ನಾಯಿ ದಾಳಿ ಪ್ರಕರಣ: ಚಿಕಿತ್ಸೆ ವೆಚ್ಚ ಪಾಲಿಕೆ ಭರಿಸಲಿ

KannadaprabhaNewsNetwork | Published : Jul 17, 2024 12:48 AM

ಸಾರಾಂಶ

ಬೀದಿ ನಾಯಿಯ ದಾಳಿಗೆ ತುತ್ತಾಗಿರುವ ಬಾಲಕನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ

ಕನ್ನಡಪ್ರಭ ವಾರ್ತೆ ತುಮಕೂರು

ಬೀದಿ ನಾಯಿಯ ದಾಳಿಗೆ ತುತ್ತಾಗಿರುವ ಬಾಲಕನ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಸಂಪೂರ್ಣ ಚಿಕಿತ್ಸೆಯ ವೆಚ್ಚವನ್ನು ತುಮಕೂರು ಮಹಾನಗರಪಾಲಿಕೆ ಭರಿಸಬೇಕು. ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಸಿಪಿಐ (ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್‌ ಮುಜೀಬ್ ಆಗ್ರಹಿಸಿದರು. ನಗರದ ಪಾಲಿಕೆ ಎದುರು ಪ್ರತಿಭಟನೆ ನಡೆಸಿದ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ತುಮಕೂರು ನಗರ ಸ್ಮಾರ್ಟ್ ಸಿಟಿಯಾಗಿದೆ. ಆದರೆ ತುಮಕೂರು ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕವಾಗಿ ಪಶು ವಿಭಾಗ ಮತ್ತು ಅರಣ್ಯ ವಿಭಾಗಗಳಿಲ್ಲ. ಅದನ್ನು ತಕ್ಷಣ ಪ್ರಾರಂಬಿಸಬೇಕು. ನಾಯಿ ದಾಳಿಯಿಂದ ಗಾಯಗೊಂಡ ಮಗುವಿಗೆ ಚಿಕಿತ್ಸೆ ನೀಡಬೇಕಾದ ಜಿಲ್ಲಾಸ್ಪತ್ರೆಯಲ್ಲಿ ಸರ್ಜನ್ ಇಲ್ಲ ಮೂಲ ಸೌಲಭ್ಯಗಳಿಲ್ಲದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಷ್ಟು ದೊಡ್ಡ ನಗರದಲ್ಲಿ ಸುಸಜ್ಜಿತ ಜಿಲ್ಲಾಸ್ಪತ್ರೆ ಇಲ್ಲದೇ ಇರುವುದು ನಾಚಿಕೆಗೇಡಿನ ಸಂಗತಿ ಎಂದರು.

ಸಿಪಿಐ ಎಂ ನಗರ ಕಾರ್ಯದರ್ಶಿ ಎ. ಲೋಕೇಶ್ ಮಾತನಾಡಿ ನಗರದ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಶಾಲೆಗೆ ಹೋಗುವ ಮಕ್ಕಳು ಭಯದಿಂದಲೇ ಶಾಳೆಗಳಿಗೆ ತೆರಳಬೇಕಾಗಿದೆ, ವಯೋವೃದ್ಧರು, ವಾಯುವಿಹಾರಕ್ಕೆ ತೆರಳುವವರು ಸಹ ಭಯಪಡಬೇಕಾದ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ ಎಂದರು.

ಮಾಜಿ ಸಚಿವ ಸೊಗಡು ಶಿವಣ್ಣ ಮಾತನಾಡಿ, ಇದು ಜನಪರವಾದ ಹೋರಾಟವಾಗಿದ್ದು ಬೆಂಬಲಿಸುವುದಾಗಿ ತಿಳಿಸಿದರು. ಕೋಳಗೇರಿ ನಿವಾಸಿಗಳ ಸಂಘದ ಮುಖಂಡ ಅನುಪಮ ಮಾತನಾಡಿ, ಕೋತಿತೋಪು ಸೇರಿದಂತೆ ಹಲವು ಬಡಾವಣೆಗಳಲ್ಲಿ ಬೀದಿನಾಯಿಗಳ ಹಾವಳಿ ಜಾಸ್ತಿಯಾಗಿದ್ದು ಚಿಕ್ಕ ಮಕ್ಕಳ ಮೇಲೆ ಎರಗಿರುವ ಸಾಕಷ್ಟು ಉದಾಹರಣೆಗಳಿವೆ ಇದಕ್ಕೆ ಮಹಾನಗರಪಾಲಿಕೆ ಕಡಿವಾಣ ಹಾಕಬೇಕು ಎಂದರು. ಯುವ ಮುಖಂಡ ಸುಜೀತ್‌ನಾಯಕ್ ಮಾತನಾಡಿ, ಕೈಗಾರಿಕೆಗಳಿದ ರಾತ್ರಿ ಪಾಳಯದ ಕೆಲಸ ಮುಗಿಸಿ ಬರುವವರು ಭಯದಿಂದಲೇ ಮನೆಗೆ ತೆರಳಬೇಕಾಗಿದೆ. ಮಳೆಗಾಲವಾದ್ದರಿಂದ ನಾಯಿಗಳ ಹಾವಳಿಗೆಯಿಂದ ತಪ್ಪಿಸಿಕೊಳ್ಳಲು ಹೋಗಿ ಬಿದ್ದು ಆಸ್ಪತ್ರೆ ಸೇರಿರುವ ಉದಾಹರಣೆಗಳು ಇವೆ. ತುಮಕೂರು ನಗರ ಶಾಸಕರು ಸೂಕ್ತ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಯ ಉನ್ನತಿಗೆ ಕ್ರಮವಹಿಸಬೇಕು ಎಂದರು.

ಮರಳೂರು ದಿಣ್ಣೆ ಸರ್ಕಾರಿ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಕ್‌ದುಮ್‌ಅಲಿ ಮಾತನಾಡಿ, ನಮ್ಮ ಶಾಲೆಗೆ ಸುಮಾರು ೩೦೦ ಜನ ವಿದ್ಯಾರ್ಥಿಗಳ ಬರುತ್ತಿದ್ದು ಈ ಭಾಗದಲ್ಲಿ ನಾಯಿಗಳ ಹಾವಳಿ ತುಂಬಾ ಇದೆ ಇದನ್ನು ನಿಯಂತ್ರಿಸಬೇಕು ಎಂದರು.

ಜನವಾದಿ ಮಹಿಳಾ ಸಂಘಟನೆಯ ಟಿ.ಆರ್. ಕಲ್ಪನಾ, ಶಂಕರಪ್ಪ, ಆಲ್ತಾಫ್, ರಾಘವೇಂದ್ರ ಎಸ್, ಪಂಡಿತ್ ಜವಾಹರ್, ಅರುಣ್, ಖುದ್ದುಸ್ ಕೃಷ್ಣಮೂರ್ತಿ, ಮುಬಾರಕ್, ತಾಜುದ್ದೀನ್, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

Share this article