ಇಂದು ಐತಿಹಾಸಿಕ ತ್ರಿಲಿಂಗ ಬಸವೇಶ್ವರ ಬೆಳ್ಳಿ ಕಳಸ ಮಹಾರಥೋತ್ಸವ

KannadaprabhaNewsNetwork |  
Published : Dec 09, 2025, 01:30 AM IST
೦೮ ವೈಎಲ್‌ಬಿ ೦೩ಯಲಬುರ್ಗಾ ತಾಲೂಕಿನ ಮುಧೋಳ ಶ್ರೀಲಿಂಗೇಶ್ವರ ದೇವಸ್ಥಾನದ ಸುಂದರ ನೋಟ.೦೮ ವೈಎಲ್‌ಬಿ ೦೪ಯಲಬುರ್ಗಾ ತಾಲೂಕಿನ ಮುಧೋಳ ತ್ರಿಲಿಂಗೇಶ್ವರ ರಥ.೦೮ ವೈಎಲ್‌ಬಿ ೦೫ಮಮತಾಜ್‌ಬಿ-ಭಾವಚಿತ್ರ.೦೮ ವೈಎಲ್‌ಬಿ ೦೬ರವಿ-ಭಾವಚಿತ್ರ. | Kannada Prabha

ಸಾರಾಂಶ

ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಭಕ್ತರ ಆರಾಧ್ಯದೈವ ತ್ರಿಲಿಂಗ ಬಸವೇಶ್ವರ ಕಾರ್ತಿಕೋತ್ಸವ ಅಂಗವಾಗಿ ಡಿ. 9ರಂದು ವಿಜೃಂಭಣೆಯಿಂದ ರಥೋತ್ಸವ ಜರುಗಲಿದೆ. ರಥೋತ್ಸವದ ಅಂಗವಾಗಿ ಅನ್ನ ದಾಸೋಹ, ಸಾಧಕರಿಗೆ ಸನ್ಮಾನ, ಧಾರ್ಮಿಕ ಚಿಂತನಾ ಗೋಷ್ಠಿ, ಕ್ರೀಡಾಕೂಟ ನಡೆದಿವೆ.

ಪಾಲಾಕ್ಷ ಬಿ. ತಿಪ್ಪಳ್ಳಿ

ಯಲಬುರ್ಗಾ: ತಾಲೂಕಿನ ಮುಧೋಳ ಗ್ರಾಮದ ಭಕ್ತರ ಆರಾಧ್ಯದೈವ ತ್ರಿಲಿಂಗ ಬಸವೇಶ್ವರ ಕಾರ್ತಿಕೋತ್ಸವ ಅಂಗವಾಗಿ ಡಿ. 9ರಂದು ವಿಜೃಂಭಣೆಯಿಂದ ರಥೋತ್ಸವ ಜರುಗಲಿದೆ. ಜಾತ್ರೋತ್ಸವ ಸರ್ವ ಧರ್ಮೀಯರು ಕೂಡಿಕೊಂಡು ಐಕ್ಯತೆಯಿಂದ ಆಚರಣೆ ಮಾಡುವುದು ಸಾಮರಸ್ಯಕ್ಕೆ ಸಾಕ್ಷಿಯಾಗಿದೆ.

ದೇವಸ್ಥಾನದ ಇತಿಹಾಸ: ಈ ಹಿಂದೆ ಮುದುವೊಳಲು ಎಂದು ಕರೆಯಲ್ಪಡುತ್ತಿದ್ದ ಮುಧೋಳ ಗ್ರಾಮ ಅಗ್ರಹಾರ ಶಿಕ್ಷಣ ಕೇಂದ್ರವಾಗಿತ್ತು. ಈ ಗ್ರಾಮ ಐತಿಹಾಸಿಕ ಗ್ರಾಮಗಳಲ್ಲಿ ಒಂದಾಗಿದೆ. ಕ್ರಿ.ಶ. ೮೯೭ರಲ್ಲಿ ರಾಷ್ಟ್ರಕೂಟರ ಕಾಲದಲ್ಲಿ ಮುಧೋಳದ ಮ್ಯಾದಾರ ಚಂದ ಗ್ರಾಮ ರಕ್ಷಣೆಗಾಗಿ ಪ್ರಾಣ ತೆತ್ತನು. ಆ ವೀರಗಲ್ಲು ಊರಿನ ಹೆಮ್ಮೆಯ ಪ್ರತೀಕವಾಗಿದೆ.

ಕ್ರಿ.ಶ. ೧೧೫೪ರಲ್ಲಿ ಕಲ್ಯಾಣ ಚಾಲುಕ್ಯರ ತ್ರೈಲೋಕ ಮಲ್ಲನ ಆಡಳಿತದಲ್ಲಿ ಸ್ಥಳೀಯರ ನೆರವಿನಿಂದ ೫೦೦ ಜನ ವ್ಯಾಪಾರಸ್ಥರು ದೇವಾಲಯ ನಿರ್ಮಿಸಿದ ಕುರಿತು ಶಾಸನ ತಿಳಿಸುತ್ತದೆ. ಅದನ್ನೇ ಇಂದು ತ್ರಿಲಿಂಗಬಸವೇಶ್ವರ ಎಂದು ಕರೆಯಲಾಗುತ್ತದೆ.

ದೇವಸ್ಥಾನದ ವಿಶೇಷ: ಹೆಸರೇ ಸೂಚಿಸುವಂತೆ ಮೂರು ಸ್ಥಾವರ ಲಿಂಗಗಳ ಮಧ್ಯೆ ಬಸವಣ್ಣನ ಮೂರ್ತಿ ಇದೆ. ಈ ಮಾದರಿಯ ದೇವಸ್ಥಾನವನ್ನು ತ್ರಿಕೂಟಾಚಲವೆಂದು ಕರೆಯಲಾಗುತ್ತದೆ. ಅಂತರಾಳದಲ್ಲಿ ನಂದಿಯ ಸುತ್ತ ಪ್ರದಕ್ಷಿಣಾ ಪಥ, ೧೬ ಕಂಬಗಳ ಸಭಾ ಮಂಟಪ, ಲಲಾಟ ಬಿಂಬಗಳಲ್ಲಿ ಗಜಲಕ್ಷ್ಮಿ ಇವೆ. ಇಕ್ಕೆಲಗಳಲ್ಲಿ ತ್ರಿಶೂಲ, ಢಮರು, ಗದೆ ಹಿಡಿದು ನಿಂತ ದ್ವಾರಪಾಲಕರ ವಿಗ್ರಹಗಳಿವೆ. ದೇವಸ್ಥಾನದ ಪ್ರವೇಶ ದ್ವಾರ ವಿಜಯನಗರ ಶೈಲಿಯಂತೆ ಸ್ಥಳೀಯ ಶಿಲ್ಪಿಗಳಿಂದ ನಿರ್ಮಾಣಗೊಂಡಿದೆ. ದ್ವಾರದ ಮೇಲೆ ಆಕರ್ಷಕ ನಂದಿಯ ವಿಗ್ರಹವಿದೆ. ೯೪ ವರ್ಷಗಳ ಹಿಂದೆ ನಿರ್ಮಿಸಲಾದ ತೇರು ಸ್ಥಳೀಯ ಶಿಲ್ಪಿಗಳ ಕಲಾ ಚಾತುರ್ಯಕ್ಕೆ ಸಾಕ್ಷಿಯಾಗಿದೆ. ಇದು ಕಂಚಿನ ಬಟ್ಟಲ ತೇರು ಎಂತಲೂ ಹೆಸರಾಗಿದೆ. ಹೊಸ್ತಿಲ ಹುಣ್ಣಿಮೆಯ ಸಮಯದಲ್ಲಿ ನಡೆಯುವ ಜಾತ್ರೆ ಸಂಭ್ರಮದಿಂದ ನೆರವೇರುತ್ತದೆ. ಮುಧೋಳ ಸೇರಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡು ತ್ರಿಲಿಂಗಬಸವೇಶ್ವರನ ಕೃಪೆಗೆ ಪಾತ್ರರಾಗುತ್ತಾರೆ.

೧೯೩೦ರಲ್ಲಿ ತೇರು ನಿರ್ಮಾಣ: ಉತ್ಸವಗಳಲ್ಲಿ ಎಳೆಯಲಾಗುವ ಈ ತೇರು ಲಘು ರಥೋತ್ಸವ ಮಾದರಿಯಲ್ಲಿದೆ. ಇದು ೧೯೩೦ರಲ್ಲಿ ಅಂದರೆ 94 ವರ್ಷಗಳ ಹಿಂದೆ ನಿರ್ಮಾಣವಾಗಿರುವ ಬಗ್ಗೆ ಕಳಸದಲ್ಲಿ ನಮೂದಿಸಿರುವ ದಿನಾಂಕದಿಂದ ತಿಳಿಯುತ್ತದೆ. ತೇರು ೨೫ ಅಡಿ ಎತ್ತರವಾಗಿದ್ದು, ಸೂಕ್ಷ್ಮ ಕಲಾತ್ಮಕ ಕೆತ್ತನೆಯಿಂದ ಕೂಡಿದೆ. ರಥವು ಬೃಹತ್ ಆಕಾರದ ನಾಲ್ಕು ಕಲ್ಲಿನ ಚಕ್ರಗಳನ್ನು ಹೊಂದಿದೆ.

ತ್ರಿಲಿಂಗ ಬಸವೇಶ್ವರ ಕಾರ್ತಿಕೋತ್ಸವ ಮತ್ತು ರಥೋತ್ಸವ ಅಂಗವಾಗಿ ಇಟಗಿಯ ಶ್ರೀ ಭೀಮಾಂಬಿಕಾ ದೇವಿಯ ೧೧ ದಿನಗಳ ಪುರಾಣ ಸಾಗಿ ಬಂದಿದೆ. ಅನ್ನ ದಾಸೋಹ, ಸಾಧಕರಿಗೆ ಸನ್ಮಾನ, ಧಾರ್ಮಿಕ ಚಿಂತನಾ ಗೋಷ್ಠಿ, ಕ್ರೀಡಾಕೂಟ ನಡೆದಿವೆ. ಡಿ. 9ರಂದು ಸಂಜೆ ೫ ಗಂಟೆಗೆ ನಂದಿಕೋಲು, ಪಲ್ಲಕ್ಕಿ ಹಾಗೂ ಸಕಲ ವಾದ್ಯ ವೃಂದದೊಂದಿಗೆ ಬೆಳ್ಳಿ ಕಳಸದ ಮಹಾ ರಥೋತ್ಸವ ಅದ್ಧೂರಿಯಾಗಿ ಜರುಗಲಿದೆ.ಮುಧೋಳ ಗ್ರಾಮದ ಆರಾಧ್ಯದೈವ ಐತಿಹಾಸಿಕ ತ್ರಿಲಿಂಗಬಸವೇಶ್ವರನ ಜಾತ್ರೆಯು ಸರ್ವಧರ್ಮೀಯರ ಸಾಮರಸ್ಯದ ಪ್ರತೀಕವಾಗಿದೆ. ನಾಗರಿಕ ಸಮಾಜದಲ್ಲಿ ಸಹೋದರತ್ವ, ಸಹಬಾಳ್ವೆ ಮತ್ತು ಬಾಂಧವ್ಯ ವೃದ್ಧಿಯಾಗಲು ಇಂತಹ ಜಾತ್ರೆಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತ್ರಿಲಿಂಗೇಶ್ವರನ ಕೃಪೆಗೆ ಪಾತ್ರರಾಗಬೇಕು ಎಂದು ಮುಧೋಳ ಗ್ರಾಪಂ ಅಧ್ಯಕ್ಷೆ ಮಮತಾಜ್‌ಬೀ ಹುಸೇನ್‌ಸಾಬ್ ಹಿರೇಮನಿ ಹೇಳಿದರು.

ಭಕ್ತರು ಬೇಡಿಕೊಂಡ ಇಷ್ಟಾರ್ಥ ಈಡೇರಿಸುವ ತ್ರಿಲಿಂಗೇಶ್ವರ ಜಾತ್ರೆಯ ವೈಭವ ವಿಸ್ತಾರಗೊಳ್ಳುತ್ತಿದೆ. ಭಕ್ತರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾನೆ. ಧಾರ್ಮಿಕ ಹಿನ್ನೆಲೆಯ ಇತಿಹಾಸ ಸಾರುವ ಚಿತ್ರಣದ ಕಲಾಕೃತಿಗಳು ನೋಡಗರನ್ನು ಗಮನ ಸೆಳೆಯುತ್ತವೆ. ದೇವಸ್ಥಾನವು ಪಾರಂಪರಿಕ ಹಾಗೂ ಗ್ರಾಮೀಣ ಸೊಗಡಿನ ಸಂಸ್ಕೃತಿ ಬಿಂಬಿಸುವಲ್ಲಿ ಯಶಸ್ವಿಯಾಗಿದೆ ಎಂದು ಸ್ಥಳೀಯ ರವಿ ತಮ್ಮಿನಾಳ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶರಣರ ಸಂದೇಶಗಳು ಮನುಕುಲದ ಬೆಳವಣಿಗೆಗೆ ಮಾರ್ಗದರ್ಶಿ-ಸ್ವಾಮೀಜಿ
ಮಕ್ಕಳಸ್ನೇಹಿ ವಾತಾವರಣ ನಿರ್ಮಿಸುವುದು ಅಗತ್ಯ: ಶೇಖರಗೌಡ ರಾಮತ್ನಾಳ