ಬೆಂಗಳೂರು : ಹಳ್ಳಿಕಾರ ಸಮುದಾಯವನ್ನು ‘ಪ್ರವರ್ಗ 3ಎ’ ಗೆ ಸೇರಿಸಿದ್ದು ಸರಿಯಲ್ಲ. ‘ಪ್ರವರ್ಗ 1’ಕ್ಕೆ ಸೇರಿಸಬೇಕೆಂಬ ಬೇಡಿಕೆ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ವರದಿ ತರಿಸಿಕೊಂಡು ನಂತರ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.
‘ರಾಜ್ಯ ಹಳ್ಳಿಕಾರರ ಸಂಘ’ ಭಾನುವಾರ ನಗರದಲ್ಲಿ ಆಯೋಜಿಸಿದ್ದ ಹಳ್ಳಿಕಾರ ಸಮುದಾಯದ ಸಮಾವೇಶ ಉದ್ಘಾಟಿಸಿ ಹಳ್ಳಿಕಾರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಅವರು ಮಾತನಾಡಿದರು.
ಹಳ್ಳಿಕಾರ ಸಮುದಾಯವನ್ನು ಪ್ರವರ್ಗ 3ಎ ಯಿಂದ ಪ್ರವರ್ಗ 1ಕ್ಕೆ ಸೇರಿಸಬೇಕು ಎನ್ನುವ ಬೇಡಿಕೆ ಇದೆ. ಈ ಸಮುದಾಯವನ್ನು ಪ್ರವರ್ಗ 3ಎ ಗೆ ಸೇರಿಸಿರುವುದು ಸರಿಯಲ್ಲ. ಆದ್ದರಿಂದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ನಿಮ್ಮ ಬೇಡಿಕೆ ಕಳುಹಿಸಿ ಅಧ್ಯಯನ ಮಾಡಿಸಿ ವರದಿ ಪಡೆಯಲಾಗುವುದು. ಬಳಿಕ ಸಮುದಾಯಕ್ಕೆ ನ್ಯಾಯಯುತವಾಗಿ ಏನು ಸಲ್ಲಬೇಕು ಎನ್ನುವುದನ್ನು ಪರಿಶೀಲಿಸಲಾಗುವುದು. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿರುವ ವ್ಯಾಪ್ತಿಯೊಳಗೆ ಹಳ್ಳಿಕಾರ ಸಮುದಾಯ ಬರುತ್ತದೆಯೇ ಎಂಬ ಬಗ್ಗೆ ಪರಿಶೀಲಿಸಬೇಕಿದೆ ಎಂದು ಅವರು ತಿಳಿಸಿದರು.
ಜಾತಿ ತಾರತಮ್ಯದ ವ್ಯವಸ್ಥೆಯಲ್ಲಿ ಶಿಕ್ಷಣ ಇಲ್ಲದಿದ್ದರೆ ಸಮಾಜದ ಮುಖ್ಯವಾಹಿನಿಯಲ್ಲಿ ಸಮರ್ಥವಾಗಿರುವುದು ಕಷ್ಟ. ಸಮಾಜದಲ್ಲಿ ಜಾತಿಗಳ ಆರ್ಥಿಕ, ಸಾಮಾಜಿಕ ಸ್ಥಿತಿ ಗತಿ ತಿಳಿಯಲು ಜಾತಿ ಸಮೀಕ್ಷಾ ವರದಿಗಳು ಮುಖ್ಯ. 2011ರಲ್ಲಿ ನಡೆದ ಜನಗಣತಿಯೇ ಕೊನೆ ಗಣತಿ. ಈಗ ನಮ್ಮ ಸರ್ಕಾರ ಜಾತಿ ಗಣತಿ ವರದಿಯನ್ನು ಸ್ವೀಕರಿಸಿದೆ ಎಂದರು.
ಇದಕ್ಕೂ ಮುನ್ನ ಮಾತನಾಡಿದ ಕರ್ನಾಟಕ ರಾಜ್ಯ ಹಳ್ಳಿಕಾರ ಸಂಘದ ಉಪಾಧ್ಯಕ್ಷ ಕೆ.ಎಂ.ನಾಗರಾಜ್, ನಮ್ಮ ಸಮುದಾಯ ನಿರಂತರವಾಗಿ ಅನ್ಯಾಯಕ್ಕೊಳಗಾಗಿದೆ. ಸರ್ಕಾರದ ಸೌಲಭ್ಯ, ಸವಲತ್ತುಗಳಿಂದ ವಂಚಿತವಾಗುತ್ತಾ ಬಂದಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕವಾಗಿಯೂ ಬಹಳ ಹಿಂದುಳಿದಿದೆ. ಸಮುದಾಯವನ್ನು ಪ್ರವರ್ಗ 1ಕ್ಕೆ ಸೇರಿಸಬೇಕು. ಕ್ಷೀಣಿಸುತ್ತಿರುವ ಹಳ್ಳಿಕಾರ ಮತ್ತು ಅಮೃತ್ ಮಹಲ್ ತಳಿಗಳ ರಕ್ಷಣೆ, ಆ ತಳಿಗಳ ಪೋಷಣೆಗಾಗಿ ಇದ್ದ ಕಾವಲುಗಳ ಸಂರಕ್ಷಣೆ ಹಾಗೂ ಸಮುದಾಯದ ನೈಪುಣ್ಯತೆಯನ್ನು ಸದುಪಯೋಗಪಡಿಸಿಕೊಳ್ಳಲು ಅನುವಾಗುವಂತೆ ‘ಹಳ್ಳಿಕಾರ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ರಾಜ್ಯ ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಸಚಿವರುಗಳಾದ ರಾಮಲಿಂಗಾರೆಡ್ಡಿ, ಡಿ.ಸುಧಾಕರ್, ಶಾಸಕರಾದ ಎಸ್.ಟಿ ಸೋಮಶೇಖರ್, ಎಂ.ಕೃಷ್ಣಪ್ಪ, ಪ್ರಿಯಕೃಷ್ಣ, ಹಳ್ಳಿಕಾರ ಸಮುದಾಯದ ಪದಾಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ನಾನು, ಸಿಎಂ ಹಳ್ಳಿಕಾರ ಸಮಾಜದವರು: ಡಿಕೆಶಿ
‘ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರೂ ಹಳ್ಳಿಕಾರ ಸಮಾಜದವರು. ನಮ್ಮ ಸರ್ಕಾರ ಹಳ್ಳಿಕಾರ ಸಮುದಾಯದ ಜೊತೆಗಿದೆ. ನಿಮ್ಮ ಎಲ್ಲಾ ಬೇಡಿಕೆಗಳ ಬಗ್ಗೆ ಚರ್ಚೆ ನಡೆಸಿ ಶೀಘ್ರ ಈಡೇರಿಸಲಾಗುವುದು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
80 ವರ್ಷಗಳ ನಂತರ ಕೆ.ಎಂ. ನಾಗರಾಜು ಅವರ ಮುಖಂಡತ್ವದಲ್ಲಿ ಹಳ್ಳಿಕಾರ ಸಮಾವೇಶ ನಡೆಯುತ್ತಿದೆ. 80 ವರ್ಷಗಳ ನಂತರ ಜೊತೆಗೂಡಲು ಪ್ರಾರಂಭ ಮಾಡಿದ್ದೀರಿ. ಇದರಿಂದ ಪ್ರಗತಿ, ಯಶಸ್ಸು ಸಾಧ್ಯವಿದೆ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಘಟನೆಗೆ ಹಾಗೂ ಸಮಾಜಕ್ಕೆ ಹೊಸ ರೂಪ ಸಿಗಲಿ. ಈ ಸಮುದಾಯಕ್ಕೆ 1,200 ವರ್ಷಗಳ ಇತಿಹಾಸವಿದೆ. ರಾಸುಗಳನ್ನು ಸಂರಕ್ಷಿಸುತ್ತಿರುವ ಸಮಾಜದ ಯಶಸ್ಸು ಹಾಗೂ ಏಳಿಗೆಗೆ ನಾವು ಕೈ ಜೋಡಿಸುತ್ತೇವೆ ಎಂದು ಹೇಳಿದರು.