ದಾಬಸ್‍ಪೇಟೆ: ನಾಡಿನ ಮಠಗಳು ಬಡ ಮಕ್ಕಳಿಗೆ ಶಿಕ್ಷಣ, ದಾಸೋಹ, ವಸತಿ ನೀಡಿ ಸಾಮಾಜಿಕ, ಶೈಕ್ಷಣಿಕವಾಗಿ ತಮ್ಮದೇ ಆದ ಕೊಡುಗೆ ನೀಡುತ್ತಿವೆ ಎಂದು ಬಿಜೆಪಿ ರಾಜಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿ ಮಠದ ಶಿವರಾತ್ರಿ ಜಾತ್ರಾ ಉತ್ಸವ ಮತ್ತು ಹಾಗೂ ಧಾರ್ಮಿಕ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಇಂದು ಮಠಗಳು ಇಲ್ಲದಿದ್ದರೆ ಎಷ್ಟೋ ಜನ ಶಿಕ್ಷಣ ವಂಚಿತರಾಗುತ್ತಿದ್ದರು. ಪಾಲನಹಳ್ಳಿ ಮಠದ ಶ್ರೀಗಳು ಗ್ರಾಮೀಣ ಭಾಗದಲ್ಲಿ ತ್ರಿವಿಧ ದಾಸೋಹದಿಂದ ಮಠ ಬೆಳೆಸುತ್ತಿದ್ದಾರೆ. ಅಕ್ಕ ಪಕ್ಕದ ಗ್ರಾಮಗಳ ಭಕ್ತರಿಗೆ ಶ್ರೀ ಮಠ ಕಲ್ಪವೃಕ್ಷವಾಗಿದೆ. ಉಚಿತ ಸಾಮೂಹಿಕ ವಿವಾಹ, ಆರೋಗ್ಯ ತಪಾಸಣಾ ಶಿಬಿರಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಶೋಷಿತ ವರ್ಗಗಳ ಮೇಲೆತ್ತುವ ಕೆಲಸ:

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಜೀವನದುದ್ದಕ್ಕೂ ಹೋರಾಟ ಮಾಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಬಡವರ ಪರ, ರೈತರ ಪರ, ಪರಿಶಿಷ್ಟ ಜಾತಿ, ಪಂಗಡದವರ ಪರ 30-40 ವರ್ಷಗಳಿಂದ ನಿರಂತರವಾಗಿ ಧ್ವನಿ ಎತ್ತಿದವರು. ಎಲ್ಲ ವರ್ಗಗಳಿಗೂ ಸಮಾನ ಪ್ರಾತಿನಿಧ್ಯ ನೀಡಿ ಜನಪರ ಯೋಜನೆಗಳನ್ನು ಜಾರಿಗೆ ತಂದು ಇಂದಿಗೂ ಮನೆಮಾತಾಗಿದ್ದಾರೆ ಎಂದು ಹೇಳಿದರು.

ಇಂದಿಗೂ ನಾಡಿನ ಜನ ಮರೆತಿಲ್ಲ: ಈ ಹಿಂದೆ ಗ್ರಾಮೀಣ ಭಾಗದ ಬಡವರ ಮನೆಯಲ್ಲಿ ಹೆಣ್ಣು ಮಕ್ಕಳು ಜನಿಸಿದರೆ ಶಾಪ ಎಂದು ಪರಿಗಣಿಸುತ್ತಿದ್ದರು. ಆದರೆ ಯಡಿಯೂರಪ್ಪನವರು ಹೆಣ್ಣು ಮಗು ಶಾಪ ಅಲ್ಲ ಅದು ಮನೆಯ ಭಾಗ್ಯಲಕ್ಷ್ಮೀ ಎಂದು ಹೇಳಿ ಭಾಗ್ಯಲಕ್ಷ್ಮೀ ಯೋಜನೆಗೆ ಜಾರಿಗೊಳಿಸಿ ದೇಶಕ್ಕೆ ಮಾದರಿಯಾದರು. ಅದಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲಿ ಹೆಣ್ಣುಮಕ್ಕಳಿಗೆ ಉಚಿತವಾಗಿ ಸೈಕಲ್ ಯೋಜನೆ, 108 ಉಚಿತ ಆಂಬ್ಯುಲೆನ್ಸ್ ಯೋಜನೆಯಂತಹ ಜನಪರ ಯೋಜನೆಗಳನ್ನು ಜಾರಿಗೆ ತಂದಿರುವುದನ್ನು ಇಂದಿಗೂ ನಾಡಿನ ಜನ ಮರೆತಿಲ್ಲ ಎಂದರು.


ಜವಾಬ್ದಾರಿ ಹೆಚ್ಚಿದೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗಡಿಭಾಗದಲ್ಲಿರುವ ಪಾಲನಹಳ್ಳಿ ಮಠಕ್ಕೆ ಯಾವತ್ತೂ ಭೇಟಿ ನೀಡಿಲ್ಲ, ಶ್ರೀಗಳು ಸಹ ಪರಿಚಯವಿರಲಿಲ್ಲ. ಆದರೆ ಪೂಜ್ಯರು ನನ್ನನ್ನು ಗುರುತಿಸಿ ಶ್ರೀಮಠದಿಂದ ನನಗೆ ಶಿವಗಂಗೋತ್ರಿ ಪ್ರಶಸ್ತಿ ನೀಡಿ ಗೌರವಿಸಿರುವುದು ಸಂತೋಷ ತಂದಿದೆ. ನಾನು ಇದನ್ನು ಪ್ರಶಸ್ತಿ ಎನ್ನುವುದಿಲ್ಲ ನನ್ನ ರಾಜಕೀಯ ಜೀವನಕ್ಕೆ ಕಿರೀಟ ಎಂದು ಭಾವಿಸಿಸುತ್ತೇನೆ. ನಾನು ಇನ್ನೂ ರಾಜಕೀಯದಲ್ಲಿ ಅಂಬೆಕಾಲು ಇಡುತ್ತಿದ್ದು, ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಿದೆ ಎಂದರು.

ಮಾನವಧರ್ಮ ದೊಡ್ಡದು:

ಮೇಲಣಗವಿ ಮಠದ ಡಾ.ಶ್ರೀ ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬಸವಣ್ಣನವರ ವಚನದಂತೆ ಇವನಾರವ ಇವನಾರವ ಎನ್ನದೇ ಎಲ್ಲರೂ ನಮ್ಮವರೇ ಎಂಬಂತೆ ಪಾಲನಹಳ್ಳಿ ಶ್ರೀಗಳು ಭಕ್ತರನ್ನು ಸನ್ಮಾರ್ಗದೆಡೆಗೆ ಕರೆದೊಯ್ಯುತ್ತಿದ್ದಾರೆ. ಎಲ್ಲದಕ್ಕಿಂತಲೂ ಮಾನವಧರ್ಮ ದೊಡ್ಡದು, ಧಾರ್ಮಿಕ ಚಿಂತನೆಯಿದ್ದಲ್ಲಿ ಮಾನಸಿಕ ನೆಮ್ಮದಿ ಸಿಗುತ್ತದೆ. ಧಾರ್ಮಿಕ ಆಚರಣೆಗಳು ದೇಶದಲ್ಲಿ ತಲೆತಲಾಂತರಗಳಿಂದ ನಡೆದು ಬರುತ್ತಿವೆ ಎಂದರು.

ಅಭಿವೃದ್ದಿಗೆ ಭಕ್ತರ ಸಹಕಾರ ಮುಖ್ಯ:

ಪಾಲನಹಳ್ಳಿ ಮಠದ ಡಾ.ಶ್ರೀ.ಸಿದ್ದರಾಜು ಸ್ವಾಮೀಜಿ ಮಾತನಾಡಿ, ಜಗತ್ತು ಪರೋಪಕಾರದಿಂದ ಬದುಕಿದವರನ್ನು ಮಾತ್ರ ಉಳಿಸಿಕೊಳ್ಳುತ್ತದೆ, ಸನಾತನ ಶಾಸ್ತ್ರ ದೊಡ್ಡದು, ಭಕ್ತಗಣ ಎಲ್ಲದಕ್ಕಿಂತ ದೊಡ್ಡದು. ಧಾರ್ಮಿಕ ಚಿಂತನೆಗಳಿಂದ ಗ್ರಾಮಾಭಿವೃದ್ಧಿ ಹೊಂದುತ್ತದೆ. ಮಠದ ಅಭಿವೃದ್ದಿಗೆ ಭಕ್ತರ ಸಹಕಾರ ಮುಖ್ಯಎಂದರು.

ಬೆಳ್ಳಿ ಕಿರೀಟ ಮಠಕ್ಕೆ ನೀಡಿದ ಬಿವೈವಿ:

ಕಾರ್ಯಕ್ರಮದಲ್ಲಿ ಶ್ರೀಮಠದಿಂದ ನೀಡುವ ಶಿವಗಂಗೋತ್ರಿ ಪ್ರಶಸ್ತಿ ಹಾಗೂ ಬೆಳ್ಳಿ ಕಿರೀಟವನ್ನು ಪೂಜ್ಯರು ಹಾಗೂ ಗಣ್ಯರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಶಿವಗಂಗೋತ್ರಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸುತ್ತೇನೆ. ಬೆಳ್ಳಿ ಕಿರೀಟವನ್ನು ಮಠದ ಕಾರ್ಯಗಳಿಗೆ ನೀಡುತ್ತೇನೆ, ಪೂಜ್ಯರು ಸ್ವೀಕರಿಸಬೇಕೆಂದು ಮನವಿ ಮಾಡಿ ಮಠಕ್ಕೆ ಹಿಂತಿರುಗಿಸಿದರು.

ಪೂಜ್ಯರಿಂದ ಆಶೀರ್ವಾದ:

ಇದೇ ಸಂದರ್ಭದಲ್ಲಿ ವೇದಿಕೆಯ ಮೇಲೆ ಹತ್ತಕ್ಕೂ ಹೆಚ್ಚು ಪೂಜ್ಯರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಹೂವು ಸುರಿದು ಮಂತ್ರಪಠಣೆ ಮಾಡಿ ಆಶೀರ್ವದಿಸಿದರು. ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಎಂ.ಡಿ.ಲಕ್ಷ್ಮೀ ನಾರಾಯಣ್, ಜಿಪಂ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ, ಬಿಜೆಪಿ ಬೆಂ.ಗ್ರಾ.ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ರೈತಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ.ಬೃಂಗೇಶ್, ಎನ್ ಪಿಎ ಮಾಜಿ ಅಧ್ಯಕ್ಷ ಕೆ.ಪಿ.ಆನಂದ್, ಮುಖಂಡರಾದ ಸತೀಶ್, ಕೆ.ಪಿ.ನಂದೀಶ್, ತೀರ್ಥೆಶ್, ಅರುಣ್ ಸೇರಿದಂತೆ 15ಕ್ಕೂ ಅಧಿಕ ಮಠಾಧೀಶರು ಉಪಸ್ಥಿತರಿದ್ದರು.

ಪೋಟೋ 4 :

ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪಾಲನಹಳ್ಳಿ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶನೇಶ್ವರಸ್ವಾಮಿ ಮಠದ ಶಿವರಾತ್ರಿ ಜಾತ್ರಾ ಉತ್ಸವ ಮತ್ತು ಧಾರ್ಮಿಕ ಸಮಾರಂಭವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಶಿವಗಂಗೋತ್ರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.