ರಾಮನಗರ: ಹಸೆ ಚಿತ್ತಾರ ಕಲೆಯನ್ನು ರಾಷ್ಟ್ರ ಮಟ್ಟದಲ್ಲಿ ಬೆಳೆಸಿದ ಕೀರ್ತಿ ಹಸೆ ಗೋಡೆ ಚಿತ್ತಾರದ ಕಲಾವಿದೆ ಲಕ್ಷ್ಮೀ ರಾಮಪ್ಪಗೆ ಸಲ್ಲುತ್ತದೆ ಎಂದು ಜಾನಪದ ಪರಿಷತ್ ಅಧ್ಯಕ್ಷ ಪ್ರೊ.ಹಿ.ಚಿ. ಬೋರಲಿಂಗಯ್ಯ ಹೇಳಿದರು.
ನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ ಹಾಗೂ ಜಾನಪದ ಲೋಕ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾಡೋಜ ಎಚ್.ಎಲ್.ನಾಗೇಗೌಡರ ನೆನಪಿನ ‘ಲೋಕಸಿರಿ-100’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಲಕ್ಷ್ಮಿ ರಾಮಪ್ಪ ಒಬ್ಬಂಟಿಯಾಗಿ ಮೂಲ ಕಲೆಯನ್ನು ಉಳಿಸಿಕೊಂಡು ಬಂದಿರುವುದು ವಿಶೇಷ. ಚಿತ್ತಾರ ಕಲೆಯನ್ನು ತಪಸ್ಸಿನೋಪಾದಿಯಲ್ಲಿ ಅಪ್ಪಿಕೊಂಡಿದ್ದಾರೆ. ಇಂತಹ ಕಲಾವಿದರಿಗೆ ನೂರರ ಸಂಭ್ರಮದಲ್ಲಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.ಕರ್ನಾಟಕ ಜಾನಪದ ಪರಷತ್ ನಿವೃತ್ತ ಕಾರ್ಯದರ್ಶಿ ಡಾ.ಚಕ್ಕೆರೆ ಶಿವಶಂಕರ್ ಮಾತನಾಡಿ, ನೂರು ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವ ಆಡಳಿತ ಮಂಡಳಿ ಸದಸ್ಯರು ಮತ್ತು ಸಿಬ್ಬಂದಿಗಳ ಶ್ರಮ ಅಪಾರವಾದದು. ಪರಿಷತ್ತಿಗೆ ಅಂತಾರಾಷ್ಟ್ರೀಯ ಮಾನ್ಯತೆ ಸಿಕ್ಕಿರುವುದು ಮತ್ತಷ್ಟು ಸಂತೋಷವಾಗಿದೆ. ಹುಚ್ಚಪ್ಪ ಮಾಸ್ತರು ಇಂತಹ ಅನೇಕ ಕಲಾವಿದರನ್ನು ಗುರುತಿಸುವುದರಲ್ಲಿ ಪ್ರಮುಖರಾಗಿದ್ದರು. ಜಾನಪದ ವಿದ್ವಾಂಸರ ಸಂಶೋಧನೆಗಳು ಊರೀಂದಾಚೆ ಹೋಗಲ್ಲ. ಇಂತಹ ಕಲಾವಿದರ ಕೇಂದ್ರಿತ ಅಧ್ಯಯನಗಳು ನಡೆಯುತ್ತಿಲ್ಲ. ಗಾಯನ ಪರಂಪರೆಯಲ್ಲಿ ಮೂಲಗಾಯಕರು ಹಳ್ಳಿಗಳಲ್ಲೇ ಉಳಿಯುತ್ತಿದ್ದು ಕಲಿತ ಗಾಯಕರು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಈ ಎರಡೂ ಪರಂಪರೆಗಳು ಸಮಾನಾಂತರವಾಗಿ ಸಾಗಿದರೆ ಮಾತ್ರ ಗಾಯನ ಕಲೆ ಉಳಿಯುತ್ತದೆ ಎಂದು ಹೇಳಿದರು.
ಕಲಾವಿದೆ ಲಕ್ಷ್ಮೀ ರಾಮಪ್ಪ ಮಾತನಾಡಿ, ಹಸೆ ಚಿತ್ತಾರದ ಹಿನ್ನೆಲೆ, ಪ್ರಾಮುಖ್ಯತೆ, ವಿವಿಧ ಬಗೆಗಳನ್ನು ಚಿತ್ರಗಳ ಸಮೇತ ವಿವರಿಸಿದರು. ಬಾಗಿಲು ತೋರಣ, ತೇರು, ಡಬ್ಬಲ್ ತೇರು, ಚಕ್ಕಲಬಾಕ್ಲು, ಆರತಿ, ಒಂದು ಮನೆ; ಎರಡು ಮನೆ ಚಿತ್ತಾರ, ವಸ್ತ್ರ, ಸೀರೆ ಸಿಂಬೆ, ತಿರಗಣೆ ಮಣೆ, ಕಳಸ ಹೀಗೆ ವಿವಿಧ ಬಗೆಯ ಚಿತ್ತಾರಗಳ ವೈವಿಧ್ಯತೆ ಪರಿಚಯಿಸಿದರು.ಭೂಮಣ್ಣು ಬುಟ್ಟಿಯ ಹಿನ್ನೆಲೆ, ಕಲೆಗೆ ಬಳಸುವ ಪ್ರಾಕೃತಿಕ ಬಣ್ಣಗಳಾದ ಬಿಳಿ, ಕೆಂಪು, ಕಪ್ಪು, ಹಳದಿ ಬಣ್ಣಗಳ ತಯಾರಿಕೆ ಮತ್ತು ಉಪಯೋಗಗಳ ಕುರಿತು ತಿಳಿಸಿದರು. ಪ್ರಾತ್ಯಕ್ಷಿಯಲ್ಲಿ ಬತ್ತದ ತೆನೆ ಮತ್ತು ಪಕ್ಷಿಯ ಚಿತ್ತಾರಗಳನ್ನು ಬಿಡಿಸಿದರು.
ನಾಡೋಜ ಎಚ್.ಎಲ್. ನಾಗೇಗೌಡರ ನೆನಪಿನಲ್ಲಿ ಪ್ರತಿ ತಿಂಗಳು ನಡೆಯುವ ತಿಂಗಳ ಅತಿಥಿ-100ರ ಸಂಭ್ರಮದ ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಗಡೇಮನೆಯ ಹಸೆ ಗೋಡೆ ಚಿತ್ತಾರ ಕಲಾವಿದೆ ಲಕ್ಷ್ಮಿ ರಾಮಪ್ಪರನ್ನು ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ಇಒ ಸರಸವಾಣಿ, ಕ್ಯೂರೇಟರ್ ಡಾ. ರವಿ, ರಂಗಸಹಾಯಕ ಪ್ರದೀಪ್, ಸಂಶೋಧನಾ ಸಂಚಾಲಕ ಡಾ. ಸಂದೀಪ್, ಪ್ರಾಧ್ಯಾಪಕರಾದ ಡಾ.ವಿಜಯಲಕ್ಷ್ಮೀ ಮಾನಾಪುರ, ಡಾ. ಬ್ಯಾಡರಹಳ್ಳಿ ಶಿವರಾಜು ಉಪಸ್ಥಿತರಿದ್ದರು.
12ಕೆಆರ್ ಎಂಎನ್ 1.ಜೆಪಿಜಿರಾಮನಗರದ ಜಾನಪದ ಲೋಕದಲ್ಲಿ ನಡೆದ ‘ಲೋಕಸಿರಿ-100’ ಕಾರ್ಯಕ್ರಮದಲ್ಲಿ ಹಸೆ ಗೋಡೆ ಚಿತ್ತಾರದ ಕಲಾವಿದೆ ಲಕ್ಷ್ಮೀ ರಾಮಪ್ಪ ಅವರನ್ನು ಸನ್ಮಾನಿಸಲಾಯಿತು.