ಪರಿಸರ ಸೂಕ್ಷ್ಮ ವಲಯದಲ್ಲಿ ಬಡಾವಣೆ ನಿರ್ಮಿಸಲಾಗಿದೆ ಎಂಬ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸಿರುವ ಜಿಗಣಿ ಬಳಿಯ ಸೂರ್ಯ ನಗರ 4ನೇ ಹಂತ ಬಡಾವಣೆಯಲ್ಲಿ ಲಾಟರಿ ಮೂಲಕ ಸೈಟ್ ಹಂಚಿಕೆಯಾಗಿರುವ ಅದೃಷ್ಟಶಾಲಿಗಳು, ಸೈಟ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಣ ಕಟ್ಟಬೇಕೋ, ಬೇಡವೋ? ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.
-ಪರಿಸರ ಸೂಕ್ಷ್ಮ ವಲಯದಲ್ಲಿ ಬಡಾವಣೆ ಎಂದು ಹೈಕೋರ್ಟ್ ಆದೇಶ । ಸೈಟ್ ಖರೀದಿಗೆ ಸೂರ್ಯನಗರ ಹಂತ-4ರ ಲಾಟರಿ ಅದೃಷ್ಟಶಾಲಿಗಳು ಹಿಂದೇಟು
ಒಟ್ಟು 2,390 ಸೈಟ್ಗಳನ್ನು ಅರ್ಜಿದಾರರಿಗೆ ಲಾಟರಿ ಮೂಲಕ ಮೇ 23ರಂದು ಹಂಚಿಕೆ । ಐದು ತಿಂಗಳು ಕಳೆದರೂ 500ಕ್ಕಿಂತ ಕಡಿಮೆ ಜನ ಹಣ ಪಾವತಿ
ಮಂಜುನಾಥ ನಾಗಲೀಕರ್ ಕನ್ನಡಪ್ರಭ ವಾರ್ತೆ ಬೆಂಗಳೂರು
ಪರಿಸರ ಸೂಕ್ಷ್ಮ ವಲಯದಲ್ಲಿ ಬಡಾವಣೆ ನಿರ್ಮಿಸಲಾಗಿದೆ ಎಂಬ ಹೈಕೋರ್ಟ್ ಆದೇಶ ಹಿನ್ನೆಲೆಯಲ್ಲಿ ಕರ್ನಾಟಕ ಗೃಹ ಮಂಡಳಿಯಿಂದ ಅಭಿವೃದ್ಧಿಪಡಿಸಿರುವ ಜಿಗಣಿ ಬಳಿಯ ಸೂರ್ಯ ನಗರ 4ನೇ ಹಂತ ಬಡಾವಣೆಯಲ್ಲಿ ಲಾಟರಿ ಮೂಲಕ ಸೈಟ್ ಹಂಚಿಕೆಯಾಗಿರುವ ಅದೃಷ್ಟಶಾಲಿಗಳು, ಸೈಟ್ ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಹಣ ಕಟ್ಟಬೇಕೋ, ಬೇಡವೋ? ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ.
ಯೋಜನೆಯಡಿ ಒಟ್ಟು 2,390 ಸೈಟ್ಗಳನ್ನು ಅರ್ಹ ಅರ್ಜಿದಾರರಿಗೆ ಲಾಟರಿ ಮೂಲಕ ಆಯ್ಕೆ ಮಾಡಿ ಮೇ 23ರಂದು ಹಂಚಿಕೆ ಮಾಡಲಾಗಿತ್ತು. ಐದು ತಿಂಗಳು ಕಳೆದರೂ 500ಕ್ಕಿಂತ ಕಡಿಮೆ ಜನರು ಹಣ ಪಾವತಿಸಿದ್ದಾರೆ. 39 ಜನರು ತಮಗೆ ನಿವೇಶನವೇ ಬೇಡವೆಂದು ಕೆಎಚ್ಬಿಗೆ ಪತ್ರ ಬರೆದಿದ್ದಾರೆ.
ನಗರ ಮತ್ತು ಹೊರ ವಲಯಗಳಲ್ಲಿ ರಿಯಲ್ ಎಸ್ಟೇಟ್ಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಸರ್ಕಾರದಿಂದ ಸುಸಜ್ಜಿತವಾಗಿ ನಿರ್ಮಿಸಿರುವ ಲೇಔಟ್ನಲ್ಲಿ ಸ್ಪರ್ಧಾತ್ಮಕ ದರದಲ್ಲಿ ನೀಡಿರುವ ನಿವೇಶನಗಳನ್ನು ನಿರಾಕರಿಸಲು ಹೈಕೋರ್ಟ್ ಆದೇಶವೇ ಕಾರಣ ಎಂದು ಹೇಳಲಾಗಿದೆ. ಬನ್ನೇರುಘಟ್ಟ ಅರಣ್ಯದ ಪರಿಸರ ಸೂಕ್ಷ್ಮ ವಲಯದ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಸೆಪ್ಟಂಬರ್ ಮೊದಲ ವಾರದಲ್ಲಿ ಹೈಕೋರ್ಟ್ ಆದೇಶ ನೀಡಿತ್ತು.
ಸಾಲ ನೀಡಲು ಹಿಂಜರಿಯುತ್ತಿರುವ ಬ್ಯಾಂಕ್ಗಳು: ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ ಬಹಳಷ್ಟು ಜನರು ಸಾಲಕ್ಕಾಗಿ ಬ್ಯಾಂಕ್ ಮೊರೆ ಹೋಗುತ್ತಿದ್ದಾರೆ. ಆದರೆ, ಹೈಕೋರ್ಟ್ ಆದೇಶದ ನೆಪ ಹೇಳಿ ಬ್ಯಾಂಕ್ಗಳು ಸಾಲ ಮಂಜೂರು ಮಾಡಲು ಹಿಂದೇಟು ಹಾಕುತ್ತಿವೆ. ಹೀಗಾಗಿ, ಹಂಚಿಕೆದಾರರು ಗೊಂದಲಕ್ಕೆ ಸಿಲುಕಿದ್ದಾರೆ. ಈ ಕುರಿತು ಕೆಎಚ್ಬಿ ಅಧಿಕಾರಿಗಳನ್ನು ಪ್ರಶ್ನೆ ಮಾಡುತ್ತಿದ್ದಾರೆ.
ಸಾಲ ಪಡೆಯಲು ಸಮಸ್ಯೆಯಾಗುತ್ತಿರುವ ಕುರಿತು ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಯೋಜನೆಯ ಎಂಜಿನಿಯರ್ ಶಂಭುಲಿಂಗಯ್ಯ ಅವರು, ಹೈಕೋರ್ಟ್ ಆದೇಶದ ಬಗ್ಗೆ ರಾಜ್ಯದ ಅಡ್ವೋಕೇಟ್ ಜನರಲ್ ಅಭಿಪ್ರಾಯವನ್ನು ಪಡೆಯಲಾಗಿದೆ. ಭೂಸ್ವಾಧೀನ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದ ರೈತರಿಗೆ ಸಂಬಂಧಿಸಿದ 103 ಎಕರೆ ಜಮೀನಿಗೆ ಮಾತ್ರ ಹೈಕೋರ್ಟ್ ಆದೇಶ ಅನ್ವಯವಾಗುತ್ತದೆ. ಉಳಿದ ಜಮೀನಿನಲ್ಲಿ ಇರುವ ಬಡಾವಣೆಯ ನಿವೇಶನಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಹೇಳಿದರು.
ಇನ್ನು ವ್ಯಾಜ್ಯದಲ್ಲಿರುವ 103 ಎಕರೆ ಜಮೀನಿ ಭೂಸ್ವಾಧೀನ ಅಧಿಕೃತಗೊಳಿಸಲು ಸುಪ್ರೀಂಕೋರ್ಟ್ನಲ್ಲಿ ಎಸ್ಎಲ್ಪಿ ಅರ್ಜಿ ಸಲ್ಲಿಸಲಾಗಿದೆ. ಸಾಲ ನೀಡಲು ಯಾವುದೇ ತೊಂದರೆ ಇಲ್ಲ ಎನ್ನುವ ವಿಚಾರವನ್ನು ಬ್ಯಾಂಕುಗಳಿಗೆ ತಿಳಿಸಿ ಸಾಲ ಮಂಜೂರು ಮಾಡಬಹುದು ಎಂದು ಪತ್ರ ಬರೆಯಲಾಗಿದೆ ಎಂದು ಎಂಜಿನಿಯರ್ ಶಂಭುಲಿಂಗಯ್ಯ ತಿಳಿಸಿದರು.
ಖಾತಾ ಇನ್ನೂ ಆಗಿಲ್ಲ: ನಿವೇಶನಕ್ಕಾಗಿ ಈಗಾಗಲೇ ಸಂಪೂರ್ಣ ಹಣ ಪಾವತಿ ಮಾಡಿರುವ 200ಕ್ಕೂ ಹೆಚ್ಚು ಜನರು ತಮ್ಮ ಹೆಸರಿಗೆ ಖಾತಾ ಮಾಡಿಕೊಡುವಂತೆ ಕೆಎಚ್ಬಿಗೆ ಕೋರಿದ್ದಾರೆ. ಆದರೆ, ಭೂಸ್ವಾಧೀನ ವಿಚಾರ ಹೈಕೋರ್ಟ್ನಲ್ಲಿ ವಿಚಾರಣೆಯಲ್ಲಿದ್ದ ಕಾರಣ ಕೆಎಚ್ಬಿ ಹೆಸರಿಗೆ ನಿವೇಶನಗಳು ಖಾತಾ ಆಗಿಲ್ಲ. ಈಗಾಗಲೇ ಒಮ್ಮೆ ಖಾತಾ ಕೋರಿ ಕೆಎಚ್ಬಿ ಸಲ್ಲಿಸಿದ್ದ ಅರ್ಜಿ ಕಂದಾಯ ಇಲಾಖೆಯಿಂದ ವಾಪಸ್ ಬಂದಿದೆ. ಹೀಗಾಗಿ, ಮತ್ತೊಮ್ಮೆ ಖಾತಾ ಮಾಡಿಕೊಡುವಂತೆ ಪ್ರಸ್ತಾವನೆ ಸಲ್ಲಿಸಲಾಗುತ್ತಿದೆ ಎಂದು ಕೆಎಚ್ಬಿ ಅಧಿಕಾರಿಗಳು ತಿಳಿಸಿದರು.
ಕೆಎಚ್ಬಿ ಹೆಸರಿಗೆ ಖಾತಾ ಆಗಲು 2 ತಿಂಗಳು ಬೇಕಾಗಬಹುದು. ಅದಾದ ಬಳಿಕವೇ ಸಂಪೂರ್ಣ ಹಣ ಪಾವತಿಸಿರುವ ಹಂಚಿಕೆದಾರರಿಗೆ ನಿವೇಶನಗಳನ್ನು ಖಾತಾ ಮಾಡಲು ಸಾಧ್ಯವಾಗಲಿದೆ ಎಂದು ತಿಳಿದು ಬಂದಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.