ಭ್ರಷ್ಟ ಸರ್ಕಾರದ ವಿರುದ್ಧ ಜನಾಕ್ರೋಶದ ಕಹಳೆ: ಬಿಎಸ್‌ವೈ

KannadaprabhaNewsNetwork |  
Published : Sep 02, 2026, 03:00 AM IST
ಪಾದಯಾತ್ರೆ | Kannada Prabha

ಸಾರಾಂಶ

ಇದು ಬಿಜೆಪಿ ಪಾದಯಾತ್ರೆಯಲ್ಲ, ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯದ 6 ಕೋಟಿ ಜನರ ಆಕ್ರೋಶದ ಕಹಳೆಯ ಹೋರಾಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಕನ್ನಡಪ್ರಭ ವಾರ್ತೆ ಲಿಂಗಸುಗೂರು (ರಾಯಚೂರು):

ಇದು ಬಿಜೆಪಿ ಪಾದಯಾತ್ರೆಯಲ್ಲ, ರಾಜ್ಯದ ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ರಾಜ್ಯದ 6 ಕೋಟಿ ಜನರ ಆಕ್ರೋಶದ ಕಹಳೆಯ ಹೋರಾಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.

ಜಿಲ್ಲೆಯ ಲಿಂಗಸುಗೂರು ಪಟ್ಟಣದ ಬೆಂಗಳೂರು ಬೈಪಾಸ್‌ ರಸ್ತೆಯಲ್ಲಿನ ಮೈದಾನದಲ್ಲಿ ಮಂಗಳವಾರ ಬಿಜೆಪಿಯಿಂದ ಹಮ್ಮಿಕೊಂಡಿದ್ದ ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಧಿಕಾರದ ಮದದಲ್ಲಿ ಮೆರೆಯುವ, ರೈತ, ಜನ, ಪ್ರಗತಿ ಹಾಗೂ ಮಹಿಳಾ ವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಿರುವ ಸರ್ಕಾರವನ್ನು ಕಿತ್ತೊಗೆಯುವವರೆಗೆ ನಮ್ಮ ಹೋರಾಟ ಮುಂದುವರೆಯಲಿದೆ ಎಂದರು.

ಇದು ಚುನಾವಣಾ ಪ್ರಚಾರದ ಸಭೆ ಅಲ್ಲ. ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯುವ ಸಂಕಲ್ಪದೊಂದಿಗೆ ಪ್ರಾರಂಭವಾಗಿರುವ ಹೋರಾಟವಾಗಿದೆ. ಮುಖ್ಯಮಂತ್ರಿಗಳಿಗೆ ಸ್ವಾತಂತ್ರ್ಯ ಇದೆಯೇ? ಪ್ರತಿಯೊಂದಕ್ಕೂ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಕಾಲು ಹಿಡಿಯುವ ನೀವು ಮುಖ್ಯಮಂತ್ರಿಯೇ? ಇದು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆ ತರುತ್ತದೆಯೇ ಎಂದು ಪ್ರಶ್ನಿಸಿದ ಅವರು, ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಜನ ಜಾಗೃತಿಗಾಗಿ ನಡೆಯುತ್ತಿರುವ ಪಾದಯಾತ್ರೆಗೆ ಸಂಪೂರ್ಣ ಬೆಂಬಲ ನೀಡಬೇಕು.

ಇದು ಹೋರಾಟದ ಮೊದಲ ಹೆಜ್ಜೆಯಾಗಿದ್ದು, ಭ್ರಷ್ಟ ಸರ್ಕಾರ ಮಾಡುತ್ತಿರುವ ಲೂಟಿ ವಿರುದ್ಧ ಜನರಿಗೆ ಮನವರಿಕೆ ಮಾಡಿಕೊಡಬೇಕಾಗಿದೆ. ಬರ ಘೋಷಣೆಯಲ್ಲಿ ಅನ್ಯಾಯ ಮಾಡಿರುವ ಸರ್ಕಾರವು, ಪರಿಹಾರ ಕ್ರಮವನ್ನು ಸಹ ಕೈಗೊಂಡಿಲ್ಲ. ಹೋರಾಟದ ಕಿಚ್ಚು ಆರಂಭಗೊಂಡಿದ್ದು, ಬಳ್ಳಾರಿ ತನಕ ನಡೆಯಲಿರುವ ಯಾತ್ರೆಯು ಬಹಳದೊಡ್ಡ ಪ್ರಮಾಣದಲ್ಲಿ ಸಾಗಲಿದ್ದು, ಲೂಟಿ ಸರ್ಕಾರವನ್ನು ಜನ ಕ್ಷಮಿಸುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಿಮ್ಮೆಲ್ಲರ ಬೆಂಬಲ ಇರಬೇಕು ಎಂದು ಕೋರಿದರು.

ಹಗಲು ದರೋಡೆಯಲ್ಲಿ ಕಾಂಗ್ರೆಸ್‌ ಸರ್ಕಾರ ಭಾಗಿ:

ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಹಗಲು ದರೋಡೆಯಲ್ಲಿ ಭಾಗಿಯಾಗಿದೆ. ಹತ್ತು ಹಲವು ಅಜೆಂಡಾಗಳನ್ನು ಇಟ್ಟುಕೊಂಡು ಬಂದಿರುವ ಸರ್ಕಾರದ ವಿರುದ್ಧ ವಿಜಯೇಂದ್ರ ಸೇರಿ ಹಲವಾರು ನಾಯಕ ಪಾದಯಾತ್ರೆ ಕೈಗೊಂಡಿದ್ದು, ಕಾಂಗ್ರೆಸ್‌ ವಿರುದ್ಧ ನಿರಂತರವಾಗಿ ಹೋರಾಟ ಮುಂದುವರೆಯಲಿದೆ. ಇದು ಚುನಾವಣೆಯ ಗುರಿಯನ್ನಿಟ್ಟುಕೊಂಡು ಬಂದ ಹೋರಾಟವಲ್ಲ. ಜನಾಭಿಪ್ರಾಯ ಮೂಡಿಸುವುದಕ್ಕಾಗಿ ನಡೆಸುತ್ತಿರುವ ಪಾದಯಾತ್ರೆ. ಸರ್ಕಾರದ ವೈಫಲ್ಯವನ್ನು ಜನರ ಮುಂದೆ ಇಡಲು ಹೋರಾಟ ನಡೆಸುತ್ತಿರುವುದಾಗಿ ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು.ಹೋರಾಟದ ಕಿಚ್ಚು:ನನಗೆ 86 ವಯಸ್ಸು. ಆದರೆ ಹೋರಾಟದ ಕಿಚ್ಚು ಮುಗಿದಿಲ್ಲ. ಕೆಲವೇ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷವನ್ನು ಸಂಘಟಿಸಿ, ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತೇನೆ.-ಬಿ.ಎಸ್‌.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ರಸ್ತೆ ಅಭಿವೃದ್ಧಿಗೆ ೧೨ ಕೋಟಿ ರು. ಅನುದಾನ
ನಾಳೆ, ನಾಡಿದ್ದು ನಗರದಲ್ಲಿ ಚಿಕನ್ ಮಾರಾಟ ಇಲ್ಲ!