ಅಮೃತ ಸೋಮೇಶ್ವರರು ಕೈಯಾಡಿಸದ ಕ್ಷೇತ್ರವಿರಲಿಲ್ಲ: ಡಾ. ಪಾದೆಕಲ್ಲು

KannadaprabhaNewsNetwork |  
Published : Jan 13, 2024, 01:34 AM IST
ಅಮೃತ ಸೋಮೇಶ್ವರ ಅವರಿಗೆ ಡಾ.ಪಾದೆಕಲ್ಲು ವಿಷ್ಣು ಭಟ್ಟರು ನುಡಿನಮನ ಸಲ್ಲಿಸಿದರು. | Kannada Prabha

ಸಾರಾಂಶ

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ, ಇತ್ತೀಚೆಗೆ ಗತಿಸಿದ ಹಿರಿಯ ವಿದ್ವಾಂಸ, ಸಾಹಿತಿ ಪ್ರೊ. ಅಮೃತ ಸೋಮೇಶ್ವರ ಅವರಿಗೆ ಸಂತಾಪ ಸಭೆ ನಡೆಯಿತು. ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಅವರ ವಿದ್ಯಾರ್ಥಿಯೂ ಆದ ಡಾ. ಪಾದೇಕಲ್ಲು ವಿಷ್ಣು ಭಟ್ಟ ನುಡಿನಮನ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ತುಳುನಾಡ ಹಿರಿಯ ಸಾಹಿತಿ, ವಿದ್ವಾಂಸ ಡಾ. ಅಮೃತ ಸೋಮೇಶ್ವರ ಅವರ ನಿಧನ ಸಾಹಿತ್ಯ - ಜನಪದ ಲೋಕಕ್ಕೆ ಅಪಾರ ನಷ್ಟ ಉಂಟುಮಾಡಿದೆ. ಸೋಮೇಶ್ವರ ಅವರು ಕಾದಂಬರಿಕಾರರಾಗಿ, ಅನುವಾದಕರಾಗಿ, ಕಥಾಸಂಕಲನ, ಕವನ ಸಂಕಲನ, ರೇಡಿಯೋ ರೂಪಕ, ಧ್ವನಿಸುರುಳಿಗೆ ಸಾಹಿತ್ಯ, ನಾಟಕ, ಯಕ್ಷಗಾನ ಪ್ರಸಂಗಗಳು, ಯಕ್ಷಗಾನ ಕೃತಿಗಳು, ಗಾದೆಗಳು, ಶಬ್ದಕೋಶ, ವಚನ ಸಾಹಿತ್ಯ, ಪಾಡ್ದನ ಸಂಗ್ರಹ ಹೀಗೆ ಹತ್ತು ಹಲವು ನೆಲೆಗಳಲ್ಲಿ ತಮ್ಮ ಪ್ರತಿಭೆಯನ್ನು ತೋರ್ಪಡಿಸಿದವರು. ಅವರು ಕೈಯಾಡಿಸದ ಕ್ಷೇತ್ರವೇ ಇಲ್ಲವೆಂದು ಹೇಳಬಹುದಾದಷ್ಟು ವಿಶಾಲವಾದ ಕಾರ್ಯಕ್ಷೇತ್ರ ಅವರದ್ದಾಗಿತ್ತು ಎಂದು ಹಿರಿಯ ವಿದ್ವಾಂಸ ಅಮೃತ ಸೋಮೇಶ್ವರ ಅವರ ವಿದ್ಯಾರ್ಥಿಯೂ ಆದ ಡಾ. ಪಾದೇಕಲ್ಲು ವಿಷ್ಣು ಭಟ್ಟ ಹೇಳಿದರು.

ಅವರು ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದಲ್ಲಿ ಅಮೃತ ಸೋಮೇಶ್ವರರ ಸಂತಾಪ ಸಭೆಯಲ್ಲಿ ಮಾತನಾಡುತ್ತಿದ್ದರು. ಹಿರಿಯ ಸಾಹಿತ್ಯ ವಿಮರ್ಷಕ ಪ್ರೊ. ಮುರಳೀಧರ ಉಪಾಧ್ಯಾಯ ಮಾತನಾಡಿ, ಅಮೃತ ಸೋಮೇಶ್ವರರು ಪ್ರಾಧ್ಯಾಪಕರಾಗಿದ್ದಾಗ ಹೇಗೆ ವಿದ್ಯಾರ್ಥಿಗಳನ್ನು ಹುರಿದುಂಬಿಸುತ್ತಿದ್ದರು ಎಂಬದನ್ನು ಮತ್ತು ಅವರ ಪುಸ್ತಕಗಳಲ್ಲಿ ಬರೆಯಲ್ಪಟ್ಟ ಹಾಗೂ ಸಂದರ್ಶನಗಳಲ್ಲಿ ಉಲ್ಲೇಖಗೊಂಡಿರುವ ಕೆಲವು ಘಟನೆಗಳನ್ನು ಪ್ರಸ್ತಾಪಿಸುವುದರ ಮೂಲಕ ಅವರ ಆತ್ಮಕ್ಕೆ ಸದ್ಗತಿಯನ್ನು ಕೋರಿದರು.

ಡಾ. ಸುಬ್ಬಣ್ಣಯ್ಯ ಕೋಟಿಗದ್ದೆ ಅವರು ಅಮೃತರ ವಿದ್ಯಾರ್ಥಿಯಾಗಿ ಜೀವನದ ತಮ್ಮ ಅನುಭವಗಳನ್ನು ಹಂಚಿಕೊಂಡರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ. ಜಗದೀಶ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ ಬೃಹತ್ ಕೋಶ ತುಳುನಿಘಂಟು ರಚನಾ ಸಮಿತಿಯ ಸದಸ್ಯರೂ ಆಗಿದ್ದ ಅವರಿಗೆ ಕೇಂದ್ರದ ಮೂಲಕ ಕೊಡಮಾಡುವ ರಾಷ್ಟ್ರಕವಿ ಗೋವಿಂದಪೈ ಪ್ರಶಸ್ತಿಯೂ ಲಭಿಸಿದೆ, ಇವರ ಅಗಲುವಿಕೆ ತುಂಬಾ ನೋವನ್ನುಂಟುಮಾಡಿದೆ ಎಂದರು. ವೇದಿಕೆಯಲ್ಲಿ ಎಂ.ಜಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ಲಕ್ಷ್ಮೀನಾರಾಯಣ ಕಾರಂತ, ಸಂಧ್ಯಾಕಾಲೇಜಿನ ಪ್ರಾಂಶುಪಾಲ ಡಾ. ದೇವಿದಾಸ್ ಎಸ್. ನಾಯಕ್ ಉಪಸ್ಥಿತರಿದ್ದರು. ಸಭೆಯಲ್ಲಿ ಪ್ರೊ.ಕೆ. ಫಣಿರಾಜ್, ತುಳು ನಾಟಕಕಾರ ಗಂಗಾಧರ ಕಿದಿಯೂರು, ರಂಗಕರ್ಮಿ ನಾಗೇಶ್ ಉದ್ಯಾವರ ಮುಂತಾದವರು ಉಪಸ್ಥಿತರಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ