ಒಡೆದ ಮನಸ್ಸುಗಳ ಬೆಸೆಯುವುದೇ ನಿಜವಾದ ಧರ್ಮ- ರಂಭಾಪುರಿ ಶ್ರೀ

KannadaprabhaNewsNetwork |  
Published : Mar 01, 2025, 01:02 AM IST
ಪೋಟೋ ಇದೆ. | Kannada Prabha

ಸಾರಾಂಶ

ಮಾನವೀಯ ಆದರ್ಶ ಮೌಲ್ಯಗಳು ಬೆಳೆದು ಬರಬೇಕು. ಮಾನವೀಯತೆಯಲ್ಲಿ ನಂಬಿಕೆ, ವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಮಾತು ಒಂದುಗೂಡಿಸಬೇಕೆ ಹೊರತು ಒಡೆಯಬಾರದು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಲಕ್ಷ್ಮೇಶ್ವರ: ಮಾನವೀಯ ಆದರ್ಶ ಮೌಲ್ಯಗಳು ಬೆಳೆದು ಬರಬೇಕು. ಮಾನವೀಯತೆಯಲ್ಲಿ ನಂಬಿಕೆ, ವಿಶ್ವಾಸವನ್ನು ಯಾವತ್ತೂ ಕಳೆದುಕೊಳ್ಳಬಾರದು. ಮಾತು ಒಂದುಗೂಡಿಸಬೇಕೆ ಹೊರತು ಒಡೆಯಬಾರದು. ಒಡೆದ ಮನಸ್ಸುಗಳನ್ನು ಬೆಸೆಯುವುದೇ ನಿಜವಾದ ಧರ್ಮವೆಂದು ಬಾಳೆಹೊನ್ನೂರು ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶುಕ್ರವಾರ ಸಮೀಪದ ಮುಕ್ತಿಮಂದಿರ ಕ್ಷೇತ್ರದಲ್ಲಿ ಶಿವರಾತ್ರಿ ಜಾತ್ರಾ ಮಹೋತ್ಸವ ಹಾಗೂ ಲಿಂ. ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳವರ ಜನ್ಮ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು. ಸುಖ ಬಯಸುವುದು ಮನುಷ್ಯನ ಸಹಜ ಗುಣ. ದುರ್ನಡತೆಯಿಂದಾಗಿ ಮನುಷ್ಯನ ಬದುಕು ಛಿದ್ರಗೊಂಡಿದೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಬಡಿದಾಡಿ ಸತ್ತವರು ಕೋಟಿ ಕೋಟಿ ಜನ. ಆದರೆ ಭಗವಂತನಿಗಾಗಿ ಹಂಬಲಿಸಿದವರು ಬಹಳಷ್ಟು ವಿರಳ. ಮಹಾನುಭಾವರಿಗೆ ಸತ್ಯವೇ ಸಂಪತ್ತು. ಧರ್ಮವೇ ಅವರ ಉಸಿರು. ನದಿ ಜನರ ದಾಹವನ್ನು ಹಿಂಗಿಸುತ್ತದೆ. ವೃಕ್ಷವು ನೆರಳು, ಹೂ, ಹಣ್ಣು ಕೊಡುತ್ತದೆ. ಮಳೆಯಿಂದ ಬೆಳೆ ಉಂಟಾಗುತ್ತದೆ. ಸತ್ಪುರುಷರು ಜ್ಞಾನ ಸುಧೆಯನ್ನು ಹಂಚುವುದರ ಮೂಲಕ ಇತರರ ಬಾಳಿಗೆ ಬೆಳಕು ತೋರುತ್ತಾರೆ. ಜಗದ ಜನತೆಗೆ ಬೆಳಕು ತೋರುವ ಮಹಾತ್ಮರ ಮಾತುಗಳನ್ನು ಸದಾ ಜ್ಞಾಪಿಸಿಕೊಂಡು ಬಾಳಬೇಕಾಗುತ್ತದೆ. ಲಿಂ.ಶ್ರೀಮದ್ ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಭೂ ಲೋಕದ ಶಿವನಾಗಿ ಭಕ್ತರನ್ನು ಉದ್ಧರಿಸಿದ ಪರಮಾಚಾರ್ಯರು. ಶಿವರಾತ್ರಿ ಜಾತ್ರಾ ಮಹೋತ್ಸವ ಸಂದರ್ಭದಲ್ಲಿ ಲಿಂ. ಶ್ರೀಮದ್ ರಂಭಾಪುರಿ ಜಗದ್ಗುರು ವೀರರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಹಮ್ಮಿಕೊಂಡಿರುವುದು ಸ್ತುತ್ಯ ಕಾರ್ಯ. ಅವರು ೧೯ ವರುಷಗಳ ಕಾಲ ವೀರಶೈವ ಧರ್ಮ ಸಂಸ್ಕೃತಿ ಮತ್ತು ಮಾನವ ಧರ್ಮದ ಹಿರಿಮೆಯನ್ನು ಬೋಧಿಸಿ ಉದ್ಧರಿಸಿದ್ದನ್ನು ಮರೆಯಲಾಗದೆಂದರು.ಎಮ್ಮಿಗನೂರು ವಾಮದೇವ ಮಹಂತ ಶಿವಾಚಾರ್ಯರು ಸಮಾರಂಭವನ್ನು ಉದ್ಘಾಟಿಸಿದರು. ನೇತೃತ್ವ ವಹಿಸಿದ ಮುಕ್ತಿಮಂದಿರದ ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಮನಸ್ಸಿದ್ದರೆ ಮಾರ್ಗಗಳು ಕಾಣುತ್ತವೆ. ಮನಸ್ಸಿಲ್ಲದಿದ್ದರೆ ನೂರಾರು ನೆಪಗಳು ಮುಂದೆ ಬರುತ್ತವೆ. ಸುಳ್ಳಿನ ಜೊತೆ ದುಷ್ಟರ ಶಕ್ತಿ ಇದ್ದರೆ ಸತ್ಯದ ಜೊತೆ ದೈವಶಕ್ತಿ ಇರುತ್ತದೆ. ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳು ಮತ್ತು ಲಿಂ.ರಂಭಾಪುರಿ ವೀರರುದ್ರಮುನಿ ಜಗದ್ಗುರುಗಳು ಧರ್ಮ ಮುಖಿಯಾಗಿ ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸಿದರೆಂದರು. ಗಿರಿಸಾಗರದ ರುದ್ರಮುನಿ ಶಿವಾಚಾರ್ಯರು, ಬಿಲ್ವಕೆರೂರು ಸಿದ್ಧಲಿಂಗ ಶಿವಾಚಾರ್ಯರು, ಕಲಾದಗಿಯ ಗಂಗಾಧರ ಶಿವಾಚಾರ್ಯರು, ಲಕ್ಷ್ಮೇಶ್ವರದ ಮಳೆಮಲ್ಲಿಕಾರ್ಜುನ ಶಿವಾಚಾರ್ಯರು, ಹಿರೇವಡ್ಡಟ್ಟಿ ವೀರೇಶ್ವರ ಶಿವಾಚಾರ್ಯರು ಉಪದೇಶಾಮೃತವನ್ನಿತ್ತರು. ಗದಗಿನ ವೀರೇಶ ಕೂಗು, ದಾವಣಗೆರೆ ಚನಬಸಯ್ಯ ಹಿರೇಮಠ, ಚಂದ್ರಶೇಖರ ವಿಶ್ವನಾಥಯ್ಯ ಚಿಕ್ಕತೊಗಲೇರಿ, ವೀರಣ್ಣ ಪವಾಡದ, ಸೋಮಣ್ಣ ಡಾಣಗಲ್ಲ, ಪಾಲಿಕೊಪ್ಪದ ಶಿವನಗೌಡ ಪಾಟೀಲ ಸೇರಿದಂತೆ ಹಲವಾರು ಗಣ್ಯರಿಗೆ ಮತ್ತು ದಾನಿಗಳಿಗೆ ರಂಭಾಪುರಿ ಜಗದ್ಗುರುಗಳು ಗುರುರಕ್ಷೆಯಿತ್ತು ಶುಭ ಹಾರೈಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೋಷ, ಗಂಗಾಧರ ಹಿರೇಮಠ ವಿಠಲಾಪುರ ಇವರಿಂದ ಪ್ರಾರ್ಥನೆ, ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು. ಡಾ. ಗುರುಸ್ವಾಮಿ ಕಲಕೇರಿ ಇವರಿಂದ ಸಂಗೀತ ಸೌರಭ ಜರುಗಿತು. ಸಮಾರಂಭಕ್ಕೂ ಮುನ್ನ ರಂಭಾಪುರಿ ಲಿಂ. ಉಭಯ ಜಗದ್ಗುರುಗಳವರ ಅಡ್ಡಪಲ್ಲಕ್ಕಿ ಮಹೋತ್ಸವ-ಕಡಬಿನ ಕಾಳಗ ನೆರವೇರಿತು. ಸಮಾರಂಭದ ನಂತರ ಅನ್ನ ದಾಸೋಹ ನೆರವೇರಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!