ಮಕ್ಕಳಿಗೆ ಸಂಸ್ಕಾರ ಕಲಿಸುವ ಪ್ರಯತ್ನ ಮಾಡಿ

KannadaprabhaNewsNetwork | Published : Feb 12, 2025 12:31 AM

ಸಾರಾಂಶ

ಸೊರಬ: ಬದುಕಿನಲ್ಲಿ ಸಿಗದಿರುವುದರ ಕಡೆ ಚಿಂತಿಸುತ್ತಾ ಬದುಕಿನ ಆನಂದದ ಕ್ಷಣಗಳನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ದೊರಕುವ ಸಂತೃಪ್ತ ಕ್ಷಣಗಳನ್ನು ಅನುಭವಿಸುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸೊರಬ: ಬದುಕಿನಲ್ಲಿ ಸಿಗದಿರುವುದರ ಕಡೆ ಚಿಂತಿಸುತ್ತಾ ಬದುಕಿನ ಆನಂದದ ಕ್ಷಣಗಳನ್ನು ಹಾಳು ಮಾಡಿಕೊಳ್ಳುವುದಕ್ಕಿಂತ ದೊರಕುವ ಸಂತೃಪ್ತ ಕ್ಷಣಗಳನ್ನು ಅನುಭವಿಸುವ ಪ್ರಯತ್ನ ಮಾಡಬೇಕು. ಆಗ ಮಾತ್ರ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ ಎಂದು ಸಮಾಧಾನ ಹಿರೇಮಠ ಜಡೆ ಬಂಕಸಾಣ ಹಾಗೂ ಸೊರಬ ಕಾನುಕೇರಿ ಮಠದ ಘನಬಸವ ಅಮರೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲೂಕಿನ ಕಮನವಳ್ಳಿ ಗ್ರಾಮದಲ್ಲಿ ಹಲವಾರು ಗ್ರಾಮಗಳ ಆರಾಧ್ಯ ದೇವರಾದ ಬ್ರಹ್ಮ ದೇವರ ಪೂಜಾ ಕಾರ್ಯಕ್ರಮ ಹಾಗೂ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ನಾವು ಸಂಪತ್ತು ಸಂಗ್ರಹಿಸುವಲ್ಲಿ ಬಹಳ ಆಸಕ್ತಿ ತೋರುತ್ತೇವೆ. ಆಸ್ತಿ ಗಳಿಸುವಲ್ಲಿ ಗಮನ ಹರಿಸುತ್ತೇವೆ. ಹಲವಾರು ಪದಕ ಪಾರಿತೋಷಕ ಪಡೆಯಲು ಶ್ರಮಿಸುತ್ತೇವೆ. ಆದರೆ ಈ ಎಲ್ಲವುಗಳ ನಡುವೆ ಬದುಕಿನ ಆಯಾ ಸಂದರ್ಭಗಳಲ್ಲಿ ದೊರಕುವ ಆನಂದದ ಕ್ಷಣಗಳನ್ನು ಅನುಭವಿಸುವುದನ್ನು ಮರೆಯುತ್ತೇವೆ. ಏಕೆಂದರೆ ಬದುಕನ್ನು ರೂಪಿಸಿಕೊಳ್ಳುವ ನೀತಿಯಲ್ಲಿ ನಾವು ಜಾರಿದ್ದೇವೆ. ಎಲ್ಲವೂ ತಮ್ಮವೇ ಆಗಬೇಕೆನ್ನುವ ದುರಾಸೆಯೂ ಇದಕ್ಕೆ ಕಾರಣವಾಗಿದೆ ಎಂದರು. ಬದುಕು ಬಹು ಸುಂದರವಾದದು. ಅದನ್ನು ಆಸ್ವಾದಿಸಬೇಕು. ಮಕ್ಕಳಿಗೆ ಆಸ್ತಿಯ ಅಡಿಪಾಯಕ್ಕಿಂತ ಅಸ್ತಿತ್ವದ ಅಡಿಪಾಯ ಅವರ ಜೀವನವನ್ನು ಹೆಚ್ಚು ಬಲಗೊಳಿಸುತ್ತದೆ. ಮಕ್ಕಳು ಆಸ್ತಿಯ ವಾರಸುದಾರರು ಆಗುವುದಕ್ಕಿಂತಲೂ ಸಂಸ್ಕಾರ ಕಟ್ಟಿ ಸರಿದಾರಿಗೆ ತೋರುವ ವಾರಸೂಧಾರಾರಾಗಬೇಕು. ಅದಕ್ಕಾಗಿ ಪೋಷಕರೆಲ್ಲರೂ ಸಂಸ್ಕಾರ, ಸಂಸ್ಕೃತಿ ಕಲಿಸುವ ಪ್ರಯತ್ನ ಮಾಡಬೇಕು ಎಂದರು.ದುಗ್ಲಿ ಹಾಗೂ ಕಡೆ ನಂದಿಹಳ್ಳಿ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮನುಷ್ಯ ಭಕ್ತಿಯನ್ನು ಮಾಡಬೇಕು. ಭಕ್ತಿ ಭಗವಂತನನ್ನು ಒಳಿಸಿಕೊಳ್ಳಲು ಮೂಲ ಸಾಧನ. ಇಲ್ಲಿಯ ಭಕ್ತರು ಭಕ್ತಿಗೆ ಕಾರಣರಾಗಿದ್ದಾರೆ ಎಂದರು.ಬೀದರ್ ಜಿಲ್ಲೆ ಭಾತಾಂಬ್ರದ ಜಗದ್ಗುರು ಶೂನ್ಯ ಸಿಂಹಾಸನ ಪೀಠದ ಉತ್ತರಾಧಿಕಾರಿ ಡಾ.ಗುರುಬಸವ ದೇವರು ಮಾತನಾಡಿದರು. ಪ್ರಾತಃ ಕಾಲದಲ್ಲಿ ಸ್ವಾಮಿಯ ಮೂರ್ತಿಗೆ ಅಭಿಷೇಕ, ಅಷ್ಟೊತ್ತರ, ಪೂಜಾದಿ ಸೇವೆ ನಡೆದವು. ಕಾರ್ಯಕ್ರಮದಲ್ಲಿ ಪುಟ್ಟರಾಜಗೌಡ್ರು, ನಾಗರಾಜಗೌಡ್ರು, ಯುವರಾಜಗೌಡ್ರು, ಬರಮಗೌಡ್ರು, ರಾಜುಗೌಡ್ರು, ದೇಸಾಯಿ ಗೌಡ್ರು, ನೀಕಂಠಗೌಡ್ರು, ಗುರುನಾಥಗೌಡ್ರು, ನಿಂಗಪ್ಪಗೌಡ್ರು ಹಾಗೂ ಸಮಿತಿಯ ಸರ್ವ ಸದಸ್ಯರು ಊರ ಗ್ರಾಮಸ್ಥರು ಹಾಗೂ ದಾನಿಗಳು ಹಾಜರಿದ್ದರು. ನಂತರ ಮಹಾಪ್ರಸಾದ ವಿತರಿಸಲಾಯಿತು.

Share this article