ರೈತರಿಗೆ ನೀರು ಕೊಟ್ಟರದೇ ನಿಜವಾದ ಕಾವೇರಿ ಆರತಿ: ಅನ್ನದಾನಿ

KannadaprabhaNewsNetwork | Published : Sep 27, 2024 1:20 AM

ಸಾರಾಂಶ

ಕೆಆರ್‌ಎಸ್ ತುಂಬಿದ ಸಮಯದಲ್ಲೇ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿತ್ತು. ಆಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಆಗಲೇ ನೀರು ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಿರಲಿಲ್ಲ. ಆಗಸ್ಟ್ ಕೊನೆಯಲ್ಲೇ ನಾಟಿ ಮುಗಿಯಬೇಕಿತ್ತು. ಈಗ ನೀರು ಕೊಟ್ಟರೂ ನಾಟಿ ಮಾಡಲಾಗುವುದಿಲ್ಲ. ನಾಟಿ ಮಾಡುವ ಅವಧಿ ಮೀರಿರುವುದರಿಂದ ರೈತರಿಗೆ ಯಾವ ಪ್ರಯೋಜನವಿಲ್ಲ. ಈಗ ಕನಿಷ್ಠ ಪಕ್ಷ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ರೈತರಿಗೆ ಸಕಾಲದಲ್ಲಿ ನೀರು ಕೊಟ್ಟು ಸಮೃದ್ಧವಾಗಿ ಜೀವನ ನಡೆಸುವಂತೆ ಮಾಡುವುದೇ ಕಾವೇರಿ ಮಾತೆಗೆ ನಿಜವಾಗಿ ಸಲ್ಲಿಸುವ ಆರತಿಯಾಗಿದೆ. ನೀರಿಲ್ಲದೆ, ಬೆಳೆ ಬೆಳೆಯಲಾಗದೆ ರೈತರು ರಕ್ತ ಕಣ್ಣೀರು ಸುರಿಸುವಾಗ ಕಾವೇರಿ ಆರತಿ ನಡೆಸುವುದು ಎಷ್ಟು ಸಮಂಜಸ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪ್ರಶ್ನಿಸಿದರು.

ಈ ಬಾರಿ ಕೃಷ್ಣರಾಜಸಾಗರ ಅಣೆಕಟ್ಟು ಭರ್ತಿಯಾಗಿ ನೂರಾರು ಟಿಎಂಸಿ ನೀರು ತಮಿಳುನಾಡಿಗೆ ಹರಿದುಹೋಯಿತು. ಆದರೆ, ಮಳವಳ್ಳಿ ಭಾಗದ ರೈತರಿಗೆ ನೀರು ಸಿಗಲೇ ಇಲ್ಲ. ನೀರಿಲ್ಲದೆ ತಾಲೂಕಿನಲ್ಲಿ ಶೇ.೩೦ರಷ್ಟು ನಾಟಿ ಕಾರ್ಯವೂ ನಡೆದಿಲ್ಲ. ರಾಮಸ್ವಾಮಿ ನಾಲೆ ಹಾದುಹೋಗಿರುವ ಪ್ರದೇಶದಲ್ಲಿ ಶೇ.೧೦೦ರಷ್ಟು ಭತ್ತ ನಾಟಿಯಾಗಿದ್ದರೆ, ಹೆಬ್ಬಕವಾಡಿ, ಹೆಬ್ಬಳ್ಳ ಚನ್ನಯ್ಯ ನಾಲೆ, ಮಾಧವಮಂತ್ರಿ ನಾಲಾ ಭಾಗದಲ್ಲಿ ಶೇ.೩೦ರಷ್ಟೂ ಬಿತ್ತನೆ ಕಾರ್ಯ ನಡೆದಿಲ್ಲವೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

ಕೆಆರ್‌ಎಸ್ ತುಂಬಿದ ಸಮಯದಲ್ಲೇ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿತ್ತು. ಆಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಆಗಲೇ ನೀರು ಕೊಟ್ಟಿದ್ದರೆ ಇಂದು ಇಂತಹ ಪರಿಸ್ಥಿತಿಯನ್ನು ಎದುರಿಸಬೇಕಿರಲಿಲ್ಲ. ಆಗಸ್ಟ್ ಕೊನೆಯಲ್ಲೇ ನಾಟಿ ಮುಗಿಯಬೇಕಿತ್ತು. ಈಗ ನೀರು ಕೊಟ್ಟರೂ ನಾಟಿ ಮಾಡಲಾಗುವುದಿಲ್ಲ. ನಾಟಿ ಮಾಡುವ ಅವಧಿ ಮೀರಿರುವುದರಿಂದ ರೈತರಿಗೆ ಯಾವ ಪ್ರಯೋಜನವಿಲ್ಲ. ಈಗ ಕನಿಷ್ಠ ಪಕ್ಷ ಕೆರೆ- ಕಟ್ಟೆಗಳನ್ನು ತುಂಬಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಮಳೆಗಾಲದಲ್ಲಿ ಹೂಳು ತೆಗೆಯುವುದೇ?:

ಹಲಗೂರು ಹೋಬಳಿ ಸಂಪೂರ್ಣ ಮಳೆಯಾಶ್ರಿತ ಪ್ರದೇಶ. ಈ ಹೋಬಳಿಯಲ್ಲಿರುವ ನಿಟ್ಟೂರು, ಭೀಮಾ, ಬ್ಯಾಡರಹಳ್ಳಿ, ಬಾಣಸಮುದ್ರ ಕೆರೆಗಳನ್ನು ತುಂಬಿಸಿಲ್ಲ. ಬಾಣಸಮುದ್ರ ಕೆರೆ ೫೦ ರಿಂದ ೬೦ ಎಕರೆ ಅಚ್ಚುಕಟ್ಟನ್ನು ಹೊಂದಿದೆ. ಈ ಅಧಿಕಾರಿಗಳಿಗೆ ಕಣ್ಣೇ ಕಾಣಿಸುವುದಿಲ್ಲವೇ? ಕೆರೆಗಳನ್ನು ತುಂಬಿಸಬೇಕೆಂಬ ಕನಿಷ್ಠ ಕಾಳಜಿಯೂ ಇಲ್ಲ. ಜೊತೆಗೆ ಮಳೆಗಾಲದಲ್ಲಿ ಕೆರೆಯ ಹೂಳು ತೆಗೆಯುವುದಕ್ಕೆ ಮುಂದಾಗಿರುವುದು ರೈತರ ದುರದೃಷ್ಟವಾಗಿದೆ ಎಂದು ಟೀಕಿಸಿದರು.

ನಾಟಿ ಮಾಡುವ ಕಾಲ ಮುಗಿದಿದೆ. ಈಗ ನೀರು ಹರಿಸಿದರೂ ನಾಟಿ ಮಾಡಲಾಗುವುದಿಲ್ಲ. ಅದಕ್ಕಾಗಿ ಈಗಲಾದರೂ ತಾಲೂಕು ವ್ಯಾಪ್ತಿಯ ಎಲ್ಲಾ ಕೆರೆ- ಕಟ್ಟೆಗಳನ್ನು ತುಂಬಿಸಿ. ಭತ್ತ ನಾಟಿ ಮಾಡಿರುವ ಪ್ರದೇಶಕ್ಕೆ ಎಕರೆಗೆ ೩೦ ಸಾವಿರ ರು., ಖುಷ್ಕಿ ಪ್ರದೇಶಕ್ಕೆ ಎಕರೆಗೆ ೨೫ ಸಾವಿರ ರು.ಗಳನ್ನು ನೀಡುವಂತೆ ಡಾ.ಕೆ.ಅನ್ನದಾನಿ ಒತ್ತಾಯಿಸಿದರು.

ಕಾವೇರಿ ಆರತಿಗೆ ರೆಡಿ:

ಜಲಪಾತೋತ್ಸವಕ್ಕೆ ೪ ರಿಂದ ೫ ಕೋಟಿ ರು. ಖರ್ಚು ಮಾಡಿ ಆಯಿತು. ಈಗ ಕಾವೇರಿ ಆರತಿಗೆ ರೆಡಿಯಾಗುತ್ತಿದ್ದಾರೆ. ಇದಾವುದನ್ನೂ ರೈತರು ಕೇಳಲಿಲ್ಲ. ೨ ಟಿಎಂಸಿ ನೀರನ್ನು ಜಲಪಾತೋತ್ಸವಕ್ಕೆ ಬಿಟ್ಟು ವ್ಯರ್ಥ ಮಾಡಿದರು. ಎಲ್ಲೆಡೆ ಸಮೃದ್ಧಿ ನೆಲೆಸಿದ್ದಾಗ ಜಲಪಾತೋತ್ಸವ, ಕಾವೇರಿ ಆರತಿ ಮಾಡುವುದರಲ್ಲಿ ಅರ್ಥವಿದೆ. ರೈತರು ಸಂಕಷ್ಟದಲ್ಲಿರುವ ಸಮಯದಲ್ಲಿ ಇಂತಹ ಸಂಭ್ರಮ ಬೇಕಿತ್ತಾ? ನಾವು ಶೋಕಿ ಮತ್ತು ಆಡಂಬರಕ್ಕೆ ಜಲಪಾತೋತ್ಸವ ಮಾಡಲಿಲ್ಲ ಎಂದು ಟಾಂಗ್ ಕೊಟ್ಟರು.

ಮುಖ್ಯಮಂತ್ರಿಗಳು ಆಡಿದ ಮಾತಿನಂತೆ ಗಗನಚುಕ್ಕಿ ಅಭಿವೃದ್ಧಿಗೆ ೧೦೦ ಕೋಟಿ ರು. ನೀಡಿದರೆ ನಾನೇ ಮೊದಲು ಅವರನ್ನು ಅಭಿನಂದಿಸುತ್ತೇನೆ. ಗಗನಚುಕ್ಕಿಯಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳು ನನ್ನ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳು. ಸರ್ಕಾರದಿಂದ ನಯಾಪೈಸೆ ಹಣ ಬಿಡುಗಡೆಯಾಗಿಲ್ಲ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಕಂಸಾಗರ ರವಿ, ಹನುಮಂತು, ಜಯರಾಂ, ನಂದಕುಮಾರ್, ಮೆಹಬೂಬ್ ಪಾಷ ಇದ್ದರು.

ತಾಲೂಕಿನ ಕಡೆ ತಿರುಗಿ ನೋಡಿಲ್ಲ:

ಕೃಷಿ ಮಂತ್ರಿಯಾಗಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ತಾಲೂಕಿನಲ್ಲಿರುವ ಕೃಷಿ ಪರಿಸ್ಥಿತಿ, ರೈತರ ಸಮಸ್ಯೆ, ಸಂಕಷ್ಟಗಳು, ನೀರು ಸಿಗದೆ ಬೆಳೆ ಬೆಳೆಯಲಾಗದ ಸ್ಥಿತಿ, ಕೆರೆ- ಕಟ್ಟೆಗಳನ್ನು ತುಂಬಿಸದಿರುವ ಬಗ್ಗೆ ಒಮ್ಮೆಯೂ ಭೇಟಿ ನೀಡಿ ಪರಿಶೀಲಿಸಲಿಲ್ಲ. ರೈತರ ಅಹವಾಲುಗಳನ್ನೂ ಆಲಿಸಲಿಲ್ಲ. ಕ್ಷೇತ್ರದ ಶಾಸಕರೂ ಕೂಡ ಒಮ್ಮೆಯೂ ನಾಲೆ ಮೇಲೆ ಸಂಚರಿಸಿ ನೀರು ತಲುಪದಿರುವುದಕ್ಕೆ ಕಾರಣವಾದ ಅಂಶಗಳನ್ನು ಗುರುತಿಸಿ ನೀರಾವರಿ ಅಧಿಕಾರಿಗಳಿಂದ ಪರಿಹಾರ ಸೂಚಿಸುವ ಕೆಲಸ ಮಾಡಲಿಲ್ಲವೆಂದು ಡಾ.ಕೆ.ಅನ್ನದಾನಿ ದೂರಿದರು.

ಅ.೧೮-೧೯ರಂದು ಉದ್ಯೋಗ ಮೇಳ:

ಮುಂದಿನ ಅಕ್ಟೋಬರ್ ೧೮ ಮತ್ತು ೧೯ರಂದು ಮಂಡ್ಯ ನಗರದಲ್ಲಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಹೇಳಿದರು. ಕನಿಷ್ಠ ಜಿಲ್ಲೆಯ ೩ ಸಾವಿರ ನಿರುದ್ಯೋಗಿ ಯುವಕರಿಗೆ ಉದ್ಯೋಗ ದೊರಕಿಸಿಕೊಡುವುದು. ತಾಂತ್ರಿಕ ಪದವೀಧರರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ದೊರಕಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.

Share this article