ತುಂಬೆ ಗ್ರೂಪ್ ವೈದ್ಯಕೀಯ ಸಂಶೋಧನೆ ಮತ್ತು ನಾವೀನ್ಯತೆ ಉತ್ತೇಜಿಸುವ ತನ್ನ ಬದ್ಧತೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಅಜ್ಮಾನ್‌ನ ಅಲ್ ಜುಫ್‌ರ್ನಲ್ಲಿ ಆರು ಮಹಡಿಗಳ ಸುಸಜ್ಜಿತ ತುಂಬೆ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದೆ.
ಮಂಗಳೂರು: ತುಂಬೆ ಗ್ರೂಪ್ ವೈದ್ಯಕೀಯ ಸಂಶೋಧನೆ ಮತ್ತು ನಾವೀನ್ಯತೆ ಉತ್ತೇಜಿಸುವ ತನ್ನ ಬದ್ಧತೆಯಲ್ಲಿ ಒಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಅಜ್ಮಾನ್‌ನ ಅಲ್ ಜುಫ್‌ರ್ನಲ್ಲಿ ಆರು ಮಹಡಿಗಳ ಸುಸಜ್ಜಿತ ತುಂಬೆ ಅಂತಾರಾಷ್ಟ್ರೀಯ ಸಂಶೋಧನಾ ಕೇಂದ್ರಕ್ಕೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿದೆ.
ವೈಜ್ಞಾನಿಕ ಆವಿಷ್ಕಾರ, ರೋಗನಿರ್ಣಯ (ಡಯಾಗ್ನಾಸ್ಟಿಕ್ಸ್) ಮತ್ತು ಕ್ಲಿನಿಕಲ್ ಆರೈಕೆಯನ್ನು ಒಂದೇ ಸೂರಿನಡಿ ಸಂಯೋಜಿಸುವಂತೆ ಈ ಕೇಂದ್ರವನ್ನು ವಿನ್ಯಾಸಗೊಳಿಸಲಾಗಿದೆ. ಸಂಶೋಧಕರು, ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ನಡುವೆ ತಡೆರಹಿತ ಸಹಯೋಗವನ್ನು ಈ ಕೇಂದ್ರ ಬೆಳೆಸಲಿದೆ.ಅಜ್ಮಾನ್‌ನ ಕ್ರೌನ್ ಪ್ರಿನ್ಸ್ ಮತ್ತು ಅಜ್ಮಾನ್ ಕಾರ್ಯಕಾರಿ ಮಂಡಳಿ ಅಧ್ಯಕ್ಷ ಶೇಖ್ ಅಮ್ಮಾರ್ ಬಿನ್ ಹುಮೈದ್ ಅಲ್ ನುಐಮಿ ಶಂಕುಸ್ಥಾಪನೆ ನೆರವೇರಿಸಿದರು. ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ ಡಾ.ತುಂಬೆ ಮೊಯ್ದೀನ್ ಅಧ್ಯಕ್ಷತೆ ವಹಿಸಿದ್ದರು. ಗಲ್ಫ್ ಮೆಡಿಕಲ್ ಯುನಿವರ್ಸಿಟಿ ಕುಲಪತಿ ಪ್ರೊ.ಮಂದಾ ವೆಂಕಟರಮಣ, ಸಂಸ್ಥೆ ನಿರ್ದೇಶಕ ಪ್ರೊ.ಸಲೀಂ ಚೌಯಿಬ್ ಇದ್ದರು.ನೆಲಮಹಡಿಯಲ್ಲಿ 110 ಆಸನಗಳ ಸೆಮಿನಾರ್ ಹಾಲ್ ಮತ್ತು ಹಂಚಿಕೆಯ ಇಮೇಜಿಂಗ್ ಕೋರ್ ಸೌಲಭ್ಯ, ಮೊದಲ ಮಹಡಿಯಲ್ಲಿ ಸ್ಟಾರ್ಚ್-ಅಪ್ ಪ್ರಯೋಗಾಲಯಗಳು, ಇನ್‌ಕ್ಯುಬೇಶನ್ ಸೆಂಟರ್ ಮತ್ತು ಸುಧಾರಿತ ಪ್ರಯೋಗಾಲಯ, 2ನೇ ಮಹಡಿಯಲ್ಲಿ ಸಾಮಾನ್ಯ ವೆಟ್ ಪ್ರಯೋಗಾಲಯ ಹೊಂದಲಿದೆ.3ನೇ ಮಹಡಿ ಕ್ಯಾನ್ಸರ್ ಸಂಶೋಧನೆಗಾಗಿ ಮೀಸಲು, 4ನೇ ಮಹಡಿ ಜೀನೋಮಿಕ್ಸ್, ನೆಕ್ಸ್ಟ್‌ಜನರೇಷನ್ ಸೀಕ್ವೆನ್ಸಿಂಗ್ , 5ನೇ ಮಹಡಿ ಪ್ರಾಣಿಗಳ ಸೌಲಭ್ಯ ಮತ್ತು ಸಂಶೋಧನಾ ಘಟಕ ಒಳಗೊಂಡಿದೆ. ಈ ಅಂತಾರಾಷ್ಟ್ರಿಯ ಸಂಶೋಧನಾ ಕೇಂದ್ರವು ಗಲ್ಫ್ ಮೆಡಿಕಲ್ ಯುನಿವರ್ಸಿಟಿಯ ಸಂಶೋಧನಾ ವಿಭಾಗದ ಕಾಯಂ ನೆಲೆಯಾಗಿ ಕಾರ್ಯನಿರ್ವಹಿಸಲಿದೆ. ಇದು ವಿಶ್ವವಿದ್ಯಾಲಯದ ಮೆಡಿಸಿನ್, ಡೆಂಟಲ್, ಫಾರ್ಮಸಿ, ಹೆಲ್ತ್ ಸೈನ್ಸಸ್, ನರ್ಸಿಂಗ್, ವೆಟರ್ನರಿ ಮೆಡಿಸಿನ್ ಮತ್ತು ಎಐ ಇನ್ ಹೆಲ್ತ್‌ಕೇರ್ ಕಾಲೇಜುಗಳ ಅಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿಗಳಿಗೆ ಬೆಂಬಲ ನೀಡಲಿದೆ. ಇದುವರೆಗೆ ವಿಶ್ವವಿದ್ಯಾಲಯದ ಅಸ್ತಿತ್ವದಲ್ಲಿರುವ ಸೌಲಭ್ಯಗಳೊಳಗೆ ಕಾರ್ಯನಿರ್ವಹಿಸುತ್ತಿದ್ದ ತುಂಬೆ ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ್ ಪ್ರೆಸಿಶನ್ ಮೆಡಿಸಿನ್ ಈ ಹೊಸ ಕೇಂದ್ರಕ್ಕೆ ಸ್ಥಳಾಂತರವಾಗಲಿದೆ.ವೃತ್ತಿಪರರೊಂದಿಗೆ ಜತೆಯಾಗಿ ಕೆಲಸ: ಅಲ್ ಜುಫ್‌ರ್ನಲ್ಲಿ ನಿರ್ಮಾಣವಾಗುತ್ತಿರುವ ಈ ಕೇಂದ್ರ ನೆಲಮಹಡಿ, ಐದು ಮೇಲಿನ ಮಹಡಿಗಳು ಮತ್ತು ರೂಫ್‌ಟಾಪ್ ಸೇರಿದಂತೆ ಸುಮಾರು 32,283 ಚದರ ಅಡಿ ವಿಸ್ತೀರ್ಣ ಹೊಂದಿದ್ದು, 27.75 ಮೀಟರ್ ಎತ್ತರಕ್ಕೆ ತಲೆಯೆತ್ತಲಿದೆ. ಸಕ್ರಿಯ ಆರೋಗ್ಯ ಮತ್ತು ಶೈಕ್ಷಣಿಕ ಪರಿಸರ ವ್ಯವಸ್ಥೆಯೊಳಗೆ ನೆಲೆಗೊಂಡಿರುವ ಈ ಕೇಂದ್ರ, ತನ್ನ ಕಾರ್ಯಾಚರಣೆಯ ಮೊದಲ ದಿನದಿಂದಲೇ ಸಂಶೋಧನಾ ತಂಡಗಳು ವೈದ್ಯಕೀಯ ವೃತ್ತಿಪರರೊಂದಿಗೆ ಜತೆಯಾಗಿ ಕೆಲಸ ಮಾಡಲು ಅನುವು ಮಾಡಿಕೊಡುತ್ತದೆ.
ಕಳೆದ ಮೂರು ದಶಕಗಳಲ್ಲಿ ತುಂಬೆ ಗ್ರೂಪ್ ಆಸ್ಪತ್ರೆಗಳು, ಆರೋಗ್ಯ ಸೇವೆಗಳು ಮತ್ತು ಗಲ್ಫ್ ಪ್ರದೇಶದಲ್ಲೇ ಅತಿ ದೊಡ್ಡದಾದ ಹಾಗೂ ನಂ.1 ಖಾಸಗಿ ವೈದ್ಯಕೀಯ ವಿಶ್ವವಿದ್ಯಾಲಯವನ್ನು ನಿರ್ಮಿಸಲು ಹೂಡಿಕೆ ಮಾಡಿದೆ. ಆವಿಷ್ಕಾರ, ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಒಂದೇ ಸೂರಿನಡಿ ತರುವುದು ನಮ್ಮ ಉದ್ದೇಶ.- ಡಾ.ತುಂಬೆ ಮೊಯ್ದೀನ್, ತುಂಬೆ ಗ್ರೂಪ್ ಸಂಸ್ಥಾಪಕ ಅಧ್ಯಕ್ಷ
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.