ಅಡಕೆ ಗುಣಮಟ್ಟ ರಕ್ಷಣೆಯಲ್ಲಿ ತುಮ್ಕೋಸ್‌ ರಾಜಿಯಾಗಲ್ಲ

KannadaprabhaNewsNetwork |  
Published : Sep 03, 2024, 01:34 AM IST
ಇಲ್ಲಿನ ತುಮ್ ಕೋಸ್ ಸಂಸ್ಥೆಯ 40ನೇ ವಾರ್ಷಿಕ ಮಹಾಸಭೆಯ ಉದ್ಘಾಟನೆಯನ್ನು ನೆರವೇರಿಸಿದ ಸಂಸ್ಥೆಯ ಅಧ್ಯಕ್ಷ ಆರ್.ಎಂ.ರವಿ | Kannada Prabha

ಸಾರಾಂಶ

ದೇಶದಲ್ಲಿಯೇ ಮಧ್ಯ ಕರ್ನಾಟಕ ಭಾಗದ ಅಡಕೆಗೆ ಅತಿ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಚನ್ನಗಿರಿ ತಾಲೂಕಿನ ಅಡಕೆಗೆ ಉತ್ತಮ ಬೇಡಿಕೆ ಇದೆ. ಅಡಕೆ ಬೆಳೆಗಾರರು ಸಹಾ ಉತ್ತಮ ಗುಣಮಟ್ಟದ ಅಡಕೆ ಉತ್ಪಾದಿಸಲು ಮುಂದಾಗಬೇಕಾಗಿದೆ. ಗುಣಮಟ್ಟ ಕಾಪಾಡುವಿಕೆಯಲ್ಲಿ ತುಮ್ಕೋಸ್‌ ಸಂಸ್ಥೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂಸ್ಥೆ ಅಧ್ಯಕ್ಷ ಆರ್.ಎಂ.ರವಿ ಚನ್ನಗಿರಿಯಲ್ಲಿ ಹೇಳಿದರು.

- ಚನ್ನಗಿರಿಯಲ್ಲಿ ತುಮ್ಕೋಸ್‌ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಆರ್.ಎಂ.ರವಿ - - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದೇಶದಲ್ಲಿಯೇ ಮಧ್ಯ ಕರ್ನಾಟಕ ಭಾಗದ ಅಡಕೆಗೆ ಅತಿ ಹೆಚ್ಚು ಬೇಡಿಕೆ ಇದೆ. ಅದರಲ್ಲೂ ಚನ್ನಗಿರಿ ತಾಲೂಕಿನ ಅಡಕೆಗೆ ಉತ್ತಮ ಬೇಡಿಕೆ ಇದೆ. ಅಡಕೆ ಬೆಳೆಗಾರರು ಸಹಾ ಉತ್ತಮ ಗುಣಮಟ್ಟದ ಅಡಕೆ ಉತ್ಪಾದಿಸಲು ಮುಂದಾಗಬೇಕಾಗಿದೆ. ಗುಣಮಟ್ಟ ಕಾಪಾಡುವಿಕೆಯಲ್ಲಿ ತುಮ್ಕೋಸ್‌ ಸಂಸ್ಥೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸಂಸ್ಥೆ ಅಧ್ಯಕ್ಷ ಆರ್.ಎಂ.ರವಿ ಹೇಳಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತುಮ್ಕೋಸ್‌ 2023-2024ನೇ ಸಾಲಿನ, 40ನೇ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ, ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚನ್ನಗಿರಿ ಭಾಗದ ಅಡಕೆ ಎಲ್ಲ ಉತ್ಪನ್ನಗಳಿಗೆ ಉಪಯೋಗಿಸಲು ಯೋಗ್ಯವಾಗಿದೆ. ಇದರ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವ ಜವಾಬ್ದಾರಿ ರೈತರ ಮೇಲಿದೆ ಎಂದರು.

ತುಮ್ಕೋಸ್‌ ಎಂಥ ಬರಗಾಲದ ಸಂದರ್ಭಗಳಲ್ಲೂ ರೈತರ ಕಷ್ಟಗಳಿಗೆ ಸ್ಪಂದಿಸಿದೆ. ಪ್ರಸ್ತುತ ರೈತರಿಗೆ ₹516 ಕೋಟಿ ಸಾಲ ನೀಡಲಾಗಿದೆ. ಸಂಸ್ಥೆಯು 4 ದಶಕಗಳನ್ನು ಪೂರೈಸಿ, 5ನೇ ದಶಕದತ್ತ ದಾಪುಗಾಲು ಇಡುತ್ತಿದೆ. ಸಂಘವು ಅತಿ ಹೆಚ್ಚು ವಹಿವಾಟು ನಡೆಸಿ, ಸದಸ್ಯರಿಗೆ ಹೊಸ ತಂತ್ರಜ್ಞಾನ ಬಳಸಿ, ಹೊಸ ಯೋಜನೆಗಳನ್ನು ರೂಪಿಸುವಲ್ಲಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ಈ ಹಿಂದಿದ್ದ ಸದಸ್ಯರ ಗುಂಪು ಅಪಘಾತ ವಿಮೆ ₹3 ಲಕ್ಷ ಯೋಜನೆಯನ್ನು ₹5 ಲಕ್ಷಕ್ಕೆ ಹೆಚ್ಚಿಸಿ, ಸದಸ್ಯರು ಹಾಗೂ ಅವಲಂಬಿತ ಕೂಲಿ ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

ಸಂಘ ವಿದ್ಯುತ್ ಬಿಲ್ ಹೆಚ್ಚು ಪಾವತಿಸುತ್ತಿದೆ. ಇದನ್ನು ಮನಗಂಡು ಸಂಘದ ಕಟ್ಟಡಗಳಾದ ಪ್ರಧಾನ ಕಚೇರಿ, ಬಸ್ ನಿಲ್ದಾಣ ಬಳಿ ಇರುವ ಗೊಬ್ಬರದ ಗೋದಾಮಿನ ಮೇಲ್ಚಾವಣಿ ಹಾಗೂ ತಾವರೆಕೆರೆ ಶಾಖೆಯ ಗೋದಾಮಿನ ಮೇಲ್ಚಾವಣಿ ಮೇಲೆ ಸೋಲಾರ್ ಪೆನಾಲ್ ಅಳವಡಿಸಿ, ವಿದ್ಯುತ್ ವೆಚ್ಚ ತಗ್ಗಿಸುವಂತಹ ಕೆಲಸ ಮಾಡಲಾಗಿದೆ. ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್ ಅನ್ನು ಬೆಸ್ಕಾಂ ಇಲಾಖೆಗೆ ₹3.75ಕ್ಕೆ ಮಾರಾಟ ಮಾಡಲಾಗುತ್ತಿದೆ ಎಂದರು.

2024- 2025ನೇ ಸಾಲಿಗೆ ನಿರೀಕ್ಷಿತ ಆದಾಯವಾಗಿ ₹68.93 ಕೋಟಿ ನಿರೀಕ್ಷಿಸಲಾಗಿದೆ. ಇದೇ ಸಾಲಿಗೆ ಬರಬಹುದಾದ ಖರ್ಚು-ವೆಚ್ಚಗಳು ₹55.02 ಕೋಟಿ ಖರ್ಚಾಗಬಹುದು ಎಂದು ಅಂದಾಜಿಸಲಾಗಿದೆ. ₹13.90 ಕೋಟಿ ಲಾಭ ನಿರೀಕ್ಷೆ ಇದೆ ಎಂದ ಅವರು, 2023- 2024ರ ಸಂಘದ ಎಲ್ಲ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಿದರು.

ಸದಸ್ಯರ ಪ್ರಶ್ನೆಗಳಿಗೆ ಸಂಸ್ಥೆ ಅಧ್ಯಕ್ಷ ಆರ್.ಎಂ.ರವಿ, ವ್ಯವಸ್ಥಾಪಕ ನಿರ್ದೇಶಕ ಮಧು ಉತ್ತರಿಸಿದರು. ನಿಧನರಾದ ಸಂಘದ ಸದಸ್ಯರಿಗೆ ಸಭೆ ಆರಂಭಕ್ಕೂ ಮುನ್ನ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಸಂಘದ ನಿರ್ದೇಶಕರಾದ ಎಚ್.ಎಸ್. ಶಿವಕುಮಾರ್, ಟಿ.ವಿ. ರಾಜು ಪಟೇಲ್, ಕೆ.ಜಿ.ಸಂತೋಷ್, ಎಂ.ಸಿ.ದೇವರಾಜ್, ಜಿ.ಸಿ.ಶಿವಕುಮಾರ್, ಜಿ.ಆರ್.ಶಿವಕುಮಾರ್, ಸುರೇಶ್ ಎಚ್., ಎ.ಎಂ. ಚಂದ್ರಶೇಖರಪ್ಪ, ಆರ್.ಕೆಂಚಪ್ಪ, ಎನ್.ಗಂಗಾಧರಪ್ಪ, ಎಂ.ಎಸ್. ರಮೇಶ್ ನಾಯ್ಕ್, ಎಂ.ಎಸ್. ದೇವೆಂದ್ರಪ್ಪ, ಆರ್.ಪಾರ್ವತಮ್ಮ, ಜಿ.ಆರ್. ಪ್ರೇಮಾ, ವ್ಯವಸ್ಥಾಪಕ ನಿರ್ದೇಸಕ ಎನ್.ಪಿ.ಮಧು ಹಾಜರಿದ್ದರು.

- - -

ಬಾಕ್ಸ್‌ * ಫೆಬ್ರವರಿಯಲ್ಲಿ ಚುನಾವಣೆ ಈಗ ನಡೆಯುತ್ತಿರುವ ವಾರ್ಷಿಕ ಮಹಾಸಭೆಯೇ ನನ್ನ ಅವಧಿಯ ಕೊನೆ ಸಭೆಯಾಗಿದೆ. ಮುಂಬರುವ ಫೆಬ್ರವರಿಯಲ್ಲಿ ನೂತನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ನಡೆಯಲಿದೆ. ನನಗೆ ಸಿಕ್ಕ 5 ವರ್ಷಗಳ ಅಧಿಕಾರದ ಅವಧಿಯಲ್ಲಿ ತುಮ್ಕೋಸ್‌ ಸಂಸ್ಥೆಗೆ ಬೇಕಾದ ಎಲ್ಲ ರೀತಿಯ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ತೃಪ್ತಿ ನನಗಿದೆ ಎಂದು ಅಧ್ಯಕ್ಷ ಆರ್.ಎಂ.ರವಿ ಹೇಳಿದರು.

- - - -1ಕೆಸಿಎನ್‌ಜಿ1:

ಚನ್ನಗಿರಿ ತುಮ್ಕೋಸ್‌ 40ನೇ ವಾರ್ಷಿಕ ಮಹಾಸಭೆ ಉದ್ಘಾಟನೆಯನ್ನು ಸಂಸ್ಥೆ ಅಧ್ಯಕ್ಷ ಆರ್.ಎಂ.ರವಿ ನೆರವೇರಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌