ಶಾಲಾ ಮಕ್ಕಳ ಕರೆದೊಯ್ಯುತ್ತಿದ್ದ ಟಂ ಟಂ ಪಲ್ಟಿ: ಮೂವರು ಮಕ್ಕಳಿಗೆ ಗಾಯ

KannadaprabhaNewsNetwork | Published : Sep 11, 2024 1:12 AM

ಸಾರಾಂಶ

Tum tum carrying school children overturns: Three children injured

-ಶಹಾಪುರದ ನಗರದ ಖಾಸಗಿ, ಡಿಡಿಯು ಶಿಕ್ಷಣ ಸಂಸ್ಥೆಯ ಮಕ್ಕಳಿಗೆ ಗಾಯ

----

ಕನ್ನಡಪ್ರಭ ವಾರ್ತೆ ಶಹಾಪುರ

ಸೆ.5 ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಬಳಿ ನಡೆದ ಶಾಲಾ ಮಕ್ಕಳ ಬಸ್ ಅಪಘಾತ ದುರ್ಘಟನೆಯ ಸುದ್ದಿ ಮಾಸುವ ಮುನ್ನ, ಶಹಾಪುರದಲ್ಲೂ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೋ ರಿಕ್ಷಾವೊಂದು ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಪರಿಣಾಮ, ಮೂವರು ವಿದ್ಯಾರ್ಥಿಗಳು ಗಾಯಗೊಂಡಿರುವ ಘಟನೆ ನಗರದ ಜೆಸ್ಕಾಂ ಕಚೇರಿ ಹತ್ತಿರ ಮಂಗಳವಾರ ಬೆಳಿಗ್ಗೆ ಸಂಭವಿಸಿದೆ.

ಆಟೋದಲ್ಲಿ 10ಕ್ಕೂ ಹೆಚ್ಚು ಶಾಲಾ ಮಕ್ಕಳು ಸಂಚರಿಸುತ್ತಿದ್ದು, ಈ ಪೈಕಿ ಮೂವರಿಗೆ ಗಾಯಗಳಾಗಿವೆ. ಇಬ್ಬರನ್ನು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಮತ್ತು ಒಬ್ಬರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಎಂದಿನಂತೆ ಆಟೋದಲ್ಲಿ ಶಾಲಾ ಮಕ್ಕಳನ್ನು ಕರೆದುಕೊಂಡು ನಗರದ ಡಿಡಿಯು ಪಬ್ಲಿಕ್ ಶಾಲೆಗೆ ಹೋಗುತ್ತಿದ್ದ ವೇಳೆ, ರಸ್ತೆ ದಾಟುವಾಗ ಎದುರುಗಡೆಯಿಂದ ಬೈಕ್ ವೇಗವಾಗಿ ಬರುತ್ತಿರುವುದನ್ನು ನೋಡಿ ಗಾಬರಿಯಿಂದ ಚಾಲಕ ನಿಯಂತ್ರಣ ತಪ್ಪಿದ ಹಿನ್ನೆಲೆ ಆಟೋ ಪಲ್ಟಿಯಾಗಿದೆ. ತಕ್ಷಣ ಧಾವಿಸಿದ ಸಾರ್ವಜನಿಕರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಧಿಕಾರಿಗಳ ವಿರುದ್ಧ ಜನ ಆಕ್ರೋಶ : ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಿಂದ ಶಾಲಾ ಮಕ್ಕಳನ್ನು ಆಟೋರಿಕ್ಷಾ ಮತ್ತು ಟಂ ಟಂಗಳಲ್ಲಿ ಬೇಕಾಬಿಟ್ಟಿ ಮಕ್ಕಳನ್ನು ಕುರಿ ತುಂಬಿದಂತೆ ತುಂಬಿಕೊಂಡು ದಿನನಿತ್ಯ ಶಾಲೆಗಳಿಗೆ ಬರುತ್ತಿದ್ದಾರೆ. ನಿತ್ಯ ಪೊಲೀಸರ ಕಣ್ಣು ಮುಂದೆ ಆಟೋಗಳು ಸಂಚಾರ ಮಾಡಿದರೂ ಪೊಲೀಸರು ಕಂಡು ಕಾಣದಂತಿರುತ್ತಾರೆ. ಮರಳು ಲಾರಿ, ಬೈಕ್ ಹಿಡಿದು ವಸುಲಿ ದಂಧೆಯಲ್ಲಿ ನಿರತರಾಗಿದ್ದಾರೆ. ಇನ್ನು ಆರ್ ಟಿಒ ಅಧಿಕಾರಿಗಳು ಕಾಟಾಚಾರಕ್ಕೆ ತಿಂಗಳಿಗೋ, ಎರಡು ತಿಂಗಳಿಗೋ ಒಂದು ಸಲ ರಸ್ತೆಯಲ್ಲಿ ನಿಂತು ಮುಖ ತೋರಿಸಿ ಬಂದಷ್ಟು ಬಾಚಿಕೊಂಡು ಹೋಗುತ್ತಾರೆ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.

ಇನ್ನು ಶಾಲಾ ವಾಹನಗಳಲ್ಲಿಯೂ ಸಂಚಾರ ನಿಯಮ ಪಾಲಿಸದೆ, ನಿಯಮ ಉಲ್ಲಂಘಿಸಿ ಮಕ್ಕಳ ಪಾಲಕರಿಂದ ಹೆಚ್ಚಿಗೆ ಹಣ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ಇಂಥ ಘಟನೆಗಳು ನಡೆಯದಂತೆ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಮತ್ತು ಇದಕ್ಕೆ ಸಂಬಂಧಪಟ್ಟವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಹ್ಮದ್ ಇಸ್ಮೈಲ್ ತಿಮ್ಮಪುರಿ ಮನವಿ ಪತ್ರ ಸಲ್ಲಿಸಿದ್ದಾರೆ.

-----

10ವೈಡಿಆರ್15: ಶಹಾಪುರ ನಗರದಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಆಟೋ ಪಲ್ಟಿಯಾಗಿ ಬಿದ್ದಿರುವುದು.

----

10ವೈಡಿಆರ್16: ಶಹಾಪುರ ನಗರದ ಸಾರ್ವಜನಿಕ ಅಸ್ಪತ್ರೆಯಲ್ಲಿ ಶಾಲಾ ವಿದ್ಯಾರ್ಥಿಗಳು ಚಿಕಿತ್ಸೆ ಪಡೆಯುತ್ತಿರುವುದು.

Share this article