ರಾಜ್ಯದ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 45,590 ಹುದ್ದೆ ಖಾಲಿಯಿದ್ದು, ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ವಿಧಾನಸಭೆ : ರಾಜ್ಯದ 41,088 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 45,590 ಹುದ್ದೆ ಖಾಲಿಯಿದ್ದು, ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಪ್ರಾಥಮಿಕ ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದ್ದಾರೆ.
ಗುರುವಾರ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಹರೀಶ್ ಪೂಂಜ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ 1,78,935 ಹುದ್ದೆ ಮಂಜೂರಾಗಿದ್ದು, ಈ ಪೈಕಿ 1,33,345 ಹುದ್ದೆಗಳು ಭರ್ತಿಯಾಗಿವೆ. 45,590 ಹುದ್ದೆಗಳು ಖಾಲಿ ಇವೆ. ಖಾಲಿ ಹುದ್ದೆಗಳನ್ನು ಹಂತ ಹಂತವಾಗಿ ನೇಮಕಾತಿ ಮಾಡಲು ಈಗಾಗಲೇ ಕ್ರಮ ಕೈಗೊಂಡಿದ್ದೇವೆ ಎಂದರು.
ಇನ್ನು ರಾಜ್ಯದಲ್ಲಿ 5,024 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಈ ಪ್ರೌಢಶಾಲೆಗಳಿಗೆ 44,144 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 32,010 ಹುದ್ದೆಗಳು ಭರ್ತಿಯಾಗಿದ್ದು 12,134 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಖಾಲಿ ಇರುವ ಹುದ್ದೆಗಳಗೆ ಎದುರಾಗಿ 2025-2026ನೇ ಶೈಕ್ಷಣಿಕ ಸಾಲಿಗೆ ಪ್ರಾಥಮಿಕ ಶಾಲೆಗಳಲ್ಲಿ 40,000 ಮತ್ತು ಪ್ರೌಢಶಾಲೆಗಳಲ್ಲಿ 11,000 ಒಟ್ಟಾರೆ 51,000 ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವ ಮೂಲಕ ಶಿಕ್ಷಕರ ಕೊರತೆ ಸರಿದೂರಿಸಲಾಗಿದೆ. ಆದರೆ, ಅವರಿಗೆ ವೇತನ ಕಡಿಮೆಯಿದ್ದು, ಹಂತ ಹಂತವಾಗಿ ಕಾಯಂ ಶಿಕ್ಷಕರ ನೇಮಕಾತಿ ಮಾಡಲಾಗುವುದು ಎಂದರು.
ಮೊಟ್ಟೆಗೆ ನೀಡುವ ಹಣ ಹೆಚ್ಚಳ ಬಗ್ಗೆ ಚರ್ಚೆ:
ಶಾಲಾ ಮಕ್ಕಳಿಗೆ ವಾರಕ್ಕೆ 5 ದಿನ ಬೆಳಗ್ಗೆ ಬಿಸಿ ಹಾಲು, ಇದರೊಂದಿಗೆ ಮಿಕ್ಸ್ ರಾಗಿ ಮಾಲ್ಟ್, ಮಧ್ಯಾಹ್ನ ಬಿಸಿ ಊಟದೊಂದಿಗೆ ವಾರದಲ್ಲಿ ಆರು ದಿನ ಪೂರಕ ಪೌಷ್ಟಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ಉಚಿತವಾಗಿ ವಿತರಿಸಲಾಗುತ್ತಿದೆ. ಈ ಮೊಟ್ಟೆ ಬೆಲೆ ಜಾಸ್ತಿಯಾಗಿದ್ದು, ಶಿಕ್ಷಕರು ಭರಿಸುವಂತಾಗಿದೆ ಎಂದು ಸದಸ್ಯರು ಹೇಳಿದ್ದಾರೆ. ಮೊಟ್ಟೆಗೆ ಅಜೀಂ ಪ್ರೇಮ್ ಅವರು 1,400 ಕೋಟಿ ರು. ನೀಡಿದ್ದು, ಎರಡು ದಿನ ಸರ್ಕಾರದಿಂದ ಭರಿಸಲಾಗುತ್ತಿದೆ. ದರ ಪರಿಷ್ಕರಣೆ ಬಗ್ಗೆ ಚರ್ಚಿಸಲಾಗುವುದು ಎಂದರು.
ಶಿಕ್ಷಣ ಬಗ್ಗೆ ವಿಶೇಷ ಚರ್ಚೆಗೆ ಆಗ್ರಹ:
ಬಿಜೆಪಿ ಸದಸ್ಯ ಎಸ್.ಸುರೇಶ್ ಕುಮಾರ್, ಈಗಾಗಲೇ ಸಭಾಧ್ಯಕ್ಷರಿಗೆ ಪತ್ರ ನೀಡಿದ್ದು, ಶಿಕ್ಷಣ ವಿಷಯಕ್ಕೆ ಎರಡು ದಿನದ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ಜನವರಿಯಲ್ಲಿ ಬೆಂಗಳೂರಿನಲ್ಲಿ ಇದರ ಬಗ್ಗೆಯೇ ಅಧಿವೇಶನ ಕರೆಯಬೇಕು. ಚರ್ಚೆಯಲ್ಲಿ ಹಿರಿಯ ಶಾಸಕರ ಸಲಹೆ-ಸೂಚನೆಗಳನ್ನು ಪಡೆದು ಕ್ರಮ ಕೈಗೊಳ್ಳಬೇಕು ಎಂದರು. ಇದಕ್ಕೆ ಸ್ಪೀಕರ್ ಅನುಮತಿಸಿದರೆ ನಾವು ಸಿದ್ಧ ಎಂದು ಮಧು ಬಂಗಾರಪ್ಪ ಹೇಳಿದರು.
ನೇಮಕ ಪರ್ವ
- ಹಂತ ಹಂತವಾಗಿ ನೇಮಕಾತಿಗೆ ಕ್ರಮ: ಶಿಕ್ಷಣ ಸಚಿವ
ಎಷ್ಟು ಹುದ್ದೆ ಖಾಲಿ?
- ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಒಟ್ಟು ಮಂಜೂರಾದ ಹುದ್ದೆಗಳ ಸಂಖ್ಯೆ 1,78,935
- 1,33,345 ಹುದ್ದೆಗಳು ಭರ್ತಿ. 45,590 ಹುದ್ದೆಗಳು ಖಾಲಿ. ಹಂತ ಹಂತವಾಗಿ ನೇಮಕ
- ಪ್ರೌಢಶಾಲೆಗಳಿಗೆ ಒಟ್ಟು ಮಂಜೂರಾದ ಹುದ್ದೆ 44,144. 32010 ಹುದ್ದೆ ಖಾಲಿ: ಮಧು
- ವಿಧಾನಸಭೆ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಹರೀಶ್ ಪೂಂಜ ಪ್ರಶ್ನೆಗೆ ಸಚಿವ ಉತ್ತರ
- ಶಾಲಾ ಮಕ್ಕಳಿಗೆ ನೀಡುವ ಮೊಟ್ಟೆ ದರ ಪರಿಷ್ಕರಣೆ ಕುರಿತು ಚರ್ಚಿಸುವುದಾಗಿ ಭರವಸೆ
