ತುಳು ಭಾಷೆಯನ್ನು ಕರ್ನಾಟಕ ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಬಗ್ಗೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಅಧ್ಯಯನ ತಂಡ ರಚನೆ ಮಾಡುವುದಾಗಿ ತಿಳಿಸಿದೆ. ಈ ತಂಡದಲ್ಲಿ ಕರ್ನಾಟಕ ತುಳು ಅಕಾಡೆಮಿ ಸದಸ್ಯರನ್ನು ನೇಮಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ, ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡಪ್ರಭ ವಾರ್ತೆ ಪುತ್ತೂರು
ತುಳು ಭಾಷೆಯನ್ನು ಕರ್ನಾಟಕ ಎರಡನೇ ಅಧಿಕೃತ ಭಾಷೆಯನ್ನಾಗಿಸುವ ಬಗ್ಗೆ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿದ್ದು, ಇದಕ್ಕಾಗಿ ಅಧ್ಯಯನ ತಂಡ ರಚನೆ ಮಾಡುವುದಾಗಿ ತಿಳಿಸಿದೆ. ಈ ತಂಡದಲ್ಲಿ ಕರ್ನಾಟಕ ತುಳು ಅಕಾಡೆಮಿ ಸದಸ್ಯರನ್ನು ನೇಮಿಸುವಂತೆ ಪುತ್ತೂರು ಶಾಸಕ ಅಶೋಕ್ ರೈ, ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.ಬೆಂಗಳೂರಿನಲ್ಲಿ ಶುಕ್ರವಾರ ಮುಖ್ಯ ಕಾರ್ಯದರ್ಶಿಯವರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಶಾಸಕರು ಹೊರ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆಯನ್ನು ಅಲ್ಲಿನ ಅಧಿಕೃತ ಭಾಷೆಯನ್ನಾಗಿ ರೂಪಿಸಿದ್ದಾರೆ. ಅಧಿಕೃತ ಭಾಷೆಯನ್ನಾಗಿ ರೂಪಿಸುವಲ್ಲಿ ಅಲ್ಲಿನ ಸರ್ಕಾರ ತೆಗೆದುಕೊಂಡ ನಿರ್ಣಯಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ರಾಜ್ಯ ಸರ್ಕಾರದಿಂದ ಅಧಿಕೃತ ಅಧ್ಯಯನ ತಂಡ ತೆರಳಲಿದ್ದು, ಈ ತಂಡದಲ್ಲಿ ಅಧಿಕಾರಿಗಳ ಜೊತೆ ಕರ್ನಾಟಕ ತುಳು ಅಕಾಡೆಮಿ ಸದಸ್ಯರನ್ನು ಸೇರಿಸಿಕೊಳ್ಳುವುದು ಮತ್ತು ಶೀಘ್ರವೇ ಅಧ್ಯಯನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವಲ್ಲಿ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ತಿಳಿಸಿದ್ದಾರೆ.ನನ್ನದೇನು ಅಡ್ಡಿಯಿಲ್ಲ ಎಂದಿದ್ದ ಮುಖ್ಯಮಂತ್ರಿಗಳು: ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ತುಳುವನ್ನು ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವುದರಲ್ಲಿ ನನ್ನದೇನು ಅಭ್ಯಂತರವಿಲ್ಲ, ತುಳು ಅಧಿಕೃತ ಭಾಷೆಯಾದರೂ ಮಾತನಾಡುವ ಭಾಷೆ ಎಲ್ಲರದ್ದೂ ಕನ್ನಡವಾಗಿರಬೇಕು, ವ್ಯವಹಾರಿಕ ಭಾಷೆಯೂ ಕನ್ನಡದಲ್ಲಿರಬೇಕು ಎಂದು ಹೇಳಿದ್ದರು. ಎರಡನೇ ಅಧಿಕೃತ ಭಾಷೆಯನ್ನಾಗಿ ಘೋಷಣೆ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ರೈ ಅವರು ಅಧಿವೇಶನದಲ್ಲಿ ಮಾತನಾಡಿದ್ದನ್ನು ಮುಖ್ಯಮಂತ್ರಿಗಳು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಉದ್ಘಾಟನಾ ಸಭೆಯಲ್ಲಿ ಪ್ರಸ್ತಾಪಿಸಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.