ಕನ್ನಡದ ಹೆಸರಾಂತ ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ ಡಾ. ಕಮಲಾ ಹಂಪನಾ ಅವರ ನಿಧನದ ಹಿನ್ನೆಲೆಯಲ್ಲಿ ಗದಗ ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಗದಗ: ಕನ್ನಡದ ಹೆಸರಾಂತ ಲೇಖಕಿ, ಸಂಶೋಧಕಿ, ಪ್ರಾಧ್ಯಾಪಕಿ ಡಾ. ಕಮಲಾ ಹಂಪನಾ ಅವರ ನಿಧನಕ್ಕೆ ನಗರದ ಕಬ್ಬಿಗರ ಕೂಟದ ಸಾಹಿತ್ಯ ಭವನದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಕಬ್ಬಿಗರ ಕೂಟದ ಸಂಸ್ಥಾಪಕ ಡಿ.ವಿ. ಬಡಿಗೇರ ಮಾತನಾಡಿ, ಕಬ್ಬಿಗರ ಕೂಟದೊಂದಿಗೆ 5 ದಶಕಗಳ ಸುದೀರ್ಘ ಸಂಪರ್ಕ ಹೊಂದಿದ್ದ ಕಮಲಾ ಹಂಪನಾ ಅವರು ಕಬ್ಬಿಗರ ಕೂಟದ ಪ್ರಕಾಶನ ಮಾಲೆಗೆ ತಮ್ಮ ಕೃತಿ ಬಡಬಾಗ್ನಿಯನ್ನು ಯಾವುದೇ ಸಂಭಾವನೆ ಬಯಸದೆ ಪ್ರಕಟಣೆಗೆ ನೀಡಿದ್ದನ್ನು ಸ್ಮರಿಸಿ, ಡಾ. ಕಮಲಾ ಹಂಪನಾ ಅವರು ಕನ್ನಡ ಹೆಸರಾಂತ ಲೇಖಕಿ ಮಾತ್ರವಲ್ಲದೇ ಶ್ರೇಷ್ಠ ಪ್ರಾಧ್ಯಾಪಕಿಯಾಗಿ ಹೆಸರು ಗಳಿಸಿದ್ದರು ಎಂದರು. ಡಾ. ಹಂಪನಾ ದಂಪತಿ ಕಬ್ಬಿಗರ ಕೂಟದ ಬೆಳವಣಿಗೆಗೆ ಪ್ರಾರಂಭದಿಂದಲೂ ನೀಡಿದ ಸಹಕಾರ, ಪ್ರೋತ್ಸಾಹ ಸದಾ ಸ್ಮರಣೀಯವಾಗಿದೆ. ಡಾ. ಕಮಲಾ ಹಂಪನಾ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆಯಾಗಿ, ವಿವಿಧ ಸಾಹಿತ್ಯ ಪುರಸ್ಕಾರಗಳಿಗೆ ಪಾತ್ರರಾಗಿದ್ದರು. ಬಂಡಾಯ ಸಾಹಿತ್ಯಕ್ಕೆ, ಸಂಶೋಧನೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರ ಅಗಲಿಕೆ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವೆಂದು ಸಂತಾಪ ವ್ಯಕ್ತಪಡಿಸಿದರು.
ಕಬ್ಬಿಗರ ಕೂಟದ ಅಧ್ಯಕ್ಷ ಮನೋಹರ ಮೇರವಾಡೆ ಮಾತನಾಡಿ, ಕಮಲಾ ಹಂಪನಾ ಅವರು ಬಹುದೊಡ್ಡ ಸಾಹಿತ್ಯ ಸಾಧಕಿಯಾಗಿದ್ದರು. ಅತ್ಯಂತ ಸರಳ ಜೀವಿಯಾಗಿದ್ದರು. ಕಮಲಾ ಹಂಪನಾ ಬಂಡಾಯದ ನೆಲೆಯಿಂದ ಬಂದ ಸಾಹಿತಿಯಾಗಿದ್ದು, ಯಾವಾಗಲೂ ತುಳಿತಕ್ಕೆ ಒಳಗಾದವರ ನೋವುಗಳಿಗೆ ತಮ್ಮ ಸೃಜನಶೀಲ ಬರವಣಿಗೆಯಿಂದ ಅನನ್ಯ ಕೊಡುಗೆ ನೀಡಿದ್ದಾರೆಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.