ಕೊಟ್ಟೂರು : ಈ ಬಾರಿಯ ಲೋಕಸಭೆ ಚುನಾವಣೆಯ ಬಳ್ಳಾರಿ ಕ್ಷೇತ್ರದಲ್ಲಿ ಕೌರವ ಮತ್ತು ಪಾಂಡವರ ನಡುವೆ ಸ್ಪರ್ಧೆ ಏರ್ಪಟಿದ್ದು, ಕೌರವರ ದುಷ್ಟ ಸಂಹಾರ ಆಗುವ ಮೂಲಕ ಸಾತ್ವಿಕ ನೆಲೆಯ ಕಾಂಗ್ರೆಸ್ ಅಭ್ಯರ್ಥಿ ಸಂಡೂರು ಶಾಸಕ ಈ.ತುಕಾರಾಂ ಎರಡು ಲಕ್ಷ ಮತಗಳ ಲೀಡ್ ನೊಂದಿಗೆ ಜಯಭೇರಿ ಬಾರಿಸಲಿದ್ದಾರೆ ಎಂದು ಕೆಎಂಎಫ್ ಅಧ್ಯಕ್ಷ ಎಸ್.ಭೀಮಾನಾಯ್ಕ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಪಟ್ಟಣದ ವರ್ತಕ ಕೆ.ಎನ್. ಕೊಟ್ರೇಶ ಗೌಡ ನಿವಾಸದಲ್ಲಿ ಆಯೋಜನೆಗೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಬಿಜೆಪಿಯಿಂದ ಈ ಹಿಂದೆ ಲೋಕಸಭೆಗೆ ಆಯ್ಕೆಗೊಂಡಿದ್ದ ಬಿಜೆಪಿಯ ಸುಷ್ಮಾ ಸ್ವರಾಜ್, ಶ್ರೀರಾಮುಲು, ಜೆ.ಶಾಂತ, ವೈ.ದೇವೇಂದ್ರಪ್ಪ ಜಿಲ್ಲೆಯ ಜನತೆಯ ಸಹಾನುಭೂತಿಯನ್ನು ರಾಜಕೀಯವಾಗಿ ಲಾಭ ಮಾಡಿಕೊಳ್ಳುವುದಕ್ಕೆ ಮಾತ್ರ ಬಳಸಿಕೊಂಡರೆ ಹೊರತು ಜಿಲ್ಲೆಯ ಅಭಿವೃದ್ಧಿಗೆ ಯಾವುದೇ ಕೊಡುಗೆ ನೀಡಿದ ಒಂದೇ ಒಂದು ಉದಾಹರಣೆ ಇಲ್ಲ ಎಂದರು.
ಇವರ ಈ ರೀತಿಯ ಬೇಜವಾಬ್ದಾರಿ ತನಕ್ಕೆ ಈ ಸಲದ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಸೂಕ್ತ ರೀತಿಯಲ್ಲಿ ಉತ್ತರಿಸಿ ಸರಳತೆಯ ಮತ್ತು ಉತ್ತಮ ಕಾರ್ಯ ಸಾಧಕ ಕಾಂಗ್ರೆಸ್ ಅಭ್ಯರ್ಥಿ ತುಕರಾಂ ಅವರನ್ನು ಗೆಲ್ಲಿಸಲು ಮುಂದಾಗಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿಯವರು ಸುಳ್ಳಿನ ಸರಮಾಲೆಯನ್ನೇ ಹರಿಸಿದ್ದಾರೆ. ಪ್ರಧಾನಿ ಮೋದಿ ತಾವು ಹಿಂದೆ ದೇಶದ ಜನರಿಗೆ ನೀಡಿದ ವಾಗ್ದಾನದಂತೆ ಪ್ರತಿಯೊಬ್ಬರ ಬ್ಯಾಂಕ್ ಅಕೌಂಟಿಗೆ ₹15 ಲಕ್ಷ ಹಾಕುವ ಭರವಸೆ ಈಡೇರಿಸದೇ ವಂಚಿಸಿದ್ದಾರೆ ಎಂದು ಆರೋಪಿಸಿದ ಅವರು, ಎರಡು ಲಕ್ಷ ಉದ್ಯೋಗ ಸೃಷ್ಟಿ ಮಾಡುವ ಮಾತನ್ನು ಸಹ ಈಡೇರಿಸಲು ಮುಂದಾಗದೇ ದೇಶದ ಯುವಕರಿಗೆ ಪಕೋಡ ಮಾರಿ ಉದ್ಯೋಗ ಕಟ್ಟಿಕೊಳ್ಳಿ ಎಂದು ಹಂಗಿಸುವ ಮಾತನಾಡಿದ್ದಾರೆ ಎಂದು ಅವರು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಧಿಕಾರ ವಹಿಸಿಕೊಂಡ ದಿನದಿಂದಲೇ 5 ಗ್ಯಾರಂಟಿಗಳನ್ನು ಜಾರಿಗೆ ತರುವ ಇಚ್ಛಾಶಕ್ತಿ ತೋರಿ ಜನತೆಯ ವಿಶ್ವಾಸ ಉಳಿಸಿಕೊಂಡಿದ್ದರೆ ಮೋದಿ ನೀಡಿದ ನೂರಾರು ಭರವಸೆಗಳ ಪೈಕಿ ಒಂದನ್ನು ಸಹ ಈಡೇರಿಸಲು ಮುಂದಾಗದೆ ಜನತೆಗೆ ಮಂಕುಬೂದಿ ಎರಚಿದ್ದಾರೆ ಎಂದು ಅವರು ದೂರಿದರು.ಇದಕ್ಕೂ ಮೊದಲು ಮಾಜಿ ಶಾಸಕ ಎಸ್.ಭೀಮಾನಾಯ್ಕ ಯುಗಾದಿ ಅಮವಾಸ್ಯೆ ನಿಮಿತ್ತ ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ತೆರಳಿ ಆರ್ಶೀವಾದ ಪಡೆದುಕೊಂಡರು.
ಧರ್ಮಕರ್ತ ಎಂ.ಕೆ. ಶೇಖರಯ್ಯ , ಎಂ.ಓ. ಕೊಟ್ರಯ್ಯ ಮತ್ತಿತರರು ಮಾಜಿ ಶಾಸಕ ಎಸ್. ಭೀಮಾನಾಯ್ಕರಿಗೆ ಶಾಲು ಹೊದಿಸಿ ಸನ್ಮಾನಿಸಿದರು.
ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ , ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐ.ದಾರುಕೇಶ್, ಕೆ.ಎನ್. ಕೊಟ್ರೇಶ್, ಅಕ್ಕಿ ತೋಟೇಶ್, ಪವಾಡಿ ಹನುಮಂತಪ್ಪ, ಡಿಶ್ ಮಂಜುನಾಥ, ಅಡಿಕಿ ಮಂಜುನಾಥ, ಆರ್.ಎಂ. ಗುರು, ಪಪಂ ಸದಸ್ಯ ಜಗದೀಶ್, ಮಾಜಿ ಸದಸ್ಯ ಚಿರಿಬಿ ಕೊಟ್ರೇಶ್, ಎಂ.ರಾಮಣ್ಣ, ಬಾಲಕೃಷ್ಣ ಬಾಬು, ಮಂಜುನಾಥಗೌಡ, ಕನ್ನೆಹಳ್ಳಿ ರಾಜೇಂದ್ರಗೌಡ ಇದ್ದರು.