ಕನ್ನಡಪ್ರಭ ವಾರ್ತೆ ಮಂಡ್ಯ
ಕಾವೇರಿ ವಿಚಾರವಾಗಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಕರೆದಿದ್ದ ಸರ್ವಪಕ್ಷಗಳ ಸಭೆಗೆ ಮಂಡ್ಯ ಸಂಸದರೂ ಆದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೋಗದಿರುವುದು ಖಂಡನೀಯ. ತಮಿಳುನಾಡು ಸಂಸದರಂತೆ ಒಗ್ಗಟ್ಟು ಪ್ರದರ್ಶಿಸುವುದನ್ನು ಬಿಟ್ಟು ಕ್ಷುಲ್ಲಕ ರಾಜಕಾರಣ ಮಾಡುವುದು ಎಷ್ಟು ಸರಿ ಎಂದು ಕಾಂಗ್ರೆಸ್ ಮುಖಂಡ ಬಿ.ಶಿವನಂಜು ಪ್ರಶ್ನಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದ ಅಥವಾ ವೈಯಕ್ತಿಕ ಹಿತಾಸಕ್ತಿಗಾಗಿ ಸಭೆ ಕರೆದಿರಲಿಲ್ಲ. ನಮ್ಮ ಪಾಲಿನ ಕಾವೇರಿ ನೀರನ್ನು ಉಳಿಸುವ ಸಲುವಾಗಿ ರೈತರು ಮತ್ತು ಸಾರ್ವಜನಿಕರ ಹಿತಾಸಕ್ತಿಗಾಗಿ ಕರೆದಿದ್ದ ಸಭೆ ಅದಾಗಿತ್ತು. ಆದರೂ ಸಭೆಯನ್ನು ಎಚ್‌ಡಿಕೆ ಬಹಿಷ್ಕರಿಸಿದ್ದನ್ನು ರಾಜ್ಯದ ಜನರು ಒಪ್ಪುವುದಿಲ್ಲ. ಇದು ಮಂಡ್ಯ ಜಿಲ್ಲೆಗೆ ಅನ್ಯಾಯ ಮಾಡಿದಂತೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆಕ್ಷೇಪಿಸಿದರು.
ಎಚ್‌ಡಿಕೆ ಅವರ ನಡವಳಿಕೆಯಿಂದಾಗಿ ‘ದೇಶಕ್ಕಾಗಿ ಮೋದಿ, ಕಾವೇರಿಗಾಗಿ ಕುಮಾರಣ್ಣ’ ಎಂಬುದು ಘೋಷಣೆಯಾಗಿಯೇ ಉಳಿಯದಿರಲಿ. ಎಚ್‌ಡಿಕೆ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರು ನೀರು ಬಿಡುವಂತೆ ಒತ್ತಾಯಿಸಿದಾಗ ಕೆಆರ್‌ಎಸ್ ಜಲಾಶಯದ ಕೀಲಿ ಕೈ ಕೇಂದ್ರ ಸರ್ಕಾರದ ಸುಪರ್ದಿಯಲ್ಲಿದೆ ಎಂದಿದ್ದರು. ಆದರೀಗ ಅವರೇ ಕೇಂದ್ರ ಸಚಿವರಾಗಿದ್ದು, ಕೇಂದ್ರ ಸರ್ಕಾರದ ಒಂದು ಭಾಗವಾಗಿದ್ದಾರೆ. ಈಗ ಕರ್ನಾಟಕಕ್ಕೆ ನ್ಯಾಯ ದೊರಕಿಸಿಕೊಡುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.ಕಾವೇರಿ ಸಮಸ್ಯೆ ಶಾಶ್ವತ ಪರಿಹಾರಕ್ಕಾಗಿ ಮೇಕೆದಾಟು ಯೋಜನೆಗೆ ಅನುಮತಿ ದೊರಕಿಸಿಕೊಡಲು ಕೇಂದ್ರದ ಮೇಲೆ ಒತ್ತಡ ಹೇರಲಿ. ರಾಜ್ಯದ ಎಲ್ಲ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೇಕೆದಾಟು ಯೋಜನೆಗೆ ಕೇಂದ್ರದ ಅನುಮೋದನೆ ಕೊಡಿಸಸೇಕು. ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಾದ ಜಿಎಸ್‌ಟಿ ಹಣವನ್ನು ಬಿಡುಗಡೆ ಮಾಡಿಸಬೇಕು. ಅದನ್ನು ಬಿಟ್ಟು ಸೇಡಿನ ರಾಜಕಾರಣ ಮಾಡಬಾರದು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಸಿ.ಎಂ.ದ್ಯಾವಪ್ಪ, ಶಿವರುದ್ರ, ದೇವರಾಜ್ ಹಾಜರಿದ್ದರು.106 ಅಡಿ ತಲುಪಿದ ಕೆಆರ್ ಎಸ್ ಗೆ 19,202 ಕ್ಯುಸೆಕ್ ಒಳಹರಿವು
ಶ್ರೀರಂಗಪಟ್ಟಣ: ಕೊಡಗು, ಭಾಗಮಂಡಲ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ವಿಶ್ವ ವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಗೆ ಒಳಹರಿವಿನಲ್ಲಿ ಏರಿಕೆಯಾಗಿದ್ದು, ಸೋಮವಾರ ರಾತ್ರಿ ವೇಳೆ ಗೆ ಅಣೆಕಟ್ಟೆ ನೀರಿನ ಮಟ್ಟ 106.20 ಅಡಿ ತಲುಪಿದೆ. 1204.80 ಅಡಿ ಗರಿಷ್ಠ ಮಟ್ಟದ ಅಣೆಕಟ್ಟೆಗೆ 19,202 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ 2284 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ. 28.072 ಟಿಎಂಸಿ ನೀರಿನ ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ ಅಣೆಕಟ್ಟೆಯಲ್ಲಿ ನೀರಿನ ಮಟ್ಟ 89 ಅಡಿ, ಒಳಹರಿವು 1992 ಕ್ಯುಸೆಕ್, ಹೊರಹರಿವು 359 ಕ್ಯುಸೆಕ್ ಇತ್ತು.ಕೆಆರ್ ಎಸ್ ನೀರಿನ ಮಟ್ಟ
ಗರಿಷ್ಠ ಮಟ್ಟ - 124.80 ಅಡಿ
ಇಂದಿನ ಮಟ್ಟ – 106.20 ಅಡಿಒಳ ಹರಿವು – 19202 ಕ್ಯುಸೆಕ್
ಹೊರ ಹರಿವು – 2284 ಕ್ಯುಸೆಕ್
ನೀರಿನ ಸಂಗ್ರಹ – 28.072 ಟಿಎಂಸಿ