ರಾಮನಗರ: ಸಂವಿಧಾನ ದೇಶದ ಪವಿತ್ರ ಗ್ರಂಥ. ನಿಜವಾದ ದೇಶಭಕ್ತರು ಸಂವಿಧಾನವನ್ನು ವಿರೋಧಿಸದೆ ಗೌರವಿಸುತ್ತಾರೆ ಎಂದು ಚಾಮರಾಜನಗರದ ನಳಂದ ವಿಶ್ವವಿದ್ಯಾಲಯದ ಬೋದಿದತ್ತ ಬಂತೇಜಿ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ವತಿಯಿಂದ ಆಯೋಜಿಸಿದ್ದ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿವಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ ವಿಧಾನ ಬದಲಾವಣೆ ಅಸಾಧ್ಯವಾದ ಕೆಲಸ. ಒಂದೊಮ್ಮೆ ಈ ಪ್ರಯತ್ನಕ್ಕೆ ಕೈ ಹಾಕಿದರೆ, ಎಲ್ಲೆಡೆ ಹೋರಾಟ ನಡೆಯಲಿದೆ ಎಂದು ಎಚ್ಚರಿಕೆ ನೀಡಿದರು.ಸ್ವಾತಂತ್ರ್ಯಪೂರ್ವ ಕಾಲಘಟ್ಟ ಹಾಗೂ ಸ್ವಾತಂತ್ರ್ಯ ಲಭಿಸುವ ಹಂತದಲ್ಲಿ ಭಾರತಕ್ಕೆ ಪ್ರತ್ಯೇಕ ಸಂವಿಧಾನ ರಚನೆ ಸಂಬಂಧ ದೇಶದ ಮಹನೀಯರು ಇಂಗ್ಲೆಂಡ್‌ಗೆ ತೆರಳಿ ಅಂದಿನ ಪ್ರಧಾನಿಗೆ ಸಂವಿಧಾನ ರಚಿಸಿಕೊಡುವಂತೆ ಮನವಿ ಮಾಡಿದ್ದರು. ಇವರ ಮನವಿ ಆಲಿಸಿದ್ದ ಪ್ರಧಾನಿಯು ಸಂವಿಧಾನ ರಚನೆಗೆ ಅಂಬೇಡ್ಕರ್ ಅವರ ಹೆಸರು ಸೂಚಿಸಿದ್ದರು. ಬಾಬಾ ಸಾಹೇಬರ ವಿದ್ವತ್ತು ಇಂಗ್ಲೆಂಡಿಗೆ ತಿಳಿದಿತ್ತು ಎಂದು ಹೇಳಿದರು.
ದೇಶದ ಆಡಳಿತ ನಡೆಸುವವರು ಸುಳ್ಳನ್ನು ಸತ್ಯದಿಂದ, ಜಿಪುಣತನವನ್ನು ದಾನದಿಂದ, ದ್ವೇಷವನ್ನು ಪ್ರೀತಿಯಿಂದ ಗೆಲ್ಲುವ ನಡವಳಿಕೆ ಹೊಂದಿರಬೇಕು. ಬುದ್ಧರು ಜಾತಕಗಳಲ್ಲಿ ಆಡಳಿತ ನಡೆಸುವ ರಾಜರು ಹೊಂದಿರಬೇಕಾದ ಗುಣಗಳ ಕುರಿತು ವಿವರಿಸಲಾಗಿದೆ. ಬುದ್ಧ ತತ್ವದ ಆಧಾರದ ಮೇಲೆ ಭಾರತ ಸಂವಿಧಾನವನ್ನು ರಚನೆ ಮಾಡಲಾಗಿದೆ. ಇದಕ್ಕು ಮುನ್ನಾ ಕ್ರಿ.ಪೂರ್ವದಲ್ಲಿ ಬುದ್ಧರ ತತ್ವದ ಆಧಾರದ ಮೇಲೆ 16 ಸಾಮ್ರಾಜ್ಯಗಳು ಆಡಳಿತ ನಡೆಸಿದ್ದವು. ಪಂಚಶೀಲ ತತ್ವ ಅಳವಡಿಸಿಕೊಂಡಿರುವ ರಾಜ್ಯ ಅಥವಾ ದೇಶದಲ್ಲಿ ನ್ಯಾಯಾಲಯ ಮತ್ತು ನ್ಯಾಯಾಧೀಶರ ಸಂಖ್ಯೆಯು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಾ ಸಾಗಲಿದೆ ಎಂದು ಹೇಳಿದರು.ಜನ ಜಾಗೃತಿ ವೇದಿಕೆ ಅಧ್ಯಕ್ಷ ಹಾಗೂ ನಗರಸಭೆ ಸದಸ್ಯ ಕೆ.ಶೇಷಾದ್ರಿ ಮಾತನಾಡಿ, ದೇಶಕ್ಕೆ ಜಗತ್ತಿನ ಶ್ರೇಷ್ಠ ಸಂವಿಧಾನವನ್ನು ನೀಡಿದ ಗೌರವ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಸಮಾನತೆ, ಭಾತೃತ್ವದಿಂದ ಕೂಡಿದ್ದು, ಬಡವರಿಂದ ಹಿಡಿದು ದೇಶದ ಮೊದಲ ಪ್ರಜೆ ರಾಷ್ಟ್ರಪತಿಗಳಿಗೆ ಒಂದೇ ಸಮನಾದ ಹಕ್ಕು ನೀಡಿದೆ ಎಂದು ತಿಳಿಸಿದರು.
ಇಂದಿನ ದೃಶ್ಯ ಮಾಧ್ಯಮಗಳು ಕೋಮುವಾದವನ್ನು ವಿಜೃಂಭಿಸುವ ಕೆಲಸ ಮಾಡುತ್ತಿದೆ. ಆಯಕಟ್ಟಿನಲ್ಲಿ ಕುಳಿತಿರುವ ಪಟ್ಟಭದ್ರ ಹಿತಾಸಕ್ತಿಗಳು ತಳ ಹಾಗೂ ಶೋಷಿತ ಸಮುದಾಯದ ಕೂಗನ್ನು ಹತ್ತಿಕ್ಕುವ ಪ್ರಬಲವಾದ ಹುನ್ನಾರ ನಡೆಸುತ್ತಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ವೇಳೆ ಸಂಘಟನೆಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ನಗರಸಭೆ ಅಧ್ಯಕ್ಷೆ ವಿಜಯಕುಮಾರಿ, ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ಸರೋಜಮ್ಮ, ಮುಖಂಡರಾದ ಸೋನಿಯಾ, ಸೋಮಶೇಖರ್, ಪುನೀತ್ ರಾಜ್, ಶಿವಶಂಕರ್, ಚಲುವರಾಜು, ಜಗ್ಗು ಉಪಸ್ಥಿತರಿದ್ದರು. 31ಕೆಆರ್ ಎಂಎನ್ 3.ಜೆಪಿಜಿ
ರಾಮನಗರದ ಅಂಬೇಡ್ಕರ್ ಭವನದಲ್ಲಿ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶವನ್ನು ಅತಿಥಿಗಳು ಉದ್ಘಾಟಿಸಿದರು.