ಕುಟುಂಬ ಹಾಗೂ ಬದುಕಿಗೆ ನಂಬಿಕೆಯೇ ಆಧಾರ: ಡಾ.ಹೇಮಲತಾ

KannadaprabhaNewsNetwork | Published : Apr 17, 2025 12:07 AM

ಸಾರಾಂಶ

ಜೀವನ ನಡೆಯುವುದೇ ಪರಸ್ಪರ ನಂಬಿಕೆಯಿಂದ. ನಂಬಿಕೆ ಬೆಳೆಯಲು ಸ್ವಾಧ್ಯ್ಯಾಯ, ತಂದೆ ತಾಯಿಗಳು ಹಾಗೂ ಗುರುಹಿರಿಯರು ಕಾರಣರಾಗುತ್ತಾರೆ. ಭಗವಂತನಲ್ಲಿ ಅಚಲ ನಂಬಿಕೆ ಇಟ್ಟರೆ ಮಾತ್ರ ಫಲ ಸಾಧ್ಯ. ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಫಲಿತಾಂಶದ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸದೆ, ಸಕಾರಾತ್ಮಕ ನಂಬಿಕೆಯೊಂದಿಗೆ ಮುಂದುವರಿಯಬೇಕು. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಮುನ್ನಡೆಯಬೇಕು.

ಕನ್ನಡಪ್ರಭ ವಾರ್ತೆ ಮೈಸೂರು

ಕುಟುಂಬ ಹಾಗೂ ಬದುಕಿಗೆ ನಂಬಿಕೆಯೇ ಆಧಾರ ಎಂದು ಬೆಂಗಳೂರಿನ ಯೂನಿವರ್ಸಲ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಹೇಮಲತಾ ಹೇಳಿದರು.

ಸುತ್ತೂರು ಶ್ರೀಕ್ಷೇತ್ರದಲ್ಲಿ ಆಯುರ್ವೇದ, ವಾಕ್- ಶ್ರವಣ ಹಾಗೂ ನರ್ಸಿಂಗ್ ವಿದ್ಯಾರ್ಥಿಗಳ ಶಿಬಿರದಲ್ಲಿ ಅವರು ಮಾತನಾಡಿದರು.

ಜೀವನ ನಡೆಯುವುದೇ ಪರಸ್ಪರ ನಂಬಿಕೆಯಿಂದ. ನಂಬಿಕೆ ಬೆಳೆಯಲು ಸ್ವಾಧ್ಯ್ಯಾಯ, ತಂದೆ ತಾಯಿಗಳು ಹಾಗೂ ಗುರುಹಿರಿಯರು ಕಾರಣರಾಗುತ್ತಾರೆ. ಭಗವಂತನಲ್ಲಿ ಅಚಲ ನಂಬಿಕೆ ಇಟ್ಟರೆ ಮಾತ್ರ ಫಲ ಸಾಧ್ಯ. ಯಾವುದೇ ಕಾರ್ಯದಲ್ಲಿ ತೊಡಗಿಸಿಕೊಳ್ಳುವಾಗ ಫಲಿತಾಂಶದ ಬಗ್ಗೆ ನಕಾರಾತ್ಮಕವಾಗಿ ಆಲೋಚಿಸದೆ, ಸಕಾರಾತ್ಮಕ ನಂಬಿಕೆಯೊಂದಿಗೆ ಮುಂದುವರಿಯಬೇಕು. ಸ್ವಸಾಮರ್ಥ್ಯದಲ್ಲಿ ನಂಬಿಕೆ ಇಟ್ಟು ಮುನ್ನಡೆಯಬೇಕು ಎಂದರು.

ಕಲಿಕಾ ಸಲಹೆಗಾರರಾದ ಡಾ. ಪಾರ್ವತಿ ವೇಣು ಮಾತನಾಡಿ, ಜೀವನದಲ್ಲಿ ಆತ್ಮ ವಿಶ್ವಾಸದಿಂದ ಏನನ್ನಾದರೂ ಸಾಧಿಸಬಹುದು. ಆಯ್ಕೆಗಳನ್ನು ಮಾಡುವಾಗ ಸ್ಪಷ್ಟತೆ ಇರಬೇಕು. ಭಯದ ಕಾರಣದಿಂದ ನಮ್ಮ ನಿಜವಾದ ಶಕ್ತಿಯ ಅನಾವರಣ ಮಾಡಲು ಸಾಧ್ಯವಿಲ್ಲ. ಶಾಂತಿಯುತವಾಗಿ ಸಂತೋಷದಿಂದ ಕಾರ್ಯನಿರ್ವಹಿಸಿದಾಗ ಮಾತ್ರ ಬಯಸಿದ್ದನ್ನು ಪಡೆಯಲು ಸಾಧ್ಯವಾಗುತ್ತದೆ. ಬದುಕಿಗೆ ಅವಶ್ಯಕವಾದ ಅನೇಕ ಅಂಶಗಳನ್ನು ಈ ರೀತಿಯ ಶಿಬಿರಗಳಲ್ಲಿ ಭಾಗವಹಿಸುವುದರಿಂದ ಪಡೆದುಕೊಳ್ಳಬಹುದು ಎಂದರು.

ಶಿಬಿರಾರ್ಥಿಗಳು ಸಾಮೂಹಿಕ ಪ್ರಾರ್ಥನೆ, ಯೋಗಾಭ್ಯಾಸ, ದೇಸಿ ಆಟಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಸಂಜೆ ಮೂಲ ಶ್ರೀಮಠ, ಶ್ರೀ ಸೋಮೇಶ್ವರ ದೇವಸ್ಥಾನ, ಶ್ರೀ ಮಹದೇಶ್ವರರು ರಾಗಿ ಬೀಸಿದ ಕಲ್ಲು ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನಗಳ ದರ್ಶನ ಪಡೆದು ಕೃತಾರ್ಥ ಭಾವ ಹೊಂದಿದರು. ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿವಿಧ ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಗೋ-ಶಾಲೆಗೆ ಭೇಟಿ ವಿವಿಧ ಗೋ-ತಳಿಗಳನ್ನು ವೀಕ್ಷಿಸಿದರು. ಕಪಿಲಾ ನದಿ ತೀರದಲ್ಲಿ ಪ್ರಾರ್ಥನೆ ಹಾಗೂ ಕಪಿಲಾರತಿ ಕಾರ್ಯಕ್ರಮವು ಶ್ರದ್ಧಾ ಭಕ್ತಿಯಿಂದ ನೆರವೇರಿತು. ನಂತರ ಶಿಬಿರಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಶಿಬಿರದಲ್ಲಿ ಒಟ್ಟು 256 ಶಿಬಿರಾರ್ಥಿಗಳು ಪಾಲ್ಗೊಂಡಿದ್ದಾರೆ.

ಎಳೆಯರ ಮೇಳದಲ್ಲಿ ಪದ್ಮಶ್ರೀ ಕೆ.ಎಸ್‌.ರಾಜಣ್ಣ ಭಾಗಿ

ಕನ್ನಡಪ್ರಭ ವಾರ್ತೆ ಮೈಸೂರು

ಸರಸ್ವತಿಪುರಂನ ಜೆಎಸ್‌ಎಸ್ ಶಾಲಾ ಸಮುಚ್ಛಯದ ಮಂತ್ರಮಹರ್ಷಿ ಸಭಾಭವನದಲ್ಲಿ ನಡೆಯುತ್ತಿರುವ ಎಳೆಯರ ಮೇಳ-2025ರ ಮಕ್ಕಳ ಬೇಸಿಗೆ ಶಿಬಿರದಲ್ಲಿ ಪ್ಯಾರಾ ಅಂತಾರಾಷ್ಟ್ರೀಯ ಕ್ರೀಡಾಪಟು ಹಾಗೂ ಅಂಗವಿಕಲ ವ್ಯಕ್ತಿಗಳ ಅಧಿನಿಯಮದ ನಿವೃತ್ತ ಆಯುಕ್ತ ಪದ್ಮಶ್ರೀ ಡಾ.ಕೆ.ಎಸ್. ರಾಜಣ್ಣ ಪಾಲ್ಗೊಂಡು ಮಕ್ಕಳೊಡನೆ ತಮ್ಮ ಜೀವನಾನುಭವ ಹಂಚಿಕೊಂಡರು.

ತಮ್ಮ ಜೀವನದ ಹಾದಿಯಲ್ಲಿ ಎದುರಾದ ಸವಾಲನ್ನು ಹೇಗೆ ಸ್ವೀಕರಿಸಿ ಎದುರಿಸಿದೆ ಎಂಬುದನ್ನು ತಮ್ಮ ಬದುಕಿನ ಪುಟವನ್ನು ತೆರೆಯುತ್ತ ಮಕ್ಕಳು ಕೇಳಿದ ಪ್ರಶ್ನೆಗಳಿಗೆ ಖುಷಿಯಿಂದ ಉತ್ತರಿಸಿದರು. ಜಪಾನ್ ಮಾದರಿಯ (ಓರಿಗಾಮಿ) ಕಾಗದದ ಕಲೆಯಲ್ಲಿ ಪಕ್ಷಿ, ಮೀನು ಇತ್ಯಾದಿಗಳನ್ನು ಕ್ಷಣಾರ್ಧದಲ್ಲಿ ಯಾವುದೇ ಕತ್ತರಿ ಸಹಾಯವಿಲ್ಲದೆ ಪೇಪರ್ ಮಡಿಕೆಗಳಿಂದಲೇ ತಯಾರಿಸಿ ಅದ್ಭುತ ಕಲೆ ಪ್ರದರ್ಶಿಸಿದರು.

ಈ ರೀತಿ ಸುಮಾರು 25 ಮಾದರಿಯನ್ನು ಜಪಾನಿನ ಸಂಪೂನ್ಮೂಲ ವ್ಯಕ್ತಿಯಿಂದ 40 ವರ್ಷಗಳ ಹಿಂದೆ ಕಲಿತಿರುವುದನ್ನು ಮರೆಯದೆ ಕಾಪಿಟ್ಟುಕೊಂಡಿದ್ದಾರೆ, ಇವರಿಗೆ ಶಿಬಿರದ ಸಂಚಾಲಕ ಚಂದ್ರಶೇಖರಾಚಾರ್ ಧನ್ಯವಾದ ಅರ್ಪಿಸಿದರು. ಅನೇಕ ಪೋಷಕರು ಕುತೂಹಲದಿಂದ ಪಾಲ್ಗೊಂಡಿದ್ದರು.

Share this article