ತುಬಚಿ-ಬಬಲೇಶ್ವರ ಏತ ನೀರಾವರಿ: ನೀರೆತ್ತುವ ಕಾರ್ಯ ಸ್ಥಗಿತ; ರೈತರ ಸಂಭ್ರಮ

KannadaprabhaNewsNetwork | Published : Mar 23, 2025 1:37 AM

ಸಾರಾಂಶ

ಜಮಖಂಡಿ: ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವುದನ್ನು ಶನಿವಾರ ಬೆಳಗ್ಗೆ 7.45ರ ಸುಮಾರಿಗೆ ಸ್ಥಗಿತಗೊಳಿಸಲಾಗಿದೆ. 16 ಸಾವಿರ ಅಶ್ವಶಕ್ತಿಯ ಎರಡು ಪಂಪ್‌ಗಳ ಸಹಾಯದಿಂದ ನೀರೆತ್ತಲಾಗುತ್ತಿತ್ತು, ಪ್ರತಿ ಸೆಕೆಂಡಿಗೆ 175 ಕ್ಯುಸೆಕ್‌ ನೀರು ಹರಿದು ಹೋಗಿದೆ.

ಕನ್ನಡಪ್ರಭ ವಾರ್ತೆ ಜಮಖಂಡಿ

ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ನೀರೆತ್ತುವುದನ್ನು ಶನಿವಾರ ಬೆಳಗ್ಗೆ 7.45ರ ಸುಮಾರಿಗೆ ಸ್ಥಗಿತಗೊಳಿಸಲಾಗಿದೆ. ರೈತರ ಹೋರಾಟಕ್ಕೆ ಮಣಿದು ಅಧಿಕಾರಿಗಳು ನೀರೆತ್ತುವುದನ್ನು ನಿಲ್ಲಿಸಿದ್ದಾರೆಯೋ ಅಥವಾ ತಾಂತ್ರಿಕ ತೊಂದರೆ, ಇಲ್ಲವೆ ನದಿಯಲ್ಲಿ ಪಂಪ್‌ ಮಾಡಲು ಬೇಕಾಗುವಷ್ಟು ನೀರಿಲ್ಲದ ಕಾರಣ ಸ್ಥಗಿತ ಗೊಳಿಸಲಾಗಿದೆಯೋ ಎಂಬುವುದು ತಿಳಿದುಬಂದಿಲ್ಲ.16 ಸಾವಿರ ಅಶ್ವಶಕ್ತಿಯ ಎರಡು ಪಂಪ್‌ಗಳ ಸಹಾಯದಿಂದ ನೀರೆತ್ತಲಾಗುತ್ತಿತ್ತು, ಪ್ರತಿ ಸೆಕೆಂಡಿಗೆ 175 ಕ್ಯುಸೆಕ್‌ ನೀರು ಹರಿದು ಹೋಗುತ್ತಿತ್ತು. ಆದರೆ ನದಿ ಪಾತ್ರದಲ್ಲಿ ಇಷ್ಟು ಪ್ರಮಾಣದ ನೀರಿಲ್ಲದ ಕಾರಣ ಪೈಪ್‌ಲೈನ್‌ಗಳಲ್ಲಿ ಹವಾ ತುಂಬಿಕೊಂಡು ನೀರು ಹರಿಯಲು ತೊಂದರೆ ಆಗುತ್ತಿತ್ತು, ಪಂಪ್‌ಗಳನ್ನು ಇದ್ದ ಸ್ಥಿತಿಯಲ್ಲಿ ಮುಂದುವರಿಸಿದರೆ ಪೈಪ್‌ಲೈನ್‌ಗಳು ಒಡೆದು ಹೋಗುವ ಸಾಧ್ಯತೆ ಹೆಚ್ಚಾಗಿದ್ದರಿಂದ ನೀರೆತ್ತುವ ಕಾರ್ಯ ನಿಲ್ಲಿಸಲಾಗಿದೆ ಎಂದು ಪರಿಣಿತರ ತರ್ಕವಾಗಿದೆ.

ಸತ್ಯಾಸತ್ಯತೆ ಏನೇ ಇದ್ದರೂ ಸದ್ಯಕ್ಕೆ ನೀರೆತ್ತುವ ಕಾರ್ಯ ಸ್ಥಗಿತವಾಗಿರುವುದರಿಂದ ರೈತರು ಸಂತಸಗೊಂಡಿದ್ದಾರೆ. ಅಧಿಕಾರಿಗಳು ಸಹ ರೈತರ ಒತ್ತಾಯಕ್ಕೆ ಮಣಿದು ನೀರೆತ್ತುವ ಕಾರ್ಯ ನಿಲ್ಲಿಸಲಾಗಿದೆ. ರೈತರ ಹೋರಾಟ ತೀವ್ರ ಸ್ವರೂಪ ಪಡೆದು ಶಾಂತಿ ಸುವ್ಯವಸ್ಥೆಗೆ ಭಂಗ ಬರುವ ಸಾಧ್ಯತೆ ಇದೆ ಎಂದು ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರಿಂದ ನೀರೆತ್ತುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಆಲಗೂರಿನ ಗೌಡರಗಡ್ಡೆ ಪ್ರದೇಶದಲ್ಲಿ ಜಮಾಯಿಸಿದ ರೈತರು ಸಮಾವೇಶ ನಡೆಸಿ ನೀರೆತ್ತುವುದನ್ನು ನಿಲ್ಲಿಸಿದ ಕ್ರಮವನ್ನು ಸ್ವಾಗತಿಸಿದರು. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿ ಹೋರಾಟ ಮುಂದುವರಿಸುವುದಾಗಿ ನಿರ್ಣಯ ತೆಗೆದುಕೊಂಡರು. ಸರ್ಕಾರ ಕೊಯ್ನಾ ಡ್ಯಾಂನಿಂದ ನೀರು ಬಿಡಿಸಲು ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಸಂಗಮೇಶ ನಿರಾಣಿ, ಯೊಗಪ್ಪ ಸೌದಿ, ಸುಶೀಲ ಕುಮಾರ ಬೆಳಗಲಿ, ಪ್ರಸನ್ನ ಜಮಖಂಡಿ, ಸುರೇಶ ಹಂಚಿನಾಳ, ಧರೆಪ್ಪ ದಾನಗೌಡ(ಡಿಡಿ), ಮಲ್ಲುದಾನಗೌಡ, ಬಿ.ಟಿ. ಪಾಟೀಲ, ಅಡಿವೆಪ್ಪ ಚಾಮೊಜಿ, ಅಣ್ಣುಗೌಡ ಪಾಟೀಲ, ರಾಕೇಶ ಪತ್ತಾರ, ಸಿದ್ದು ತುಪ್ಪದ, ಸಿದ್ದು ಅಜ್ಜಣ್ಣವರ, ಹಿರೇಪಡಸಲಗಿಯ ಮಹಾದೇವ ಮೂಡಲಗಿ, ಸಿದ್ದುಗೌಡ ಪಾಟೀಲ ಇತರರು ಇದ್ದರು. ಡಿವೈಎಸ್‌ಪಿ, ಸೈಯದ್‌ ರೋಶನ್‌ ಜಮೀರ್‌, ಸಿಪಿಐ ಮಲ್ಲಪ್ಪ ಮಡ್ಡಿ. ಪಿಎಸ್‌ಐಗಳಾದ ಅನೀಲ ಕುಂಬಾರ, ಪೂಜಾರ, ಸಾವಳಗಿ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಸೇರಿದಂತೆ ಹಲವು ಅಧಿಕಾರಿಗಳು ಬಿಗಿಬಂದೋಬಸ್ತ್‌ ಏರ್ಪಡಿಸಿದ್ದರು.

ಬೇಸಿಗೆಯಲ್ಲಿ ನದಿಯಲ್ಲಿ ನೀರು ಉಳಿಯುವಂತೆ ಕ್ರಮ ಕೈಗೊಳ್ಳಲಾಗುವುದು. ಮಹಾರಾಷ್ಟ್ರದಿಂದ ನದಿಗೆ ನೀರು ಬಿಡಿಸಲು ಪ್ರಯತ್ನ ಮಾಡುತ್ತಿದ್ದೇವೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ.

-ಸದಾಶಿವ ಮಕ್ಕೊಜಿ ತಹಸೀಲ್ದಾರ್‌ ಜಮಖಂಡಿ

Share this article