ಕನ್ನಡಪ್ರಭ ವಾರ್ತೆ ರಾಮನಗರ
ಭುವನೇಶ್ವರದಿಂದ ಬೆಂಗಳೂರಿಗೆ ಗುರುವಾರ ರಾತ್ರಿ ಒಡಿಶಾ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಭಕ್ತ ಚರಣ್ ದಾಸ್ ನೇತೃತ್ವದಲ್ಲಿ ಈ ಶಾಸಕರು ರಾತ್ರಿ 11 ಗಂಟೆಗೆ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದರು. ಅವರೆಲ್ಲರನ್ನು ಡಿ.ಕೆ.ಶಿವಕುಮಾರ್ ಆಪ್ತರು ಸ್ವಾಗತಿಸಿದರು.
ವಿಮಾನ ನಿಲ್ದಾಣದಿಂದ ಪೊಲೀಸ್ ಬಂದೋಬಸ್ತ್ ಮತ್ತು ಎಸ್ಕಾರ್ಟ್ ವ್ಯವಸ್ಥೆಯೊಂದಿಗೆ ಶಾಸಕರನ್ನು ನೇರವಾಗಿ ಬಿಡದಿ ಸಮೀಪವಿರುವ ವಂಡರ್ ಲಾ ರೆಸಾರ್ಟ್‌ಗೆ ಕರೆತರಲಾಯಿತು. ಈ ಶಾಸಕರೆಲ್ಲರೂ ಮೊದಲ ಬಾರಿ ಗೆದ್ದವರಾಗಿದ್ದಾರೆ. ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿರುವ ಕೈ ಶಾಸಕರು ಬೆಳಗ್ಗೆಯಿಂದ ಹೊರಗೆ ಬರಲೇ ಇಲ್ಲ. ಎಲ್ಲರು ತಮ್ಮ ಕೊಠಡಿಗಳಲ್ಲಿಯೇ ಉಳಿದು ವಿಶ್ರಾಂತಿ ಪಡೆದರು.ಸಂಜೆ ಶಾಸಕರಾದ ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್ ಅವರೊಂದಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಶಾಸಕರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು. ಚುನಾವಣೆಯ ವೇಳೆ ಭುವನೇಶ್ವರಕ್ಕೆ ವಾಪಸ್ ಹೋಗಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ರಾಜ್ಯಸಭೆಯ 37 ಸ್ಥಾನಗಳಿಗೆ ಮಾರ್ಚ್ 16ರಂದು ಚುನಾವಣೆ ನಡೆಯಲಿದೆ. 10 ರಾಜ್ಯಗಳ ಶಾಸಕರು ರಾಜ್ಯಸಭಾ ಸದಸ್ಯರ ಆಯ್ಕೆಗೆ ಮತದಾನ ಮಾಡಲಿದ್ದಾರೆ. ಇದರಲ್ಲಿ ನಾಲ್ಕು ರಾಜ್ಯಸಭಾ ಸದಸ್ಯರನ್ನು ಒಡಿಶಾದ ಶಾಸಕರು ಚುನಾಯಿಸಲಿದ್ದಾರೆ.
ಬಿಜೆಪಿ ನಾಯಕರು ಅಡ್ಡ ಮತದಾನ ಮಾಡಿಸುವ ಭೀತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಶಾಸಕರನ್ನು ತನ್ನದೇ ಆಡಳಿತವಿರುವ ಕರ್ನಾಟಕಕ್ಕೆ ಸ್ಥಳಾಂತರಿಸಿದೆ. ಕಾಂಗ್ರೆಸ್‌ನ 14 ಶಾಸಕರಲ್ಲಿ 8 ಮಂದಿ ಬಿಡದಿ ಬಳಿಯ ವಂಡರ್ ಲಾ ರೆಸಾರ್ಟ್‌ನಲ್ಲಿ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಹೆಗಲಿಗೆ ಶಾಸಕರ ಉಸ್ತುವಾರಿ ವಹಿಸಲಾಗಿದೆ.
ಆದ್ದರಿಂದಲೇ, ಒಡಿಶಾ ಕಾಂಗ್ರೆಸ್ ಅಧ್ಯಕ್ಷ ಭಕ್ತ ಚರಣ್ ದಾಸ್ ಅವರು ತಮ್ಮ ಪಕ್ಷದ 14 ಶಾಸಕರ ಪೈಕಿ 8 ಮಂದಿಯನ್ನು ರೆಸಾರ್ಟ್‌ಗೆ ಕರೆ ತಂದಿದ್ದಾರೆ. ಎದುರಾಳಿ ಪಕ್ಷಗಳು ತಮ್ಮ ಶಾಸಕರನ್ನು ಸೆಳೆಯದಂತೆ ತಡೆಯುವುದು ಕಾಂಗ್ರೆಸ್‌ನ ತಂತ್ರ ಮತ್ತು ಉದ್ದೇಶವಾಗಿದೆ.
ಇಂದು ರಾತ್ರಿ ಮತ್ತಷ್ಟು ಶಾಸಕರು ಆಗಮಿಸುವ ಸಾಧ್ಯತೆ ಇದೆ. ಶಾಸಕರನ್ನು ಕರೆತರಲು ಈಗಾಗಲೇ ಕರ್ನಾಟಕದ ಸ್ಥಳೀಯ ಕಾಂಗ್ರೆಸ್ ಮುಖಂಡರು ವಿಮಾನ ನಿಲ್ದಾಣಕ್ಕೆ ವಾಹನಗಳ ವ್ಯವಸ್ಥೆ ಮಾಡಿದ್ದಾರೆ. ಶಾಸಕರು ತಂಗಿರುವ ಕಾರಣ ರೆಸಾರ್ಟ್ ಸುತ್ತಲೂ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.