ಕನ್ನಡಪ್ರಭ ವಾರ್ತೆ ವಿಜಯಪುರ:
ನಗರದ ಬ್ಯಾಂಕರ್ಸ್ ಕಾಲೋನಿಯ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಡಾ.ಎಂ.ಎಸ್.ಮಾಗಣಗೇರಿ ಕುಟುಂಬ ಆಯೋಜಿಸಿದ್ದ ಓದುಗರ ಚಾವಡಿ ರಾಜೇಂದ್ರಕುಮಾರ ಬಿರಾದಾರ ಸಾಂಸ್ಕ್ರತಿಕ ವೇದಿಕೆಯ ಮಾಸಿಕ ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ತಾಳಿಕೋಟಿಯ ಸವಿತಾ.ಆರ್.ಇನಾಮದಾರ ಅವರ ಅರ್ಧ ನೆನಪು ಅರ್ಧ ಕನಸು ಕಥಾ ಸಂಕಲನವನ್ನು ಪರಿಚಯಿಸಿ ಅವರು ಮಾತನಾಡಿದರು. ಇಲ್ಲಿನ ಕಥೆಗಳ ಭಾಷೆ ವಿಶೇಷವಾಗಿದೆ, ಉತ್ತರ ಕರ್ನಾಟಕದ ಭಾಷೆಯ ಲಯವನ್ನು ಸಮರ್ಥವಾಗಿ ಬಳಸುವುದರೊಟ್ಟಿಗೆ ಪ್ರಾದೇಶಿಕ ಅಸ್ಮಿತೆಯನ್ನು ಪ್ರತಿಷ್ಠಾಪಿಸಿ ಸೂಕ್ಷ್ಮ ಭಾವನೆಗಳಿಗೆ ಈ ಭಾಗದ ಭಾಷೆ ಹಾಗೂ ಅದರ ನುಡಿಗಟ್ಟುಗಳು ಸಮರ್ಥವಾಗಿವೆ ಎಮಬುದಾಗಿ ತಿಳಿಸಿದರು.
ಈ ಭಾಷೆಯನ್ನು ಲೇಖಕರು ಕತೆಗಳಲ್ಲಿ ಅಚ್ಚುಕಟ್ಟಾಗಿ ದುಡಿಸಿಕೊಂಡಿದ್ದಾರೆ. ಇವರ ಬಹುತೇಕ ಕಥೆಗಳ ಪಾತ್ರಗಳಿಗೆ ಸಶಕ್ತ ಅಭಿವ್ಯಕ್ತಿ ಒದಗಿ ಬಂದಿದೆ. ಇಲ್ಲಿರುವ ಕತೆಗಳು ಯಾವುದೋ ಕಲ್ಪನೆಯ ದಂತಗೋಪುರಗಳಲ್ಲಿ ಕುಳಿತು ಕಾಲಕ್ಷೇಪಕ್ಕಾಗಿ ಹೇಳಿಕೊಂಡ ರಮ್ಯವಾದ ಸಂಗತಿಗಳಲ್ಲ. ಗ್ರಾಮ್ಯ ಪರಿಸರದಲ್ಲಿಯೇ ಒಡಮೂಡಿ ಆಕೃತಿ ತಾಳುವ ಈ ಕಥೆಗಳು ಹಳ್ಳಿಯ ಬದುಕಿನ ಬವಣೆ, ಛಲ, ಸೇಡು, ಅಸಹಾಯಕತೆ, ಧೈರ್ಯ ಎಲ್ಲವನ್ನೂ ತೆರೆದಿಡುತ್ತವೆ ಎಂದರು.ಸರಕಾರಿ ಪದವಿ ಪೂರ್ವ ಕಾಲೇಜು ಅರ್ಜುಣಗಿಯ ಕನ್ನಡ ಉಪನ್ಯಾಸಕಿ ಡಾ.ಸವಿತಾ ಝಳಕಿ ಉದ್ಘಾಟಿಸಿದರು.ಅತಿಥಿಯಾಗಿ ಹೊಟೇಲ್ ಉದ್ಯಮಿ ನಾಗೇಶ ಶೆಟ್ಟಿ ಹಾಗೂ ಓಂ ಸಾಯಿ ಯೋಗ ಅಕಾಡೆಮಿಯ ಅಧ್ಯಕ್ಷೆ ಕೀರ್ತಿ ಮಠಪತಿ ಮಾತನಾಡಿದರು. ವ್ಯಾಯಾಮ, ಯೋಗ, ಧ್ಯಾನಗಳು ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿವ್ಯ ಔಷಧವಾದರೆ ಸಾಹಿತ್ಯ ಮತ್ತು ಓದು ಜ್ಞಾನದ ಹಸಿವನ್ನು ಇಂಗಿಸಿ ಸುಂದರ ವ್ಯಕ್ತಿತ್ವ ರೂಪಿಸುವಲ್ಲಿ ಸಹಕಾರಿಯಾಗುತ್ತದೆ ಎಂದರು.
ಶ್ರೀನಿಧಿ ಮಾಗಣಗೇರಿ ಪ್ರಾರ್ಥಿಸಿದರು, ಬಸವರಾಜ ಕುಂಬಾರ ನಿರೂಪಿಸಿ, ವಂದಿಸಿದರು.