರ್‌ಗಳನ್ನು ಬೇಗ ಮಾಡಿಸಬೇಕು ಎಂದು ಒತ್ತಾಯಿಸಿದರು. ತಾಪಂ ಮಾಜಿ ಸದಸ್ಯ ನಾಗಮ್ಮ ಅರಣ್ಯ ಹಕ್ಕು ಬೇಕು ಎಂದು ಒತ್ತಾಯಿಸಿದರು. ರಾಷ್ಟ್ರೀಯ ಪರಿಶಿಷ್ಟ ವರ್ಗಗಳ ಆಯೋಗದ ಪ್ರಿನ್ಸಿಪಲ್ ಸೆಕ್ರಟರಿ ಪಿ.ಕಲ್ಯಾಣ ರೆಡ್ಡಿ, ಹಿರಿಯ ಅಧಿಕಾರಿ ಅಶೋಕ್ ಕುಮಾರ್ ಲಕ್ಕರ್ಸು, ಹಿರಿಯ ಸಂಶೋಧಕ ಆಕಾಶ್‌ ತ್ರಿಪಾಟಿ, ಮಾಜಿ ಸಚಿವ ಕಿರಣ್ ಕುಮಾರ್, ವಿಶೇಷ ಅಧಿಕಾರಿ ಅಂಜನಸಿಂಹ, ಎಡಿಸಿ ಜವರೇಗೌಡ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ತಹಸೀಲ್ದಾರ್ ರಮೇಶ್ ಬಾಬು, ಗ್ರಾಪಂ ಅಧ್ಯಕ್ಷ ವಿಷಕಂಠ, ಉಪಾಧ್ಯಕ್ಷೆ ಕಮಲ, ಲ್ಯಾಂಪ್ಸ್ ರಾಜ್ಯಾಧ್ಯಕ್ಷೆ ಕಾವೇರ, ಆರ್‌ಎಫ್‌ಒ ಮಹದೇವ್, ಗ್ರಾಮದ ಮುಖಂಡ ಸೊತ್ತಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೋಹನ್‌ಕುಮಾರ್, ಸೆಸ್ಕ್ ಎಇಇ ಕೆ.ಎಂ.ಸಿದ್ದಲಿಂಗಪ್ಪ, ಪಿಐ ಜಯಕುಮಾರ್, ಗ್ರಾಪಂ ಪಿಡಿಒ ಮೋಹನ್‌ಕುಮಾರ್ ಹಾಜರಿದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು