ಶಿರಸಿ: ರಾಜ್ಯ ಸರ್ಕಾರ ಅಡಕೆ ಬೆಳೆಗಾರರ ನೆರವಿಗೆ ಬರಲೇಬೇಕಿದೆ. ಕೇವಲ ರಾಜ್ಯ ಸರ್ಕಾರದಿಂದ ಮಾತ್ರ ಸಾಧ್ಯವಾಗದಿದ್ದರೆ ಕೇಂದ್ರಕ್ಕೆ ಅಡಕೆ ಬೆಳೆಗಾರರ ಪರವಾಗಿ ಶಿಫಾರಸು ಮಾಡಲಿ. ಅಡಕೆ ಬೆಳೆಯುವ ಕ್ಷೇತ್ರಗಳ ಸಂಸದರು ನಾವು ಸಂಸತ್‌ನಲ್ಲಿ ಅಡಕೆ ಬೆಳೆಗಾರರ ಪರವಾಗಿ ಮಾತನಾಡಲಿದ್ದೇವೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಶನಿವಾರ ನಗರದ ಟಿಆರ್‌ಸಿ ಸಭಾಭವನದಲ್ಲಿ ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ ಹಾಗೂ ಅಡಕೆ ಮತ್ತು ಸಾಂಬಾರು ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯದ ಸಹಕಾರದಲ್ಲಿ ಅಡಕೆ ಹಾಗೂ ಕಾಳು ಮೆಣಸಿನಲ್ಲಿ ರೋಗ ಮತ್ತು ಕೀಟ ನಿರ್ವಹಣೆಗೆ ಸುಸ್ಥಿರ ಬೇಸಾಯ ಕ್ರಮಗಳು ಹಾಗೂ ಉಪಬೆಳೆಗಳ ಕುರಿತ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಇರುವುದರಿಂದ ಈ ತೊಡಕನ್ನು ಮೊದಲು ನಿವಾರಿಸಬೇಕಿದೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಅಲ್ಲ ಎಂಬ ಅಂಶವನ್ನು ವಿಶ್ವ ಆರೋಗ್ಯ ಸಂಸ್ಥೆಗೂ ಮನವರಿಕೆ ಮಾಡಿಕೊಡಬೇಕಿದೆ. ಈ ಕುರಿತ ಸಂಶೋಧನೆಗಾಗಿ ಕೇಂದ್ರ ಸರ್ಕಾರ ₹೧೦ ಕೋಟಿ ನೆರವು ನೀಡಿದೆ ಎಂದರು.
ಇನ್ನೊಂದೆಡೆ ಅಡಕೆ ಬೆಳೆ ವಿಸ್ತರಣೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೊರಗಿನ ಜಿಲ್ಲೆ, ರಾಜ್ಯದ ರೈತರಿಗೆ ಆದಾಯ ಜಾಸ್ತಿ ಬರುವ ಬೇರೆ ಬೆಳೆ ಬಗ್ಗೆ ತಿಳಿಸಿ, ಬೆಳೆಯಲು ಉತ್ತೇಜಿಸಬೇಕಾಗಿದೆ. ಇನ್ನೊಂದೆಡೆ ಅಡಕೆಯ ಅಕ್ರಮ ಆಮದೂ ಮಾರುಕಟ್ಟೆ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಡಕೆ ಆಮದಿನ ಮೇಲೆ ಕೇಂದ್ರ ಸರ್ಕಾರ ಶೇ. ೩೫೦ರಷ್ಟು ತೆರಿಗೆ ವಿಧಿಸಿದ್ದರೂ, ಅಕ್ರಮವಾಗಿ ದೇಶದೊಳಗೆ ತರುತ್ತಿರುವುದು ಸಮಸ್ಯೆ ಆಗಿದೆ. ರಾಜ್ಯ, ಕೇಂದ್ರ ಸೇರಿ ಹೇಗೆ ನಿಯಂತ್ರಣ ಮಾಡಬಹುದು ಎಂಬ ಬಗ್ಗೆ ಚಿಂತಿಸಬೇಕಿದೆ. ಅದೇ ರೀತಿ ಅಡಕೆ ಕೃಷಿಯಲ್ಲೂ ಯಂತ್ರೋಪಕರಣಗಳ ಇನ್ನಷ್ಟು ಶೋಧನೆ ನಡೆಸಿ ಖರ್ಚನ್ನೂ ಕಡಿಮೆಗೊಳಿಸಬೇಕಾಗಿದೆ ಎಂದರು.ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಮಾತನಾಡಿ, ರೈತರಲ್ಲಿರುವ ಕೃಷಿ ಜ್ಞಾನ ಕೃಷಿ ವಿಜ್ಞಾನಿಗಳಿಗೂ ತಲುಪಬೇಕು. ಬೆಳೆಗಳಿಗೆ ಯೋಗ್ಯ ಬೆಲೆ ಸಿಕ್ಕರೆ ರೈತರೂ ಸಾಲ ಮನ್ನಾ ಬಗ್ಗೆ ಆಗ್ರಹಿಸುವುದಿಲ್ಲ. ಅಡಕೆ ಬೆಳೆಗಾರರಿಗೆ ಈ ವರ್ಷ ಕಷ್ಟದ ಕಾಲ. ಅತಿ ಮಳೆಯಿಂದ ಅಡಕೆ ಬೆಳೆಗಾರರು ಕಷ್ಟಕ್ಕೆ ಬಿದ್ದಿದ್ದಾರೆ ಎಂದರು.
ಸಿಪಿಸಿಆರ್‌ಐ ನಿರ್ದೇಶಕ ಬಾಲಚಂದ್ರ ಹೆಬ್ಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಡಕೆಯಲ್ಲಿ ಕುಬ್ಜ ತಳಿ ಸಂಶೋಧನೆ ಆಗಿದ್ದರೂ ನಿರೀಕ್ಷಿತ ಫಸಲು ಇರಲಿಲ್ಲ. ಪ್ಲಾಂಟೇಶನ್ ಕ್ರಾಪ್‌ಗಳೂ ಹವಾಮಾನ ವೈಪರೀತ್ಯದಿಂದಾಗಿ ಕೆಲ ರೋಗ ತಿಳಿಯುವುದಕ್ಕೂ ಮುನ್ನವೇ ವೇಗವಾಗಿ ಹಬ್ಬುತ್ತಿದೆ. ಎಲೆಚುಕ್ಕಿ ರೋಗ ಇದೇ ಮಾದರಿಯಲ್ಲಿ ಹಬ್ಬಿದೆ. ಎಲೆಚುಕ್ಕಿ ನಿಯಂತ್ರಣಕ್ಕೆ ತೋಟವನ್ನು ಯಾವ ರೀತಿ ನಿರ್ವಹಣೆ ಮಾಡಬೇಕು ಎಂಬುದೂ ಮುಖ್ಯವಾಗುತ್ತದೆ.ಚೈನೀಸ್ ರಿಂಗ್ ಸ್ಪಾಟ್ ವೈರಸ್ ಉತ್ತರಕನ್ನಡ, ಬೆಳ್ತಂಗಡಿಯಲ್ಲೂ ಕಾಣಿಸಿಕೊಂಡಿದೆ. ಈ ವೈರಸ್ ಬಗ್ಗೆ ಇನ್ನಷ್ಟು ಶೋಧ ಆಗಬೇಕು. ಹರಡುವಿಕೆಯ ಕೀಟ ಯಾವುದು ಎಂಬುದನ್ನು ಶೋಧ ಮಾಡುತ್ತಿದ್ದೇವೆ. ಅಡಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ಆರೋಪ ಸದಾ ಕೇಳಿಬರುತ್ತಿದೆ. ಬೇರೆ ವಸ್ತುಗಳ ಜತೆ ಮಿಶ್ರಣ ಮಾಡಿ ಅಡಕೆ ಬಳಸುವುದರಿಂದ ಆರೋಗ್ಯ ಸಮಸ್ಯೆ ಉಂಟಾಗಿದೆ ಹೊರತು ಅಡಕೆಯನ್ನಷ್ಟೇ ಬಳಸಿದವರು ಆರೋಗ್ಯವಾಗಿದ್ದಾರೆ. ಈ ಕುರಿತೂ ಸಂಶೋಧನೆ ನಡೆಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಟಿಎಂಎಸ್ ಅಧ್ಯಕ್ಷ ಜಿ.ಟಿ. ಹೆಗಡೆ ತಟ್ಟಿಸರ, ಟಿಆರ್‌ಸಿ ಅಧ್ಯಕ್ಷ ಶ್ರೀಪಾದ ಹೆಗಡೆ ಕಡವೆ, ಸಾಂಬಾರು ಮಂಡಳಿ ಉಪನಿರ್ದೇಶಕ ಬಾಬುಲಾಲ್ ಮೀನಾ, ಶಂಭುಲಿಂಗ ಹೆಗಡೆ, ಸತೀಶ ಹೆಗಡೆ, ರೂಪಾ ಪಾಟೀಲ ಮತ್ತಿತರರು ಇದ್ದರು.