ನುಡಿದಂತೆ ನಡೆಯುವುದೇ ನಿಜವಾದ ಧರ್ಮ: ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ

KannadaprabhaNewsNetwork |  
Published : Feb 24, 2025, 12:34 AM IST
23ಎಚ್‌ವಿಆರ್2, 2ಎ | Kannada Prabha

ಸಾರಾಂಶ

ದೇಶ ಕಟ್ಟುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವುದೇ ಶ್ರೇಷ್ಠ ದಾನವಾಗುತ್ತದೆ.

ಹಾವೇರಿ: ಧರ್ಮ ಎಂಬುದು ಗುಡಿ ಗೋಪುರದಲ್ಲಿ, ಮಠ ಮಂದಿರದಲ್ಲಿ ಇಲ್ಲ, ಧರ್ಮ ಎಂಬುದು ಪ್ರತಿ ಜೀವರಾಶಿಯಲ್ಲಿದೆ. ಪ್ರತಿಯೊಬ್ಬರೂ ಕರ್ತವ್ಯವನ್ನು ನುಡಿದಂತೆ ನಡೆದರೆ ಅದು ಧರ್ಮವಾಗುತ್ತದೆ. ಉತ್ತಮ ಸಾಮಾಜಿಕ ಮತ್ತು ಕೌಟುಂಬಿಕ ಮೌಲ್ಯಗಳನ್ನು ಅನುಸರಿಸುವುದೇ ನಿಜವಾದ ಧರ್ಮ ಎಂದು ಉಜ್ಜಯನಿ ಸದ್ದರ್ಮ ಪೀಠದ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ನಗರದ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಉಜ್ಜಯಿನಿ ಜಗದ್ಗುರುಗಳ ದ್ವಾದಶ ಪಟ್ಟಾಧಿಕಾರದ ವರ್ಧಂತಿ ಮಹೋತ್ಸವ ಮತ್ತು ಭಾವೈಕ್ಯತಾ ಸಮಾರಂಭದ ಎರಡನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.ದಾನಗಳಲ್ಲಿ ಶ್ರೇಷ್ಠವಾದ ದಾನಗಳು ಬಹಳಷ್ಟು ಇವೆ. ಸಂದರ್ಭಾನುಸಾರ ಅದರ ಮಹತ್ವ ಗೊತ್ತಾಗುತ್ತದೆ. ದೇಶ ಕಟ್ಟುವಲ್ಲಿ ಚುನಾವಣೆಗಳು ಪ್ರಮುಖ ಪಾತ್ರ ವಹಿಸುತ್ತವೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೇ ಮತದಾನ ಮಾಡುವುದೇ ಶ್ರೇಷ್ಠ ದಾನವಾಗುತ್ತದೆ. ಹಾಗೆಯೇ ದೇಶದ ಬೆನ್ನೆಲುಬು ರೈತ. ಆತನಿಗೆ ಕನ್ಯಾದಾನ ಮಾಡುವುದೂ ಅತ್ಯಂತ ಶ್ರೇಷ್ಠ ದಾನವಾಗುತ್ತದೆ. ದುರ್ಯೋಧನ ವೀರನಾದರೂ ಪ್ರವೃತ್ತಿಯಲ್ಲಿ ಅಧರ್ಮಿಯಾಗಿದ್ದ. ಕರ್ಣ ದಾನಶೂರನಾಗಿದ್ದರೂ ಅಧರ್ಮದಲ್ಲಿ ಪಾಲುದಾರನಾಗಿದ್ದರಿಂದ ಖಳನಾಯಕನಾದ ಎಂದರು.ಹರಿಹರದ ವಿಶ್ರಾಂತ ಪ್ರಾಚಾರ್ಯ ಪ್ರೊ. ಎಚ್.ಎ. ಬಿಕ್ಷಾವರ್ತಿಮಠ ಮಾತನಾಡಿ, ಪಂಚಪೀಠಗಳು ಎಂದಿಗೂ ಬಸವಾದಿ ಶರಣರ ವಿರೋಧಿಗಳಲ್ಲ. ಎರಡೂ ಒಂದೇ. ಕಾಯಕವೇ ಕೈಲಾಸ ಶರಣರ ವಾಣಿಯಾದರೆ, ವೃತ್ತಿ ಚೈತನ್ಯ ಎಂಬುದು ಪಂಚಪೀಠಗಳ ಆಶಯ. ಇದರ ಅರ್ಥವೂ ಒಂದೇ ಆಗಿದೆ. ವೀರಶೈವ ಲಿಂಗಾಯತ ಹೆಸರು ಬೇರೆಯಾದರೂ ಅವುಗಳ ಧರ್ಮ ಚಿಂತನೆ ಒಂದೇ ಆಗಿದೆ ಎಂದರು.ಕೂಡಲದ ಗುರು ನಂಜೇಶ್ವರಮಠದ ಗುರು ಮಹೇಶ್ವರ ಸ್ವಾಮೀಜಿ ಮಾತನಾಡಿ, ಮರಿಕಲ್ಯಾಣ ಖ್ಯಾತಿಯ ಹಾವೇರಿಯು ಕೇವಲ ಯಾಲಕ್ಕಿ ಕಂಪು ಮಾತ್ರವಲ್ಲ, ಭಕ್ತಿಯ ಕಂಪಿನ ನಗರವಾಗಿದೆ. ದ್ವಾದಶ ಪಟ್ಟಾಧಿಕಾರ ಮಹೋತ್ಸವದ ಯಶಸ್ಸು ನಗರಕ್ಕೆ ಮತ್ತೊಂದು ಗರಿಯನ್ನು ನೀಡುತ್ತದೆ ಎಂದರು. ಮಾನಿಹಳ್ಳಿಯ ಡಾ. ಮಳೆಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ನೆಗಳೂರಿನ ಗುರುಶಾಂತೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಹಿರೇಕುರುವತ್ತಿಯ ಸಿದ್ಧನಂದೀಶ್ವರ ಸ್ವಾಮೀಜಿ, ದಿಂಡನಹಳ್ಳಿಯ ಪಶುಪತಿ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಅಕ್ಕಿಆಲೂರಿನ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ತಮ್ಮಣ್ಣ ಮುದ್ದಿ, ಸಂತೋಷ ಹಿರೇಮಠ, ಮಲ್ಲಿಕಾರ್ಜುನಯ್ಯ ಹಿರೇಮಠ, ಶಿವಯೋಗಿ ಯರೇಶೀಮಿ, ಶಂಭುಲಿಂಗಪ್ಪ ಅಂಗಡಿ, ಉಮೇಶ ಹತ್ತಿಮತ್ತೂರ, ನಾಗರಾಜ ಕುಸನೂರ, ಶಂಭುಲಿಂಗಪ್ಪ ಕೌದಿ, ಕರಬಸನಗೌಡ ಪಾಟೀಲ, ಶಿವಯೋಗಿ ಹೂಲಿಕಂತಿಮಠ ಮತ್ತಿತರರು ಉಪಸ್ಥಿತರಿದ್ದರು.ರೇಣುಕಾ ಮಡಿವಾಳರ ಪ್ರಾರ್ಥಿಸಿದರು. ವಿರುಪಾಕ್ಷಪ್ಪ ಹತ್ತಿಮತ್ತೂರ ಸ್ವಾಗತಿಸಿದರು. ಶೋಭಾ ಜಾಗಟಗೇರಿ ನಿರೂಪಿಸಿದರು. ತಮ್ಮಣ್ಣ ಮುದ್ದಿ ವಂದಿಸಿದರು.

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ