ತ್ರಿಫಲ ವೈವಿಧ್ಯತಾ ಮೇಳ: ಖರೀದಿಗೆ ಮುಗಿಬಿದ್ದ ಜನರು

KannadaprabhaNewsNetwork |  
Published : Jun 03, 2024, 01:15 AM IST
IIHR | Kannada Prabha

ಸಾರಾಂಶ

ಮಾವು, ಹಲಸು ಹಾಗೂ ಬಾಳೆಯ ‘ತ್ರಿಫಲ ವೈವಿಧ್ಯತಾ ಮೇಳ’ ಮುಕ್ತಾಯ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕಳೆದ ಮೂರು ದಿನಗಳ ಕಾಲ ಹೆಸರುಘಟ್ಟದ ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಯಲ್ಲಿ (ಐಐಎಚ್‌ಆರ್‌) ನಡೆದ ಮಾವು, ಹಲಸು ಹಾಗೂ ಬಾಳೆಯ ‘ತ್ರಿಫಲ ವೈವಿಧ್ಯತಾ ಮೇಳ’ದ ಕೊನೆಯ ದಿನವಾದ ಭಾನುವಾರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ವಿವಿಧ ತಳಿಗಳನ್ನು ಖರೀದಿಸಿದರು.

ಮೂರು ದಿನಗಳ ಮೇಳದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಜನರು ನೇರವಾಗಿ ಹಾಗೂ 20 ಸಾವಿರಕ್ಕೂ ಹೆಚ್ಚು ಜನರು ಆನ್‌ಲೈನ್‌ ವೇದಿಕೆಯ ಮೂಲಕ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು. ಮಾವು, ಹಲಸು ಹಾಗೂ ಬಾಳೆ ಹಣ್ಣಿನಿಂದ ತಯಾರಿಸಿದ ತರೇವಾರಿ ಖಾದ್ಯಗಳು ಹಾಗೂ ಜೂಸ್ ಸವಿದರು. ಈ ಹಣ್ಣುಗಳನ್ನು ಬಳಸಿ ತಯಾರಿಸಿದ ಜೆಲ್ಲಿ, ಸಾಬೂನು, ಫೇಸ್‌ ಕ್ರೀಂ ಮುಂತಾದ ಸೌಂದರ್ಯ ವರ್ಧಕಗಳನ್ನು ಸಹ ಖರೀದಿಸಿದರು.

ಗಮನ ಸೆಳೆದ ವೈವಿಧ್ಯಮ ತಳಿಗಳು:

ಭೌಗೋಳಿಕ ಮಾನ್ಯತೆ (ಜಿಐ ಟ್ಯಾಗ್‌) ಹೊಂದಿರುವ ನಂಜನಗೂಡು ರಸಬಾಳೆ, ಕಮಲಾಪುರ ಕೆಂಪುಬಾಳೆ, ಕನ್ಯಾಕುಮಾರಿಯ ಮಟ್ಟಿಸಿರುಮಲೈ, ತಮಿಳುನಾಡಿನ ವಿರೂಪಾಕ್ಷಿ ಬಾಳೆ, ಗೋವಾದ ಮೈನಡೋಲಿ ಸೇರಿದಂತೆ 100ಕ್ಕೂ ಅಧಿಕ ಬಾಳೆ ಹಣ್ಣಿನ ತಳಿಗಳು, ಮಹಾರಾಷ್ಟ್ರದ ಅಲ್ಫಾನ್ಸೊ, ಅಂಕೋಲಾದ ಕರಿ ಇಶಾದ್ ಹಾಗೂ ರತ್ನಗಿರಿ ಸೇರಿದಂತೆ 300ಕ್ಕೂ ಹೆಚ್ಚು ಮಾವಿನ ಹಣ್ಣಿನ ತಳಿಗಳು ಹಾಗೂ ಶಂಕರ್‌ ಸಿದ್ದು, ಚಂದ್ರ ಹಲಸು ಸೇರಿದಂತೆ 100ಕ್ಕೂ ಹೆಚ್ಚು ಹಲಸಿನ ಹಣ್ಣಿನ ತಳಿಗಳು ಸಾರ್ವಜನಿಕರ ಗಮನ ಸೆಳೆದವು

ಐಐಎಚ್‌ಆರ್‌ ಅಭಿವೃದ್ಧಿಪಡಿಸಿದ್ದ ಉತ್ತಮ ಇಳುವರಿಯ ಸಸ್ಯಗಳನ್ನು ಮೇಳದಲ್ಲಿ ಮಾರಾಟಕ್ಕೆ ಇಡಲಾಗಿತ್ತು. ಸದ್ಯ ಮಳೆಗಾಲ ಇರುವುದರಿಂದ ರೈತರು, ಸಾರ್ವಜನಿಕರು ಸಸ್ಯಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸಿದರು.

ರಸಪ್ರಶ್ನೆ ವಿಜೇತರು:

ಇದೇ ವೇಳೆ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಕೃಷಿ ವಿಷಯದ ರಸಪ್ರಶ್ನೆ ಸ್ಪರ್ಧೆಯಲ್ಲಿ ಚಿಕ್ಕಬಾಣಾವರದ ನ್ಯಾಶನಲ್‌ ಪಬ್ಲಿಕ್‌ ಸ್ಕೂಲ್‌ (ಪ್ರಥಮ), ತೋಟಗೆರೆ ಬಿಜಿಎಸ್‌ ಯುನೈಟೆಡ್‌ ಸ್ಕೂಲ್‌ (ದ್ವಿತೀಯ) ಹಾಗೂ ಹೆಸರುಘಟ್ಟದ ಸೇಂಟ್ ಅನ್ನಿ ಪ್ರಾಥಮಿಕ ಮತ್ತು ಪ್ರೌಢಶಾಲೆಯ (ತೃತೀಯ) ವಿಜೇತ ತಂಡಗಳು ಬಹುಮಾನ ಪಡೆಯಿತು. ಮಾವು, ಹಲಸು ಹಾಗೂ ಬಾಳೆ ಹಣ್ಣಿನ ತಳಿಗಳ ನೂತನ ಖಾದ್ಯ ತಯಾರಿಕಾ ಸ್ಪರ್ಧೆಯ ವಿಜೇತರಿಗೂ ಬಹುಮಾನ ವಿತರಿಸಲಾಯಿತು. ಅಲ್ಲದೇ, ಮಾವು, ಹಲಸು ಹಾಗೂ ಬಾಳೆ ತಳಿಗಳನ್ನು (ಜೀನೋಟೈಪ್‌) ಸಂರಕ್ಷಿಸಿ ಉತ್ತಮ ನಿರ್ವಹಣೆ ಮಾಡಿದ ರೈತರಿಗೆ ‘ಸಂರಕ್ಷಣಾ ರೈತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಕೃಷಿ ಅನ್ವಯಿಕ ಸಂಶೋಧನಾ ಕೇಂದ್ರ ನಿರ್ದೇಶಕ ಡಾ। ವೆಂಕಟಸುಬ್ರಹ್ಮಣ್ಯಂ, ಕೇಂದ್ರೀಯ ತೆರಿಗೆ ಮುಖ್ಯ ಪ್ರಧಾನ ಆಯುಕ್ತ ಜಿ. ನಾರಾಯಣಸ್ವಾಮಿ, ರಾಷ್ಟ್ರೀಯ ಬಾಳೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ। ಸೆಲ್ವರಾಜನ್ ಸೇರಿದಂತೆ ರೈತರು, ಗ್ರಾಹಕರು, ವಿದ್ಯಾರ್ಥಿಗಳು ಹಾಗೂ ವಿಜ್ಞಾನಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಪರಾಧ ನಿಖರ ಮಾಹಿತಿ ಪತ್ತೆಗೆ ಆಟೋ ಚಾಲಕರ ನೆರವು ಅಗತ್ಯ: ಎಎಸ್‌ಪಿ
ಕಾರ್ಖಾನೆ ವಿರೋಧಿಸಿ ಪತ್ರ ಚಳವಳಿ ಆಂದೋಲನ ಶುರು