ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡವರ ನರಮೇಧದ ದೇವಟ್ ಪರಂಬುವಿನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಮಾಸಿಕ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸಿತು.ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಹಾಗೂ ಸದಸ್ಯರು ದೇವಟ್ ಪರಂಬುವಿನ ಸ್ಮಾರಕ ಸ್ಥಳದಲ್ಲಿ ಹಿರಿಯರಿಗೆ ಪುಷ್ಪ ನಮನ ಸಲ್ಲಿಸಿ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ ಸೇರಿದಂತೆ ವಿವಿಧ ಬೇಡಿಕೆಗಳ ಪರ ಪ್ರತಿಜ್ಞಾವಿಧಿ ಸ್ವೀಕರಿಸಿದರು.ಈ ಸಂದರ್ಭ ಮಾತನಾಡಿದ ಎನ್.ಯು.ನಾಚಪ್ಪ, 1785 ಡಿ.12ರಂದು ಟಿಪ್ಪು ಸುಲ್ತಾನನ ನೇತೃತ್ವದ ಮೈಸೂರು ಸುಲ್ತಾನರು ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ರೂಪಿಸಿದ ಸಂಚಿನಿಂದ ದುರಂತ ಅಂತ್ಯ ಕಂಡ ಹಿರಿಯ ಕೊಡವ ಯೋಧರನ್ನು ಸ್ಮರಿಸುವ ಮೂಲಕ ಸಿಎನ್‌ಸಿ ತನ್ನ ಹೋರಾಟದ ಬಲವನ್ನು ಹೆಚ್ಚಿಸಿಕೊಂಡಿದೆ ಎಂದರು.ಕೆಳದಿ/ಪಾಲೇರಿ ರಾಜ ಪರಿವಾರದ ಅಧೀನದಲ್ಲಿದ್ದ ಕೊಡಗು ರಾಜ್ಯವನ್ನು ಪರಾಕ್ರಮಿ ಕೊಡವರು ಹೈದರ್ ಮತ್ತು ಟಿಪ್ಪುವಿನ ಆಕ್ರಮಣದಿಂದ 31ಕ್ಕೂ ಹೆಚ್ಚು ಬಾರಿ ಕಾಪಾಡಿದರು. ಈ ಸೋಲಿನ ಸೇಡು ತೀರಿಸಿಕೊಳ್ಳಲು, ಟಿಪ್ಪು ಕೊಡವ ಬುಡಕಟ್ಟು ಜನಾಂಗವನ್ನು ವಂಚನೆಯ ಮೂಲಕ ಸಂಪೂರ್ಣವಾಗಿ ನಾಶಮಾಡಲು ಸಂಚು ಹೂಡಿದನು. ಟಿಪ್ಪುವಿನ ಸಂಚಿನಿಂದ ದೇವಟ್ ಪರಂಬುವಿನಲ್ಲಿ ನಡೆದ ನರಮೇಧದ ಸ್ಮರಣಾರ್ಥ ಅಂತಾರಾಷ್ಟ್ರೀಯ ಸ್ಮಾರಕ ನಿರ್ಮಾಣ ಮಾಡಬೇಕು ಹಾಗೂ ಕೊಡವರ ನರಮೇಧವನ್ನು ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಹತ್ಯಾಕಾಂಡದ ನೆನಪಿನ ಪಟ್ಟಿಯಲ್ಲಿ ಸೇರಿಸಬೇಕು ಎಂದು ಒತ್ತಾಯಿಸಿದರು.ಅರಮನೆ ಪಿತೂರಿಗಳ ಮೂಲಕ ನಡೆದ ಕೊಡವರ ಹತ್ಯಾಕಾಂಡವನ್ನು ಕ್ಷಮಿಸಲು ಮತ್ತು ಮರೆಯಲು ಸಾಧ್ಯವಿಲ್ಲ. ಕೊಡವ ಸಮುದಾಯವು ಈ ಕೃತ್ಯಗಳಿಂದ ತಲೆಮಾರುಗಳ ನಡುವಿನ ಆಘಾತವನ್ನು ಅನುಭವಿಸುತ್ತಲೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು, ಆದಿಮಸಂಜಾತ ಕೊಡವ ಜನಾಂಗೀಯ ಬುಡಕಟ್ಟು ಜನಾಂಗಕ್ಕೆ ಎಸ್‌ಟಿ ಟ್ಯಾಗ್ ಕಲ್ಪಿಸಬೇಕು, ಕೊಡವ ಭೂಮಿ, ಭಾಷೆ, ಸಾಂಸ್ಕೃತಿಕ ಪರಂಪರೆಯ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ‍್ಯಕ್ಕಾಗಿ ಸಾಂವಿಧಾನಿಕ ಖಾತ್ರಿ ಒದಗಿಸಬೇಕು, ಕೊಡವ ಸಾಂಪ್ರದಾಯಿಕ ಸಂಸ್ಕಾರ ಗನ್ ಹಕ್ಕಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು, ಅಂತಾರಾಷ್ಟ್ರೀಯ ಸ್ಥಳೀಯ ಜನರ ಸಮಾವೇಶದ ಅಡಿಯಲ್ಲಿ ಕೊಡವರಿಗೆ ಯುಎನ್‌ಒ ಮಾನ್ಯತೆ ನೀಡಬೇಕು, ರಾಷ್ಟ್ರೀಯ ಜಾತಿಗಣತಿ ಸಂದರ್ಭ ಕೊಡವರಿಗೆ ಪ್ರತ್ಯೇಕ ಕೋಡ್ ಮತ್ತು ಕಾಲಂ ಸೇರಿಸಬೇಕು, ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಸಿಎನ್‌ಸಿ ಸಂಘಟನೆ ಇನ್ನು ಮುಂದೆಯೂ ಶಾಂತಿಯುತ ಹೋರಾಟ ನಡೆಸಲಿದೆ ಮತ್ತು ಹತ್ಯೆಗೊಳಗಾದ ಹಿರಿಯ ಕೊಡವ ಯೋಧರಿಂದ ಆಶೀರ್ವಾದ ಪಡೆಯಲಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದರು.ಪಟ್ಟಮಾಡ ಕುಶ, ಅರೆಯಡ ಗಿರೀಶ್ ಹಾಗೂ ಮಂದಪಂಡ ಮನೋಜ್ ಹಾಜರಿದ್ದು ಪುಷ್ಪನಮನ ಸಲ್ಲಿಸಿದರು.