ಆದಿವಾಸಿಗಳು ದುಶ್ವಟಗಳಿಂದ ದೂರವಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು: ಮಹಮದ್ ಅಸ್ಗರ್ ಮುನ್ನಾ

KannadaprabhaNewsNetwork |  
Published : Nov 16, 2026, 01:30 AM IST
15ಸಿಎಚ್‌ಎನ್‌52ಚಾಮರಾಜನಗರದ ಜಿಲ್ಲಾಡಳಿತಭವನದ ಆವರಣದಲ್ಲಿರುವ ಜೆ.ಹೆಚ್. ಪಟೇಲ್ ಸಭಾಂಗಣದಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಅವರು ವೇದಿಕೆ ಕಾರ್ಯಕ್ರಮವನ್ನು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಅವರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇದೇ ವೇಳೆ ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಆದಿವಾಸಿ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಆದಿವಾಸಿ ಮಕ್ಕಳು ಸಾಂಸ್ಕçತಿಕ ನೃತ್ಯ ಮಾಡಿ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆದಿವಾಸಿ ಬುಡಕಟ್ಟು ಜನರ ಸ್ವಾತಂತ್ರ್ಯ, ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಹಕ್ಕುಗಳಿಗಾಗಿ ಹೋರಾಡಿದ ಭಗವಾನ್ ಶ್ರೀ ಬಿರ್ಸಾ ಮುಂಡಾ ಅವರ ಭಾವಚಿತ್ರ ಮೆರವಣಿಗೆಗೆ ಪಶುಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸಿ. ಪುಟ್ಟರಂಗಶೆಟ್ಟಿ ಅವರು ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿದರು. ಜನಜಾತಿಯ ಗೌರವ್ ದಿವಸ್ ಅಂಗವಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಚಾಮರಾಜೇಶ್ವರ ದೇವಾಲಯದಿಂದ ಜಿಲ್ಲಾಡಳಿತ ಭವನದವರೆಗೆ ವಿವಿಧ ಅಕರ್ಷಕ ಕಲಾತಂಡಗಳೊಂದಿಗೆ ಹಮ್ಮಿಕೊಳ್ಳಲಾಗಿದ್ದ ಬಿರ್ಸಾ ಮುಂಡಾ ಜಯಂತಿ ಮೆರವಣಿಗೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಬಳಿಕ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ಜೆ.ಎಚ್. ಪಟೇಲ್ ಸಭಾಂಗಣದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಅವರು ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ, ಬಳಿಕ ಗುಂಡ್ಲುಪೇಟೆ ತಾಲೂಕು ಮದ್ದೂರು ಕಾಲೋನಿಯಲ್ಲಿ ಪ್ರಧಾನ ಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ (ಪಿಎಂ-ಜನ್‌ಮನ್) ಯೋಜನೆಯಡಿ ನಿರ್ಮಿಸಿರುವ ಮಲ್ಟಿಪರ್ಪಸ್ ಸೆಂಟರ್ ನಾಮಫಲಕ ಅನಾವರಣಗೊಳಿಸಿದರು.

ಇದೇ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ ಅವರು ಮಾತನಾಡಿ, ಭಗವಾನ್ ಬಿರ್ಸಾ ಮುಂಡಾ ಅವರ ಜೀವಿತಾವಧಿ ಕೇವಲ 25 ವರ್ಷಗಳಾಗಿದ್ದರೂ ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಬುಡಕಟ್ಟು ಜನರ ಹಕ್ಕುಗಳಿಗಾಗಿ ಹೋರಾಟ, ತ್ಯಾಗ ನಮ್ಮೆಲ್ಲರಿಗೂ ಸ್ಫೂರ್ತಿಯಾಗಿದೆ. ಅವರ ಅವಿರತ ಹೋರಾಟದ ಫಲವಾಗಿಯೇ ಆದಿವಾಸಿಗಳಿಗೆ ಅರಣ್ಯದಲ್ಲಿ ನೆಮ್ಮದಿಯಾಗಿ ಬದುಕಲು ನೆಲೆ ಸಿಕ್ಕಿದೆ. ಆದಿವಾಸಿಗಳು ದುಶ್ವಟಗಳಿಂದ ದೂರವಿದ್ದು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಮುಖ್ಯವಾಹಿನಿಗೆ ಬರಬೇಕು ಎಂದರು.

ಕೊಳ್ಳೇಗಾಲ ಪ್ರಭಾರ ಉಪವಿಭಾಗಾಧಿಕಾರಿ ಸುಬ್ರಮಣ್ಯ ಅವರು ಮಾತನಾಡಿ, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಅಚ್ಚಳಿಯದ ಹೆಸರು ಬಿರ್ಸಾ ಮುಂಡಾ ಅವರದ್ದು, ಬುಡಕಟ್ಟು ಜನರ ಸಂಸ್ಕೃತಿ, ಭಾಷೆ ಸಂರಕ್ಷಿಸಿ ಬ್ರಿಟಿಷರ ಶೋಷಣೆ, ದೌರ್ಜನ್ಯವನ್ನು ಮೆಟ್ಟಿನಿಂತ ಅಪ್ರತಿಮ ಹೋರಾಟಗಾರ ಬಿರ್ಸಾ ಮುಂಡಾ ಸ್ವಾತಂತ್ರ ಹೋರಾಟಗಾರ ಮಾತ್ರವಲ್ಲ, ಸಮಾಜ ಸುಧಾರಕರು ಆಗಿದ್ದರು. ಅವರ ಅಪ್ರತಿಮ ಧೈರ್ಯ, ತ್ಯಾಗ ಅನುಕರಣೀಯವಾಗಿದೆ ಎಂದು ತಿಳಿಸಿದರು.

ಮುಖ್ಯ ಭಾಷಣ ಮಾಡಿದ ಜಿಲ್ಲಾ ಬುಡಕಟ್ಟು ಸೋಲಿಗರ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ. ಸಿ. ಮಾದೇಗೌಡ ಅವರು, ಭಾರತ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರೊಂದಿಗೆ ಹೋರಾಡಿದ ಮೊದಲ ವ್ಯಕ್ತಿ ಬಿರ್ಸಾ ಮುಂಡಾ. ಜಾರ್ಖಂಡ್‌ನಲ್ಲಿ ಜನಿಸಿದ ಬಿರ್ಸಾ ಮುಂಡಾ ಈ ನೆಲ, ಜಲ, ಅರಣ್ಯ ಹಕ್ಕುಗಳಿಗಾಗಿ ಹೋರಾಡಿದ ಮಹಾನ್ ಚೇತನ. ಅವರಿಗೆ ಗೌರವ ಸಲ್ಲಿಸಲು 2021ರಿಂದ ಪ್ರತಿವರ್ಷ ಜನಜಾತೀಯ ಗೌರವ ದಿವಸ್ ಹೆಸರಿನಲ್ಲಿ ಜಯಂತಿ ಆಚರಿಸಲಾಗುತ್ತಿದೆ. ಆದಿವಾಸಿಗಳು ಈ ದೇಶದ ಮೂಲನಿವಾಸಿಗಳು. ಅರಣ್ಯ ಸಂರಕ್ಷಣೆಯಲ್ಲಿ ಬುಡಕಟ್ಟು ಜನರ ಪಾತ್ರ ಅಪಾರವಾಗಿದೆ. ಆದಿವಾಸಿಗಳಿದ್ದರೆ ಕಾಡು ಜೀವಂತವಾಗಿರಲಿದೆ. ಈ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಣಿಗಳೊಂದಿಗೆ ಸಹಬಾಳ್ವೆ ನಡೆಸಬೇಕಾಗಿದೆ ಎಂದರು.

ವಾಸಿಸುತ್ತಿದ್ದ ಅದಿವಾಸಿ ಜನರೊಂದಿಗೆ ವಿದ್ಯೆ ಕಲಿಯುವ ಉದ್ದೇಶದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಬಿರ್ಸಾ ಮುಂಡಾ ಅವರು ಬಳಿಕ ಬ್ರಿಟಿಷರ ದೌರ್ಜನ್ಯದಿಂದ ರೊಚ್ಚಿಗೆದ್ದರು. ಛೋಟಾ ನಾಗಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆದಿವಾಸಿಗಳ ಜೇನು ಸಂಗ್ರಹಣೆಯಂಥ ಕುಲಕಸುಬುಗಳಿಗೆ ಬ್ರಿಟಿಷರು ಅಡ್ಡಿಪಡಿಸಿ ಸುಂಕ ವಿಧಿಸುತ್ತಿದ್ದರು. ಜತೆಗೆ ಉಳಿಗಮಾನ್ಯ ಪದ್ದತಿಯಡಿ ಭೂ ಮಾಲೀಕರ ಶೋಷಣೆಯನ್ನು ಸಹಿಸದ ಬಿರ್ಸಾ ಮುಂಡಾ ಅವರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಚರಿಸಿ ಆದಿವಾಸಿಗಳನ್ನು ಸಂಘಟಿಸಿ ಬಿಲ್ವಿದ್ಯೆ ಹಾಗೂ ಗೆರಿಲ್ಲಾ ಯುದ್ದ ತರಬೇತಿ ನೀಡಿ ಬ್ರಿಟಿಷರನ್ನು ಹಿಮ್ಮೆಟ್ಟಿದ್ದರು. ಒಟ್ಟಾರೆ ಬ್ರಿಟಿಷರಿಗೆ ಹಾಗೂ ಭೂ ಮಾಲೀಕರಿಗೆ ಸಿಂಹಸ್ವಪ್ನರಾಗಿದ್ದ ಬಿರ್ಸಾ ಮುಂಡಾ ಅವರು ಇತಿಹಾಸದ ಪುಟದಲ್ಲಿ ಚಿರಸ್ಮರಣೀಯರಾಗಿದ್ದಾರೆ ಎಂದು ಹೇಳಿದರು.

ರಾಜ್ಯ ಅರಣ್ಯ ಹಕ್ಕು ಸಮಿತಿ ಸದಸ್ಯರು ಹಾಗೂ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಆದಿವಾಸಿ ಮುಖಂಡರಾದ ಮುದ್ದಯ್ಯ, ಈ ಬಾರಿಯ ರಾಜ್ಯಮಟ್ಟದ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಕೇತಮ್ಮ ಹಾಗೂ 2024ರ ಸಾಲಿನ ವಾಲ್ಮೀಕಿ ಪ್ರಶಸ್ತಿ ಪುರಸ್ಕೃತರಾದ ಡಾ. ರತ್ನಮ್ಮ ಅವರು ಕಾರ್ಯಕ್ರಮದಲ್ಲಿ ಬಿರ್ಸಾ ಮುಂಡಾ ಅವರ ಕುರಿತು ಮಾತನಾಡಿದರು.

ಇದೇ ವೇಳೆ ಕಳೆದ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆಗೈದ ಆದಿವಾಸಿ ಮಕ್ಕಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಆದಿವಾಸಿ ಮಕ್ಕಳು ಸಾಂಸ್ಕçತಿಕ ನೃತ್ಯ ಮಾಡಿ ಗಮನ ಸೆಳೆದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ಶಶಿಧರ್, ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಹೊನ್ನರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹರೀಶ್, ಬುಡಕಟ್ಟು ಸಮುದಾಯದ ಮುಖಂಡರಾದ ಜಡೇಸ್ವಾಮಿ, ರಂಗೇಗೌಡ, ಬಸವರಾಜು, ಪುಟ್ಟಮ್ಮ, ಕೋಣೂರೇಗೌಡ, ದೊಡ್ಡಸಿದ್ದಯ್ಯ, ಶಿವಣ್ಣ, ಮಹದೇವ, ಗೂಳಿಪುರ ಮಹದೇವಮ್ಮ, ಚೆಲುವರಾಜು, ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಸಂಪರ್ಕ ಹೆಚ್ಚಳದಿಂದ ಅಭಿವೃದ್ಧಿಗೆ ಪೂರಕ: ಶಾಸಕ ದಿನಕರ ಶೆಟ್ಟಿ
ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಕೆ.ರುದ್ರಪ್ಪ ಆಯ್ಕೆ