ಕನ್ನಡಪ್ರಭ ವಾರ್ತೆ, ತುಮಕೂರುಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ ಅವರು ಮಂಗಳವಾರ ತುಮಕೂರು ದಸರಾ-2026ರ ಲಾಂಛನ ಬಿಡುಗಡೆ ಮಾಡಿದರು.ನಗರದ ಜಿಲ್ಲಾ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಲಾಂಛನ ಬಿಡುಗಡೆ ಮಾಡಿದ ನಂತರ ಮಾತನಾಡಿದ ಅವರು, ಕಳೆದ ವರ್ಷಗಳಲ್ಲಿ ವಿನ್ಯಾಸಗೊಳಿಸಿದ್ದ ದಸರಾ ಲಾಂಛನವನ್ನೇ ಈ ಬಾರಿಯೂ ದಸರಾ ಉತ್ಸವದ ಲಾಂಛನವನ್ನಾಗಿ ಬಳಸಲಾಗುವುದು ಎಂದು ತಿಳಿಸಿದರು. ಈ ಬಾರಿಯ ತುಮಕೂರು ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುವುದು. ದಸರಾ ಪ್ರಯುಕ್ತ ಏರ್ಪಡಿಸಲಾಗುವ ವಸ್ತುಪ್ರದರ್ಶನದಲ್ಲಿ ಎಐ, ಆಧುನಿಕ ತಂತ್ರಜ್ಞಾನ ಅಭಿವೃದ್ಧಿ ಬಗ್ಗೆ ಅವಕಾಶ ಕಲ್ಪಿಸಲಾಗುವುದು. ಸುಮಾರು 2 ಸಾವಿರ ಕ್ಕೂ ಹೆಚ್ಚು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಅವರು ಹೇಳಿದರು.
ನಗರದ ಡಾ: ಶಿವಕುಮಾರ ಸ್ವಾಮೀಜಿ ವೃತ್ತವನ್ನು ತುಮಕೂರು ಸೆಂಟರ್ ಆಫ್ ಅಟ್ರಾಕ್ಷನ್ ಆಗಿ ಅಭಿವೃದ್ಧಿಪಡಿಸುವ ಉದ್ದೇಶವಿದೆ. ಇದಕ್ಕೆ ಅಗತ್ಯವಿರುವ ಕೆಲವು ವಸ್ತುಗಳನ್ನು ಚೀನಾದಿಂದ ತರಿಸಲಾಗುತ್ತಿದೆ. ತುಮಕೂರನ್ನು ವಿಶೇಷವಾಗಿ ಗುರುತಿಸುವಂತಹ ಹೊಸ ಪ್ರಯತ್ನಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಮಕ್ಕಳು ಹಾಗೂ ವಾಹನಗಳ ಬಗ್ಗೆ ಆಸಕ್ತಿ ಹೊಂದಿರುವವರನ್ನು ಆಕರ್ಷಿಸಲು ಮಾಡರ್ನ್ ಕಾರುಗಳ ಶೋ ಆಯೋಜಿಸಲಾಗುತ್ತಿದೆ. ಇಂತಹ ಹೊಸ ಪ್ರಯತ್ನಗಳ ಮೂಲಕ ದಸರಾ ಉತ್ಸವಕ್ಕೆ ಮತ್ತಷ್ಟು ಮೆರುಗು ತರುವ ಮೂಲಕ ಜಿಲ್ಲೆಯ ಸಂಸ್ಕೃತಿ, ನಾಗರಿಕತೆ ಹಾಗೂ ಪರಂಪರೆಯನ್ನು ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುವುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಶಾಸಕ ಜ್ಯೋತಿ ಗಣೇಶ್, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಜಿ. ಚಂದ್ರಶೇಖರ್ ಗೌಡ, ಬಿಎಂಟಿಸಿ ಉಪಾಧ್ಯಕ್ಷ ನಿಕೇತ್ ರಾಜ್ ಎಂ., ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತೆ ಶುಭಾ, ಅಪರ ಜಿಲ್ಲಾಧಿಕಾರಿ ಡಾ.ಎನ್. ತಿಪ್ಪೇಸ್ವಾಮಿ ಸೇರಿದಂತೆ ಉಪವಿಭಾಗಾಧಿಕಾರಿ ನಾಹಿದಾ ಜಮ್ ಜಮ್, ಸೇರಿದಂತೆ ಹಲವು ಗಣ್ಯರು ಹಾಗೂ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.